ಟ್ರಿನಿಟಿ ಸಮೀಪ ಮೆಟ್ರೊ ಸೇತುವೆಯಲ್ಲಿ ಸಮಸ್ಯೆ: ರೈಲು ಸಂಚಾರ ವ್ಯತ್ಯಯ

7
ಕಾಂಕ್ರಿಟ್‌ ಬೀಮ್‌ನಲ್ಲಿ ಹನಿಕಾಂಬ್ ಸಮಸ್ಯೆ

ಟ್ರಿನಿಟಿ ಸಮೀಪ ಮೆಟ್ರೊ ಸೇತುವೆಯಲ್ಲಿ ಸಮಸ್ಯೆ: ರೈಲು ಸಂಚಾರ ವ್ಯತ್ಯಯ

Published:
Updated:

ಬೆಂಗಳೂರು: ನಗರದ ಟ್ರಿನಿಟಿ ವೃತ್ತದ ಸಮೀಪ ಮೆಟ್ರೊ ಸೇತುವೆಯ ವಯಾಡಕ್ಟ್‌ ಕಾಂಕ್ರಿಟ್‌ನಲ್ಲಿ ಬಿರುಕು ಮೂಡಿದ್ದರಿಂದ (ಹನಿಕಾಂಬ್ – ಕಾಂಕ್ರಿಟ್‌ ಪದರ ಟೊಳ್ಳಾಗುವುದು) ಈ ಮಾರ್ಗದಲ್ಲಿ ಬುಧವಾರ ಮೆಟ್ರೊ ರೈಲುಗಳ ವೇಗವನ್ನು ತಗ್ಗಿಸಲಾಗಿದೆ. ಇದರಿಂದ ಮೆಟ್ರೊ ಪ್ರಯಾಣಿಕರು ಆತಂಕ ಅನುಭವಿಸಿದರಲ್ಲದೆ, ಬೆಳಗಿನ ಹೊತ್ತು ಸಕಾಲದಲ್ಲಿ ಕಚೇರಿ ತಲುಪಲು ಪರದಾಡಿದರು.

ಸಮಸ್ಯೆ ಇರುವುದು ಬೆಳಕಿಗೆ ಬಂದ ತಕ್ಷಣವೇ ತುರ್ತು ನಿರ್ವಹಣಾ ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ಕಾಮಗಾರಿಯಿಂದಾಗಿ‌ ಬೈಯಪ್ಪನಹಳ್ಳಿಯಿಂದ ಟ್ರಿನಿಟಿವರೆಗೆ ರೈಲುಗಳ ಸಂಚಾರಕ್ಕೆ ಏಕಪಥದಲ್ಲಿ (ಪ್ಲ್ಯಾಟ್‌ ಫಾರಂ ಸಂಖ್ಯೆ 1ರ ಹಳಿ ಮೇಲೆ) ಅನುವು ಮಾಡಿಕೊಡಲಾಗಿದೆ. ಟ್ರಿನಿಟಿ ನಿಲ್ದಾಣದ ಬಳಿ ಸಂಚರಿಸುವ ಸಂದರ್ಭ ರೈಲುಗಳ ವೇಗವನ್ನು 35 ಕಿಲೋಮೀಟರ್‌ಗೆ (ಸಾಮಾನ್ಯ ಸ್ಥಿತಿಯಲ್ಲಿ ಗಂಟೆಗೆ 45 ಕಿಲೋಮೀಟರ್‌ ವೇಗ) ಇಳಿಸಲಾಗಿದೆ.

‘ಏಕಪಥ ಸಂಚಾರ ಹಾಗೂ ನಿಧಾನಗತಿ ವೇಗದಿಂದ ಬೆಳಿಗ್ಗೆ 6ರಿಂದ 8.15ರವರೆಗೆ ಸುಮಾರು 7 ಟ್ರಿಪ್‌ಗಳಲ್ಲಿ ವ್ಯತ್ಯಯ ಉಂಟಾಗಿದೆ. 10.15ರ ವೇಳೆಗೆ ಸಂಚಾರ ಯಥಾಸ್ಥಿತಿಗೆ ಬಂತು. ವೇಗ ಕಡಿಮೆ ಆದ ಕಾರಣ ಒಟ್ಟಾರೆ ಸಂಚಾರದ ಅಂತರ, ಅವಧಿಯ ಮೇಲೆ ಪರಿಣಾಮವಾಗಿದೆ’ ಎಂದು ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ವೈ. ಚವಾಣ್ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

‘ನಿತ್ಯದ ತಪಾಸಣೆ ವೇಳೆ ವಯಾಡಕ್ಟ್‌ ಮೇಲೆ ಸಮಸ್ಯೆ ಕಂಡುಬಂದಿದೆ. ಅದನ್ನು ನಿವಾರಿಸಿದ್ದೇವೆ. ಪ್ರಯಾಣಿಕರು ಆತಂಕಪಡಬೇಕಿಲ್ಲ. ಕಾಂಕ್ರಿಟ್‌ನಲ್ಲಿ ಹನಿಕಾಂಬ್ ಸಮಸ್ಯೆ ಸಾಮಾನ್ಯ. ಮೆಟ್ರೊ ಮಾರ್ಗದಲ್ಲಿ ಈಗಾಗಲೇ ಎರಡು ಕಡೆ ಈ ಸಮಸ್ಯೆ ಕಂಡುಬಂದಿದೆ. ನಮ್ಮ ಜೊತೆಗೆ ಕೆಲಸ ಮಾಡುವ ಖಾಸಗಿ ಸಂಸ್ಥೆಗಳ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮತ್ತು ದೆಹಲಿ ಮೆಟ್ರೊ ತಜ್ಞರ ಜೊತೆಗೂ ದುರಸ್ತಿ ವಿಚಾರವಾಗಿ ಚರ್ಚಿಸಿದ್ದೇವೆ. ಕಾಮಗಾರಿ 7 ದಿನಗಳ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಅವರು ವಿವರಿಸಿದರು.

ಕಾಮಗಾರಿ ನೋಟ...

ಪಿಲ್ಲರ್‌ ಸಂಖ್ಯೆ 155ಕ್ಕೆ ಹೊಂದಿಕೊಂಡಿರುವ ಈ ಭಾಗದಲ್ಲಿ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ಕಬ್ಬಿಣದ ಆಧಾರ ಕಂಬಿಗಳನ್ನು ಜೋಡಿಸಲಾಗಿದೆ. ಕ್ರೇನ್‌ ಸ್ಥಳಕ್ಕೆ ಬಂದಿದೆ. ಪಿಲ್ಲರ್‌ ಸುತ್ತಮುತ್ತಲಿನ ಪ್ರದೇಶಕ್ಕೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 

ಟೀಕೆಗಳ ಸುರಿಮಳೆ

‘ಇದ್ದಕ್ಕಿದ್ದಂತೆಯೇ ರೈಲುಗಳ ಸಂಚಾರ ನಿಲ್ಲಿಸಲಾಗಿದೆ. ನಮಗೆ ಯಾವುದೇ ಮಾಹಿತಿ ಇಲ್ಲ. ಸಂದೇಶವನ್ನೂ ಭಿತ್ತರಿಸಲಿಲ್ಲ. ಮೆಟ್ರೊ ಮೂಲಕ ಬಂದು ನಗರದ ನಿಲ್ದಾಣದಿಂದ ಶತಾಬ್ದಿ ರೈಲು ಹತ್ತಬೇಕಿತ್ತು. ಅದು ತಪ್ಪಿಹೋಗಿದೆ. ಆರು ಬೋಗಿಗಳ ರೈಲು ಸಂಚಾರ ನಿಲ್ಲಿಸಲಾಗಿದೆ...’ ಹೀಗೆ ನಿಗಮದ ಕಾರ್ಯವೈಖರಿ ಬಗ್ಗೆ ಪ್ರಯಾಣಿಕರು ಟ್ವಿಟರ್ ಮೂಲಕ ತೀವ್ರ ಟೀಕಾಪ್ರಹಾರ ನಡೆಸಿದರು. ಕೆಲವರು ಮೆಟ್ರೊ ಸಮಯ ಪಾಲನೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು.  

ವೈಟ್‌ಫೀಲ್ಡ್‌ ಕಡೆಗೆ ಹೋಗುವ ಉದ್ಯೋಗಿಗಳು ಎಂ.ಜಿ.ರಸ್ತೆವರೆಗೆ ಮಾತ್ರ ಬಂದು ಮುಂದೆ ಸಾಗಲು ಬಸ್‌, ಕಾರು ಅವಲಂಬಿಸಬೇಕಾಯಿತು. ಬೈಯಪ್ಪನಹಳ್ಳಿ, ವಿವೇಕಾನಂದ ನಗರ ಕಡೆಯಿಂದ ಬಂದ ಪ್ರಯಾಣಿಕರು ಟ್ರಿನಿಟಿ ನಿಲ್ದಾಣದ ಬಳಿ ಇಳಿದು ಬಸ್‌ ಮೂಲಕ ಪ್ರಯಾಣಿಸಿದರು. ‘ಈ ಬೆಳವಣಿಗೆ ನಮ್ಮ ಒಟ್ಟಾರೆ ದಿನಚರಿ ಮೇಲೆ ಪರಿಣಾಮ ಬೀರಿದೆ’ ಎಂದು ಪ್ರಯಾಣಿಕರು ಹೇಳಿದರು. 

ಹಲಸೂರು ನಿವಾಸಿ ಜಿ. ವಿನಯ್‌ ಪ್ರತಿಕ್ರಿಯಿಸಿ , ‘25 ವರ್ಷಗಳ ಕಾಲ ಮೆಟ್ರೊ ಎತ್ತರಿಸಲ್ಪಟ್ಟ ಮಾರ್ಗಕ್ಕೆ ಯಾವುದೇ ನಿರ್ವಹಣೆ ಬೇಕಾಗಿಲ್ಲ ಎಂದು ನಿಗಮ ಹೇಳಿತ್ತು. ಆದರೆ, ಇಷ್ಟು ಬೇಗ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕಕ್ಕೀಡು ಮಾಡಿದೆ’ ಎಂದು ಅಭಿಪ್ರಾಯಪಟ್ಟರು.  

ನಿರಾಕರಿಸಿದ ನಮ್ಮ ಮೆಟ್ರೊ

ಪ್ರಯಾಣಿಕರ ಟೀಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಚವಾಣ್, ‘ಬೆಳಿಗ್ಗೆ 5.30ರಿಂದಲೇ ಎಲ್ಲ ನಿಲ್ದಾಣಗಳ ಧ್ವನಿವರ್ಧಕಗಳ ಮೂಲಕ ಪ್ರಕಟಣೆ ಕೊಟ್ಟಿದ್ದೇವೆ. ದಟ್ಟಣೆ ನಿವಾರಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ರೈಲುಗಳನ್ನು ಓಡಿಸಿದ್ದೇವೆ. 6 ಬೋಗಿಗಳ ರೈಲನ್ನು ನಿಲ್ಲಿಸಿಲ್ಲ. ನಿಗದಿಯಂತೆ ಸಂಚರಿಸುತ್ತಿದೆ’ ಎಂದು ಹೇಳಿದರು.

ಎರಡು ದಿನಗಳ ಹಿಂದೆ ಸಿಎಂಗೆ ಮಾಹಿತಿ

‘ಮೆಟ್ರೊ ಮಾರ್ಗದಲ್ಲಿ ಒಂದು ಪಿಲ್ಲರ್‌ ಬಳಿ ಬಿರುಕುಬಿಟ್ಟ ಬಗ್ಗೆ ಮೊನ್ನೆಯೇ ನನಗೆ ಮಾಹಿತಿ ಬಂದಿತ್ತು. ಈ ಬಗ್ಗೆ ತಜ್ಞರನ್ನು ಕರೆಸಿ ಮಾತನಾಡಿದ್ದೇನೆ’ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಘಟನೆ ಬಗ್ಗೆ ತಜ್ಞರು ಈಗಾಗಲೇ ಆ ಬಗ್ಗೆ ತನಿಖೆ ಮಾಡಿದ್ದಾರೆ. ಆ ಮಾರ್ಗದಲ್ಲಿ ಮೆಟ್ರೊ ಓಡಾಟ ಸ್ಥಗಿತಗೊಳಿಸಿ ಸಮಸ್ಯೆ ಬಗೆಹರಿಸಬೇಕು. ಅನಾಹುತಗಳಾಗಿ ಸಾರ್ವಜನಿಕರಿಗೆ ಸಮಸ್ಯೆಗಳಾಗಬಾರದು ಎಂದು ಸೂಚನೆ ಕೊಟ್ಟಿದ್ದೆ’ ಎಂದು ತಿಳಿಸಿದರು.

‘ಇಲ್ಲಿ ಕಾಣಿಸಿಕೊಂಡಿರುವುದು ಸಣ್ಣ ಸಮಸ್ಯೆ. ಅದನ್ನು ಸರಿಪಡಿಸಬಹುದು. ಈ ಪ್ರದೇಶದಲ್ಲಿ  ರೈಲನ್ನು ಕಡಿಮೆ ವೇಗದಲ್ಲಿ ಓಡಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೂ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

* ರೈಲು ಹಳಿಗಳ ಪರಿಶೀಲನೆ ವೇಳೆ ಕಾಂಕ್ರಿಟ್‌ನಲ್ಲಿದ್ದ ಸಮಸ್ಯೆಯನ್ನು ನಮ್ಮ ಸಿಬ್ಬಂದಿ ಗಮನಿಸಿದರು. ಇದೊಂದು ಸಣ್ಣ ಸಮಸ್ಯೆ. ಬೀಮ್ ಕುಸಿಯುವ ಆತಂಕ ಇಲ್ಲ. ಮುಂಜಾಗ್ರತಾ ಕ್ರಮವಾಗಿ ರೈಲುಗಳ ವೇಗ ಕಡಿಮೆ ಮಾಡಿದ್ದೇವೆ. 
– ಅಜಯ್‌ ಸೇಠ್‌, ವ್ಯವಸ್ಥಾಪಕ ನಿರ್ದೆಶಕ ಮೆಟ್ರೊ ನಿಗಮ

Tags: 

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !