ಗುರುವಾರ , ಜೂನ್ 4, 2020
27 °C

ಅಧಿಕ ದರಕ್ಕೆ ಪಡಿತರ ಮಾರಾಟ ಒಪ್ಪಿಕೊಂಡ ಸರ್ಕಾರ: ಕಾನೂನಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಕೆ.ಜಿಗೆ ₹12ರಿಂದ ₹15 ಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ನಾವು ಬಡವರಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಪಡಿತರ ಒದಗಿಸುತ್ತಿದ್ದೇವೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ಸಂಬಂಧಿಸಿ ಕಾನೂನು ತರಲು ಅಧಿಕಾರಿಗಳು ಮತ್ತು ಸಿಎಂ ಜತೆ ಮಾತನಾಡುತ್ತೇನೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸಚಿವ ಕೆ.ಗೋಪಾಲಯ್ಯ ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಮತ್ತು ಕೇಂದ್ರದ ನಾನಾ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು ಮಾರಾಟ ಮಾಡಲು ಮುಂದಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.

‘ಸಾಕಷ್ಟು ಮಂದಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದಿದೆ. ಜನರಿಗೆ ಪಡಿತರ ಹೆಚ್ಚಾದರೆ ಅದನ್ನು ಅಂಗಡಿಯಲ್ಲೇ ಬಿಡಿ. ಬಡವರಿಗೆ ಅನುಕೂಲ ಆಗುತ್ತದೆ. ಅದನ್ನು ಬಿಟ್ಟು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಇಂಥವರ ಪಡಿತರ ರದ್ದು ಮಾಡಲೂ ಸಹ ಕಾನೂನನಿನಲ್ಲಿ ಅವಕಾಶ ನೀಡಲು ಚಿಂತನೆ ನಡೆದಿದೆ’ ಎಂದರು.

‘ಮೇಲ್ನೋಟಕ್ಕೆ ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಿದ್ದೇವೆ. 33 ಲೈಸೆನ್ಸ್‌ಗಳನ್ನು ರದ್ದು ಮಾಡಿದ್ದೇವೆ. ಕಲಬುರ್ಗಿ, ಮೈಸೂರು ಮತ್ತು ದಾವಣಗೆರೆಗಳ ಖಾಸಗಿ ಗೋದಾಮುಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ನಡೆಸಿ ಸಾವಿರಾರು ಕ್ಚಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಈ ಅಕ್ಕಿ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ ಅವರು, ‘ಎಷ್ಟೇ ಪ್ರಭಾವಿ ಇದ್ದರೂ ಅಂಥವರನ್ನು ಕ್ಷಮಿಸುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು