ಮಂಗಳವಾರ, ಸೆಪ್ಟೆಂಬರ್ 17, 2019
24 °C

ಉಸಿರಿನ ಧ್ಯಾನ ‘ಚಿಗಂಗ್‌’

Published:
Updated:
Prajavani

ಚೀನಿ ಭಾಷೆಯಲ್ಲಿ ‘ಚಿ' ಅಂದರೆ ಪ್ರಾಣ. ‘ಗಂಗ್‌’ ಎಂದರೆ ತನ್ನದಾಗಿಸಿಕೊಳ್ಳುವುದು. ಉಸಿರಿನ ಮೂಲಕ ಲೋಕವನ್ನು ತನ್ನದಾಗಿಸಿಕೊಳ್ಳುವ ಕಲೆಯೇ ಚಿಗಂಗ್‌. ಪ್ರಕೃತಿಯನ್ನು ಉಸಿರಿನಿಂದ ಆವಾಹಿಸಿಕೊಂಡು ದೇಹಕ್ಕೆ ಚೈತನ್ಯ ನೀಡುವ ಧ್ಯಾನ ಕಲೆ ಇದಾಗಿದೆ. 

ದೇಹದ ಸದೃಢತೆಗೆ ಹಲವು ಮಾದರಿಗಳನ್ನು ಶೋಧಿಸುತ್ತಿರುವ ಫಿಟ್‌ನೆಸ್‌ ಪ್ರಿಯರಿಗೆ ಚಿಗಂಗ್‌ ಹೊಸ ದರ್ಶನ ನೀಡಬಲ್ಲದು. ಮಾನಸಿಕ ಮತ್ತು ದೈಹಿಕವಾಗಿ ಫಿಟ್‌ ಆಗಿರಲು ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ಈ ಪ್ರಾಚೀನ ಕಲೆ ದಾರಿ ತೋರಬಲ್ಲದಾಗಿದೆ. 

‘ಚಿಗಂಗ್‌– ಥಾಯ್‌ ಚಿ’ ಎಂತಲೂ ಒಟ್ಟಾಗಿ ಕರೆಯುವುದಿದೆ. ಆದರೆ, ಚಿಗಂಗ್‌ನ ಮುಂದುವರಿದ ಭಾಗವಾಗಿ ‘ಥಾಯ್‌ ಚಿ’ ಸಮರ ಕಲೆ ರೂಪುಗೊಂಡಿದೆ. ಸುಮಾರು ಕ್ರಿ.ಶ. 500ರಲ್ಲಿ ಚಿಗಂಗ್‌ ಕಲೆಯನ್ನು ಸಮರ ಕಲೆಯನ್ನಾಗಿ ಪರಿವರ್ತಿಸಲು ಚೀನಾದ ಲಿಯಾಂಗ್‌ ರಾಜಮನೆತನ ಪ್ರೋತ್ಸಾಹ ನೀಡಿತು. ಅದರಂತೆ ಥಾಯ್‌ ಚಿ ಹುಟ್ಟು ಪಡೆದಿದೆ. 

ಉಸಿರಿಗೆ ಪ್ರಾತಿನಿಧ್ಯ
ಸರಳ ವ್ಯಾಯಾಮದಂತೆ ಕಂಡರೂ ಇಲ್ಲಿ ಉಸಿರಿಗೆ ವಿಶೇಷ ಪ್ರಾತಿನಿಧ್ಯ. ದೇಹಕ್ಕೆ ಚೈತನ್ಯ ನೀಡುವ ಚಿಗಂಗ್, ಸಾಧ್ಯತೆಗಳ ಮಾಯಾಲೋಕವನ್ನು ತೆರೆದಿಡುತ್ತದೆ. ಬಲವನ್ನು ಪ್ರಯೋಗಿಸುವಾಗ ಉಸಿರನ್ನು ಬಿಟ್ಟರೆ, ಬಲವನ್ನು ಕ್ರೂಢೀಕರಿಸಲು ಉಸಿರನ್ನು ತೆಗೆದುಕೊಳ್ಳಲಾಗುತ್ತದೆ. ಉಚ್ಛ್ವಾಸ– ನಿಶ್ವಾಸದ ಶಿಸ್ತಿನಲ್ಲಿ ಈ ಕಲೆಯನ್ನು ಕಲಿಯುವುದರಿಂದ ದೀರ್ಘಾಯಸ್ಸು ಕೂಡ ಗಳಿಸಬಹುದಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಇದು ಸಹಕರಿಸುತ್ತದೆ. 

ದೇಹದ ಮೇಲೆ ಕಾಳಜಿ
ನಮ್ಮ ದೇಹದ ಪ್ರತಿಯೊಂದು ಅಂಗದ ಮೇಲೆ ಮಾನಸಿಕ ಸ್ಪರ್ಶ, ಕಾಳಜಿ, ಭಾವನೆಯನ್ನು ಇಟ್ಟುಕೊಂಡಿದ್ದೆ ಆದಲ್ಲಿ ದೇಹ ಗೆಲುವಾಗಿ ಸ್ಪಂದಿಸಬಲ್ಲದು. ಹೃದಯದ ಬಡಿತವನ್ನು ಗ್ರಹಿಸುವಂತೆ, ಯಕೃತ್ತು ಸೇರಿದಂತೆ ದೇಹದ ಎಲ್ಲ ಅಂಗಗಳ ಮೇಲೆ ಕಾಳಜಿಯನ್ನು ತೋರಬೇಕು. ಇದನ್ನು ಚಿಗಂಗ್ ಕಲಿಸುತ್ತದೆ. ಉಸಿರಿನ ಶಕ್ತಿ ದೇಹದ ಪ್ರತಿ ಅಂಗಾಂಶಗಳನ್ನು ತಲುಪುವಂತೆ ಇದು ಮಾಡಬಲ್ಲದು. ಹೀಗಾಗಿಯೇ ಫಿಟ್‌ನೆಸ್‌ ಪ್ರಿಯರು ಚಿಗಂಗ್ ಮತ್ತು ಥಾಯ್ ಚಿ ಮೊರೆ ಹೋಗುತ್ತಾರೆ.

ಏಕಾಗ್ರತೆ ಮತ್ತು ಧ್ಯಾನ
ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ಶಕ್ತಿ ಸಂಚಯವಾಗುತ್ತದೆ. ಉಸಿರು ಈ ಎರಡು ಜಗತ್ತುಗಳ ಮಾಧ್ಯಮ. ಶ್ವಾಸದ ಮೇಲಿನ ಹಿಡಿತವು ಏಕಾಗ್ರತೆಯನ್ನೂ, ಧ್ಯಾನದ ಉಚ್ಛ್ರಾಯ ಸ್ಥಿತಿಯನ್ನು ಸಹ ನೀಡಬಲ್ಲದು. ಯೋಗ ಮತ್ತು ಚಿಗಂಗ್ ಈ ಮಾದರಿಯಲ್ಲಿ ಸಾಮ್ಯತೆಯನ್ನು ಹೊಂದಿವೆ. 

ಸಾಮರಸ್ಯ
ಚಿಗಂಗ್, ವ್ಯಕ್ತಿಗೆ ಶಾಂತತೆ ಮತ್ತು ಪ್ರಸನ್ನತೆಯನ್ನು ನೀಡುತ್ತದೆ. ಪ್ರಕೃತಿಯ ಶಕ್ತಿ ದೇಹಕ್ಕೆ ಆವಾಹಿಸಿಕೊಂಡಂತೆ ದೇಹದ ಚೈತನ್ಯ ವ್ಯಾಯಾಮದ ಮೂಲಕ ಹೊರಹೊಮ್ಮುತ್ತದೆ. ಕೋಪ, ಸಿಟ್ಟು ಮೊದಲಾದವನ್ನು ಕಳೆದು ಧನಾತ್ಮಕ ಚಿಂತನೆಯೆಡೆಗೆ ವ್ಯಕ್ತಿಯನ್ನು ಕರೆದೊಯ್ಯುತ್ತದೆ. ಸಾಮರಸ್ಯದ ವಾತಾವರಣವನ್ನು ನಿರ್ಮಿಸುತ್ತದೆ. ಜೀವನ ಕಲೆಯನ್ನು ಕಲಿಸುವ ಇದು. ಒಳಿತಿನ ಆಲೋಚನೆ ಮಾಡುವಂತೆ ಉದ್ದೀಪಿಸುತ್ತದೆ. 

ವಿರಮಿಸುವ ಕಲೆ
ಒತ್ತಡದ ಬದುಕು ನಮ್ಮ ನಿದ್ರೆಯನ್ನು ಕದಿಯುತ್ತಿದೆ. ಚಿಗಂಗ್‌ ಪ್ರಶಾಂತ ನಿದ್ರೆಯನ್ನು ನೀಡಬಲ್ಲದು. ವಿರಮಿಸುವ ಉತ್ತಮ ವಿಧಾನವನ್ನು ಚಿಗಂಗ್ ಮೈಗೂಡಿಸುತ್ತದೆ. ನಿದ್ರಾಹೀನತೆಯನ್ನು ಕೊನೆಗಾಣಿಸುತ್ತದೆ. ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಬಹುದು. 

ಉದರವೇ ಎರಡನೇ ಮಿದುಳು!
ಜಿಮ್‌ನಲ್ಲಿ ದೇಹವನ್ನು ಹುರಿಗಟ್ಟಿಸಲು ಪ್ರೋಟಿನ್‌ಯುಕ್ತ ಆಹಾರವನ್ನು ಹೆಚ್ಚು ಸೇವಿಸಲಾಗುತ್ತದೆ. ಆದರೆ, ಚಿಗಂಗ್ ಮಾಡಲು ನಿರ್ದಿಷ್ಟ ಆಹಾರವನ್ನು ತೆಗೆದುಕೊಳ್ಳಬೇಕಾಗಿಲ್ಲ. ಸ್ಥಳೀಯವಾದ ಆಹಾರ ಪದ್ಧತಿಯನ್ನು ಮಿತವಾಗಿ ಅನುಸರಿಸಿದರೇ ಸಾಕು. ಸೇವಿಸಿದ್ದನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಚಿಗಂಗ್‌ ನೀಡಬಲ್ಲದು ಎನ್ನುತ್ತಾರೆ ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಚಿಗಂಗ್‌– ಥಾಯ್‌ ಚಿ ಹೇಳಿಕೊಡುತ್ತಿರುವ ಸಿಸಿಲಿ ಥಾಮಸ್‌.

ತಾಳಬದ್ಧ ಚಲನೆ
ಚಿಗಂಗ್ ‘ರಿದಂ’ ಕೇಂದ್ರಿತ ವ್ಯಾಯಾಮ ಕಲೆಯಾಗಿದ್ದು, ಸಮಯ ಮತ್ತು ಚಲನೆ ಒಂದನ್ನೊಂದು ಅವಲಂಬಿಸಿವೆ. ತಾಳ ಬದ್ಧವಾಗಿ ವ್ಯಕ್ತಿ ಇಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ. ಚಿಗಂಗ್‌ನ ಮುಂದುವರಿದ ಭಾಗವಾದ ಥಾಯ್ ಚಿ ಸಮರಕಲೆಯಲ್ಲೂ ಸಮಯ, ಗತಿ ಚಲನೆಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ.

‌ವ್ಯಕ್ತಿ ಕೇಂದ್ರ
ಚಿಗಂಗ್‌ನಲ್ಲಿ ವ್ಯಕ್ತಿಯೇ ವಿಶ್ವ. ವಿಶ್ವವೇ ವ್ಯಕ್ತಿ ಆಗಿರುತ್ತಾನೆ. ಪ್ರಾರಂಭದಲ್ಲಿ ಉತ್ತಮ ಮಾರ್ಗದರ್ಶನ ಇರಬೇಕು. ನಂತರದಲ್ಲಿ ಚಿಗಂಗ್‌ ಅಭ್ಯಾಸವನ್ನು ಮುಂದುವರಿಸಬಹುದು. ದಿನ 20 ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು.

ಚಲನೆಯೇ ಧ್ಯಾನ
ಚಿಗಂಗ್‌ನಲ್ಲಿ ಚಲನೆಗೆ ವಿಶೇಷ ಮಹತ್ವ. ಚಲನೆಯ ಮೂಲಕ ದೇಹವನ್ನು ನಿಯಂತ್ರಿಸಬಲ್ಲದು. ಗುರುತ್ವದ ಚಲನೆ ಮತ್ತು ವ್ಯಾಯಾಮದ ಆಯಾಮಗಳನ್ನು ಅನುಸರಿಸುವಾಗ ಧ್ಯಾನ ಸಿದ್ಧಿಸುತ್ತದೆ.   

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
ಮೂಳೆ ಸವೆತವನ್ನು ಚಿಗಂಗ್‌ ತಡೆಗಟ್ಟುತ್ತದೆ. ಸ್ನಾಯುಗಳು ಬಲವಾಗುವುದಲ್ಲದೆ, ಮೂಳೆಗಳು ಗಟ್ಟಿಗೊಳ್ಳುತ್ತವೆ. ಯಾವುದೇ ವಯಸ್ಸಿನವರು ಸಹ ಚಿಗಂಗ್‌ ಕಲೆಯನ್ನು ಕಲಿಯಬಹುದು. ಆದರೆ ಸೂಕ್ತ ಮಾರ್ಗದರ್ಶನ ಅವಶ್ಯಕ.

ಪ್ರಕೃತಿಯ ಅಂಶ
ಪ್ರಾಣಿಗಳ ವರ್ತನೆಯನ್ನು ಆಧರಿಸಿದ ವ್ಯಾಯಾಮದ ವಿಧಗಳೂ ಚಿಗಂಗ್‌ ನಲ್ಲಿ ಇವೆ. ಪ್ರಕೃತಿಯ ಪ್ರತಿಯೊಂದು ವಸ್ತು, ಅಂಶದ ಕುರುಹುಗಳು ಈ ಕಲೆಯನ್ನು ಆವಾಹಿಸಿಕೊಂಡಿವೆ. ಚೀನಾದ ಎತ್ತರದ ಪರ್ವತಗಳಲ್ಲಿ ರೂಪುಗೊಂಡ ಸಾಧಕರ ಕಲೆ ಇದಾಗಿದೆ. ನೀರಿನಂತೆ ತಿಳಿಯಾದ, ಸರೋವರದಂತೆ ಪ್ರಶಾಂತವಾದ, ಹಿಮಾಲಯದಂತೆ ಧ್ಯಾನದಲ್ಲಿ ಎತ್ತರವಾದ, ಚಿಂತನೆಯಲ್ಲಿ ಸಾಗರದಷ್ಟು ಆಳವಾದ ಕಲೆ ಇದಾಗಿದೆ. 

ಸ್ವರಕ್ಷಣೆ
ಚಿಗಂಗ್‌–ಥಾಯ್‌ ಚಿ ಸ್ವರಕ್ಷಣೆಯ ಕಲೆ ಕೂಡ ಹೌದು. ಅಪಾಯದ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸಬಹುದು. ಎದುರಾಳಿಯನ್ನು ದೃಷ್ಟಿಯಿಂದಲೇ ಅರ್ಧ ಸೋಲಿಸುವ ಮಾನಸಿಕ ಸಾಮರ್ಥ್ಯವನ್ನು ಚಿಗಂಗ್‌ ನೀಡುತ್ತದೆ. ಆತ್ಮಸ್ಥೈರ್ಯವೇ ಈ ಕಲೆಯ ಗುಟ್ಟಾಗಿದೆ. 

ಅನುಕೂಲಗಳು

* ಒತ್ತಡ ಸನ್ನಿವೇಶವನ್ನು ಶಾಂತಚಿತ್ತರಾಗಿ ನಿಭಾಯಿಸುವುದನ್ನು ಕಲಿಸುತ್ತದೆ

* ಉಸಿರಿನ ಮೇಲೆ ಈ ವ್ಯಾಯಾಮ ಆಧರಿಸಿರುವುದರಿಂದ ಹೃದಯ ಸಂಬಂಧಿ ತೊಂದರೆಗಳು ಸುಳಿಯುವುದಿಲ್ಲ

* ಬೆನ್ನು ನೋವು, ಮಂಡಿ ನೋವುಗಳನ್ನು ಕಡಿಮೆ ಮಾಡಬಲ್ಲದು

* ಮೂಳೆ ಸವೆತವನ್ನು ತಡೆಗಟ್ಟುವುದಲ್ಲದೆ ಬಲಪಡಿಸುತ್ತದೆ

* ಏಕಾಗ್ರತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಬಲ್ಲದು

***
ದೇಹವನ್ನು ಹುರಿಗಟ್ಟಿಸಿದರೆ ಮಾತ್ರ ನಾವು ಸದೃಢರಾಗುವುದಿಲ್ಲ. ಪ್ರತಿಯೊಂದು ಅಂಗವು ಚೈತನ್ಯದಾಯಕವಾಗಿರಬೇಕು. ದೇಹ ಮತ್ತು ಮನಸ್ಸುಗಳು ಆರೋಗ್ಯದಾಯಕವಾಗಿರಬೇಕು. ಇವೆರಡರ ಮೇಲೆ ನಿಯಂತ್ರಣ ಸಾಧಿಸಲು ಚಿಗಂಗ್ ಸಹಾಯ ಮಾಡಬಲ್ಲದು. ಅಲ್ಲದೆ, ಕಾರ್ಯದೊತ್ತಡವನ್ನು ನಿಭಾಯಿಸುವುದನ್ನು ಇದು ಕಲಿಸುತ್ತದೆ. ನಿತ್ಯ ಕಡಿಮೆ ಎಂದರೂ 20 ನಿಮಿಷ ಚಿಗಂಗ್‌ ಅಭ್ಯಾಸ ಮಾಡಿದರೆ ಪ್ರತಿಯೊಬ್ಬರು ‌ಫಿಟ್‌ ಆಗಿರಲು ಸಾಧ್ಯವಾಗುತ್ತದೆ.
– ಸಿಸಿಲಿ ಥಾಮಸ್‌, ಕೋಚ್, ವೈಟಲ್‌ ಫೋರ್ಸ್ ಥಾಯ್‌ ಚಿ ಅಕಾಡೆಮಿ

Post Comments (+)