ಗುರುವಾರ , ಜುಲೈ 16, 2020
22 °C
ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆ

ಸಭಾಧ್ಯಕ್ಷರ ಅಧಿಕಾರ ಮೊಟಕು ಬೇಡ: ಎಲ್ಲ ಪಕ್ಷಗಳ ಒಕ್ಕೊರಲ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ವಿಧಾನಸಭಾ ಸಭಾಧ್ಯಕ್ಷರಿಗೆ ಪರಮೋಚ್ಛ ಅಧಿಕಾರ ಇರಬೇಕು. ರಾಜೀನಾಮೆ ನೀಡಿದ ಶಾಸಕರಿಗೆ ಮತ್ತೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು. ಚುನಾವಣೋತ್ತರ ಮೈತ್ರಿಗೂ ಅವಕಾಶ ನೀಡಬಾರದು. ಅನರ್ಹತೆ ವಿಚಾರವಾಗಿ ನ್ಯಾಯಾಂಗದ ಹಸ್ತಕ್ಷೇಪ ಮಾಡಕೂಡದು ಎಂದು ಸಂಸದೀಯ ನಾಯಕರು ಪಕ್ಷಭೇದ ಮರೆತು ಒತ್ತಾಯಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಬಲಪಡಿಸುವಿಕೆ, ಸುಧಾರಣೆ ಮತ್ತು ಬದಲಾವಣೆಗೆ ಸಂಬಂಧಿಸಿಅಭಿಪ್ರಾಯ ಸಂಗ್ರಹಿಸುವಂತೆ ಲೋಕಸಭಾ ಅಧ್ಯಕ್ಷರು ಸೂಚನೆ ನೀಡಿದ್ದರು. ಇದರ ಅನುಸಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸದೀಯ ನಾಯಕರ ಸಭೆಯನ್ನು ಗುರುವಾರ ಕರೆದಿದ್ದರು. ಈ ಸಭೆಯಲ್ಲಿ ಸಭಾಧ್ಯಕ್ಷರ ಪರಮಾಧಿಕಾರಕ್ಕೆ ಕುತ್ತು ಬಾರದಂತೆ ನೋಡಿಕೊಳ್ಳಬೇಕಾಗಿದೆ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಸಹಿತ ಸುಮಾರು 25 ಮಂದಿ ಸದಸ್ಯರು ಪಾಲ್ಗೊಂಡಿದ್ದರು. 

‘ಸಭೆಯಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿಗಳು, ರಾಜಕೀಯ ಪಕ್ಷಗಳ ಬಗ್ಗೆ ಚರ್ಚೆಯಾಗಿದೆ. ಚುನಾವಣಾ ಆಯೋಗದ ಬಗ್ಗೆ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಶಾಸಕಾಂಗದ ಘನತೆ, ಗೌರವವನ್ನು ಕಾಪಾಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಕಾಲಮಿತಿಯೊಳಗೆ ಅನರ್ಹತೆಯ ಪ್ರಕರಣ ವಿಚಾರಣೆ ಮುಕ್ತಾಯ ಆಗಬೇಕು. ಅನರ್ಹ ಶಾಸಕರ ಕುಟುಂಬ ವರ್ಗದವರು ಸ್ಪರ್ಧಿಸದಂತೆ ತಿದ್ದುಪಡಿ ತರಬೇಕು’ ಎಂಬ ಸಲಹೆಗಳನ್ನೂ ಹಲವರು ನೀಡಿದರು ಎಂದು ಕಾಗೇರಿ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜೂನ್‌ 10ರೊಳಗೆ ಸಾರ್ವಜನಿಕರು ವಿಧಾನಸಭೆ ಕಾರ್ಯದರ್ಶಿಗೆ ತಮ್ಮ ಅಭಿಪ್ರಾಯ ‌ನೀಡಬೇಕು. ಜೂನ್‌ 5ರಂದು ವಿಧಾನ ಪರಿಷತ್‌ ಸದಸ್ಯರೊಂದಿಗೂ ಚರ್ಚೆ ನಡೆಸುತ್ತೇನೆ’ ಎಂದರು.

ಸಲಹೆಗಳು

ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ಅನರ್ಹತೆ ವಿಚಾರಣೆ ನಡೆಯುವಂತಹ ವ್ಯವಸ್ಥೆ ಬರಲಿ. ಅನರ್ಹರಿಗೆ 10 ವರ್ಷ ಸ್ಪರ್ಧಿಸುವ ಅವಕಾಶ ಇರಬಾರದು‌.
- ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸಭಾಧ್ಯಕ್ಷರಿಗೇ ಇರಬೇಕು. ಮುಂದೆ ರಾಜಕೀಯ ಅಧಿಕಾರ ಅನುಭವಿಸದಂತೆ ಮಾಡಬೇಕು.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಂವಿಧಾನ ರಕ್ಷಣೆ ಜತೆಗೆ ಸಂವಿಧಾನಾತ್ಮಕ ಮೌಲ್ಯಗಳ ಸದಾಶಯಗಳನ್ನು ಅರಿತುಕೊಂಡು ಅಕ್ಷರಶಃ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ.
- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಅಧಿಕಾರ ಹಸ್ತಾಂತರಕ್ಕೆ ಪಕ್ಷಾಂತರ ಮಾಡುವುದು ಕೂಡದು. ಸ್ಪೀಕರ್‌ ನ್ಯಾಯಮೂರ್ತಿ ಇದ್ದಂತೆ. ಅವರ ಅಧಿಕಾರ ಬಳಸಲು ಅವಕಾಶ ನೀಡಬೇಕು.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು