ಅಶ್ಲೀಲ ಸಿ.ಡಿ. ಪ್ರಕರಣ: ರಾಘವೇಶ್ವರ ಶ್ರೀ ಪರ ನಿಂತ ಸರ್ಕಾರ

ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅಶ್ಲೀಲ ಸಿ.ಡಿ ತಯಾರಿಸಿದ ಆರೋಪದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಗೋಕರ್ಣದಲ್ಲಿ ದಾಖಲಿಸಿದ್ದ ಮೊಕದ್ದಮೆ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
‘ಸ್ವಾಮೀಜಿ ಘನತೆಗೆ ಧಕ್ಕೆ ತರುವ ಉದ್ದೇಶದಿಂದ 2010 ರಲ್ಲಿ ಅಶ್ಲೀಲ ಸಿ.ಡಿಯನ್ನು ತಯಾರಿಸಲಾಗಿತ್ತು. ಈ ಸಿ.ಡಿ ತಯಾರಿಸಿದ ಆರೋಪದ ಮೇಲೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 27/10 ರಡಿ ದೂರು ದಾಖಲಿಸಿಕೊಳ್ಳಲಾಗಿತ್ತು. 2015 ರಲ್ಲಿ ಅಂದಿನ ಸರ್ಕಾರ ಮೊಕದ್ದಮೆಯನ್ನು ಹಿಂದಕ್ಕೆ ಪಡೆದಿತ್ತು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಿಆರ್‌ಪಿಸಿ ಕಲಂ 321ರಡಿ ಪ್ರಕರಣದ ವಿಚಾರಣೆಯನ್ನು ಕೈಬಿಡಲು ಅಂದಿನ ಸಚಿವ ಸಂಪುಟ ನಿರ್ಣಯ ಮಾಡಿತ್ತು. ಆರೋಪ ಪಟ್ಟಿ ಸಲ್ಲಿಕೆಯ ಹಂತದಲ್ಲಿರುವಾಗಲೇ ಪ್ರಕರಣ ಹಿಂಪಡೆಯಲಾಗಿತ್ತು. ಈ ಪ್ರಕರಣದ ವಿಚಾರಣೆ ಮುಂದುವರಿಸಬೇಕಾಗಿರುವುದರಿಂದ ಕಾಂಗ್ರೆಸ್ ಸರ್ಕಾರದ ನಿರ್ಣಯವನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
* ಎತ್ತಿನ ಹೊಳೆ, ಕಾವೇರಿ ಜಲ ವಿವಾದ ಮತ್ತು ಕಳಸ ಬಂಡೂರಿ ಹೋರಾಟಗಳಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತ ವಿರುದ್ಧ ದಾಖಲಿಸಿದ್ದ 51 ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಲು ತೀರ್ಮಾನ. ಕಾವೇರಿ ಹೋರಾಟದಲ್ಲಿ ಮಾಜಿ ಸಂಸದ ಮಾದೇಗೌಡ ಮತ್ತು ಇತರರ ಮೇಲೆ 35 ಮೊಕದ್ದಮೆಗಳು ದಾಖಲಾಗಿದ್ದವು.
* ಚುನಾವಣಾ ಆಯೋಗಕ್ಕಾಗಿ ಖನಿಜ ಭವನದ ಪಕ್ಕದಲ್ಲಿ ಹೊಸ ಕಟ್ಟಡ ನಿರ್ಮಿಸಲು ₹13,12 ಕೋಟಿ.
*ನಲಿ ಕಲಿ ಕಾರ್ಯಕ್ರಮದಡಿ 1 ರಿಂದ 3 ನೇ ತರಗತಿವರೆಗೆ ಕನ್ನಡ ಮಾಧ್ಯಮ ಮತ್ತು 1 ಮತ್ತು 2 ನೇ ತರಗತಿ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಪೂರೈಕೆ ₹27 ಕೋಟಿ.
* ವಿವಿಧ ಜಿಲ್ಲೆಗಳಿಗೆ 120 ಅಂಬುಲೆನ್ಸ್ ಖರೀದಿಗೆ ₹35.04 ಕೋಟಿ, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ಮತ್ತಿತರ ನಿರ್ಮಾಣದ ಅಂದಾಜು ವೆಚ್ಚ ₹263 ಕೋಟಿಗೆ ಏರಿಕೆ.
* ಬೆಂಗಳೂರು ಸೆಂಟ್ರಲ್ ಜೈಲ್ ಎರಡನೇ ಹಂತದ ಅಭಿವೃದ್ಧಿಗೆ ₹10.56 ಕೋಟಿ. ಬೀದರ್‌ನಲ್ಲಿ ವಿಶೇಷ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ₹99.95 ಕೋಟಿ.
* ಕೊಪ್ಪಳ ಜಿಲ್ಲೆ ಹಿರೇಹಳ್ಳಕ್ಕೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗೆ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿ ₹89.69 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
*ಮೈಸೂರು ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿಯ ಮೊತ್ತ ₹84.69 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.
* ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ 3,404 ಲ್ಯಾಪ್‌ಟಾಪ್ ವಿತರಣೆಗೆ ₹7.30 ಕೋಟಿ ಅನುದಾನ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.