ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಚುನಾವಣಾ ಕಹಳೆ: ಹಾವೇರಿಗೆ ರಾಹುಲ್‌ ಗಾಂಧಿ ಇಂದು

‘ಪರಿವರ್ತನಾ ರ‍್ಯಾಲಿ’
Last Updated 30 ಏಪ್ರಿಲ್ 2019, 16:37 IST
ಅಕ್ಷರ ಗಾತ್ರ

ಹಾವೇರಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಶನಿವಾರ (ಮಾರ್ಚ್‌ 9) ಇಲ್ಲಿ ಕಾಂಗ್ರೆಸ್ ‘ಪರಿವರ್ತನಾ ರ‍್ಯಾಲಿ’ ಆಯೋಜಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ಕಹಳೆ ಮೊಳಗಿಸಲಿದ್ದಾರೆ.

ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಸಭಾಂಗಣ, ವೇದಿಕೆ, ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಮೀಪದ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ನಗರದಾದ್ಯಂತ ಸ್ವಾಗತ ಕೋರುವ ಫ್ಲೆಕ್ಸ್‌ಗಳು, ಬ್ಯಾನರ್, ಬಂಟಿಂಗ್ಸ್‌ ಹಾಕಲಾಗಿದ್ದು ನಗರ ಕಾಂಗ್ರೆಸ್‌ಮಯಗೊಂಡಿದೆ.

ರ‍್ಯಾಲಿ ಸಿದ್ಧತೆಯ ನೇತೃತ್ವ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಣ್ಣಪುಟ್ಟ ಅಸಮಾಧಾನದಿಂದ ದೂರ ಉಳಿದಿದ್ದ ಪಕ್ಷದ ಮುಖಂಡರ ‘ಕೈ’ ಜೋಡಿಸಿ ಮುಗುಳ್ನಕ್ಕಿದ್ದಾರೆ.

ಜಿಲ್ಲೆಯ ಅಣೂರು ಮತ್ತಿತರ ಕೆರೆಗಳಿಗೆ ನೀರು ಪೂರೈಸುವ ಯೋಜನೆಗೆ ಮಂಜೂರಾತಿ ಕೊಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದರು. ಈ ಯೋಜನೆಗೆ ಕರ್ನಾಟಕ ನೀರಾವರಿ ನಿಗಮದಿಂದ ಮಂಜೂರಾತಿ ಕೊಡಿಸುವಲ್ಲಿಯೂ ಸಚಿವರು ಯಶಸ್ವಿಯಾಗಿದ್ದಾರೆ.

ಸಿದ್ಧತೆ ಪರಿಶೀಲಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಹಾವೇರಿಯು ರಾಜ್ಯದ ಕೇಂದ್ರ ಸ್ಥಳ. ಈ ಬಾರಿ ಗೆಲ್ಲುವ ಅಚಲ ವಿಶ್ವಾಸದಿಂದ ಹಾಗೂ ಸ್ಥಳೀಯ ನಾಯಕರ ಬೇಡಿಕೆಯಂತೆ ಇಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಪೂರ್ವ ವಲಯದ ವಿವಿಧ ಜಿಲ್ಲೆಗಳ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಸ್ಪಿ ಕೆ.ಪರಶುರಾಂ ನೇತೃತ್ವದಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಮಾರಾಟದ ಬೆಲೆ ಬಹಿರಂಗ ಪಡಿಸಲಿ’

ಹಾವೇರಿ: ‘ಶಾಸಕರನ್ನು ₹30 ಕೋಟಿಗೆ ಖರೀದಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಹೀಗಾಗಿ, ಉಮೇಶ ಜಾಧವ ಎಷ್ಟು ಕೋಟಿಗೆ ಮಾರಾಟವಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಪಡಿಸಿದರು.

‘ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ’ ಎಂದು ಅಫಿಡವಿಟ್ ನೀಡಿದ್ದ ಜಾಧವ, ಬಿಜೆಪಿಗೆ ಸೇರಿದ್ದಾರೆ. ಬಿಜೆಪಿಯಷ್ಟು ನೀತಿಗೆಟ್ಟ ರಾಜಕಾರಣವನ್ನು ಯಾರೂ ಮಾಡಿಲ್ಲ’ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT