ಬುಧವಾರ, ಫೆಬ್ರವರಿ 26, 2020
19 °C
ಅನಂತಕುಮಾರ್ ಹೆಗ್ಡೆ ವಿರುದ್ಧ ಕಿಡಿ, ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ

ಗಾಂಧೀಜಿ ಅವಹೇಳನ: ಕಾಂಗ್ರೆಸ್ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ನೀಡಿರುವ ಹೇಳಿಕೆ ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಕಾರರು, ಸಚಿವ ಅನಂತ್‌ಕುಮಾರ್ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಗಾಂಧೀಜಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ್ ಹೆಗಡೆಗೆ ಮತಿಭ್ರಮಣೆಯಾಗಿದೆ. ಅವರ ಹೇಳಿಕೆಯನ್ನು ಪಕ್ಷದಿಂದ ತೀವ್ರವಾಗಿ ಖಂಡಿಸುತ್ತೇವೆ. ದೇಶದ್ರೋಹಿಯಾಗಿರುವ ಹೆಗಡೆ ಅವರನ್ನು ರಾಜಕೀಯ ಜೀವನದಿಂದ ಹೊರಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಠ, ಆಶ್ರಮ, ಶಾಲೆಗಳಿಗೆ ನೀಡುತ್ತಿದ್ದ ಅಕ್ಕಿಯನ್ನೂ ಕಡಿತಗೊಳಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ಧ ಸಂದರ್ಭ ಅಕ್ಷರ ದಾಸೋಹ ಜತೆಗೆ ಅನ್ನ ದಾಸೋಹ ಯೋಜನೆ ಜಾರಿಗೆ ತರಲಾಗಿತ್ತು. ಅದನ್ನು ಮೊಟಕುಗೊಳಿಸುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ಮಾತನಾಡಿ, ಅನಂತ್‌ಕುಮಾರ್ ಹೆಗಡೆ ತಮ್ಮ ವಿಕೃತನವನ್ನು ಹೇಳಿಕೆ ಮೂಲಕ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ದೇಶಕ್ಕೆ 29 ವರ್ಷಗಳು ಅಹಿಂಸಾತ್ಮಕವಾಗಿ ಮತ್ತು ಸತ್ಯದ ಹಾದಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರನ್ನು ಹೀಯಾಳಿಸಿ, ಅವಮಾನಿಸಿ ಮಾತನಾಡಿರುವುದನ್ನು ಪಕ್ಷದಿಂದ ಖಂಡಿಸುತ್ತೇವೆ. ‘ಗಾಂಧೀಜಿ ಅವರು ಬ್ರಿಟಿಷರೊಂದಿಗೆ ಚೆನ್ನಾಗಿ ಇದ್ದುಕೊಂಡು ನಾಟಕ ಆಡುತ್ತಿದ್ದರು’ ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಅನಂತ್‌ಕುಮಾರ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಅವರು 31 ಸಾವಿರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಅಕ್ಷರ ದಾಸೋಹ ಅಕ್ಕಿಯನ್ನೇ ಕಡಿತ ಮಾಡಿದ್ದಾರೆ. ಕೂಡಲೇ ಶಶಿಕಲಾ ಜೊಲ್ಲೆ, ಅನಂತ್‌ಕುಮಾರ್ ಹೆಗಡೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಈ ದೇಶದ ಹಾಗೂ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಮಿಟ್ಟು ಚಂಗಪ್ಪ, ಜಿಲ್ಲಾ ವಕ್ತಾರ ಸುರೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಪ್ರಮುಖರಾದ ಟಿ.ಪಿ.ಲರಮೇಶ್, ಸುರೇಶ್, ಕೆ.ಎ.ಯಾಕುಬ್, ತೆನ್ನೀರಾ ಮೈನಾ, ನಂದಕುಮಾರ್, ಹನೀಫ್, ಕಾವೇರಮ್ಮ ಸೋಮಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು