ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಸಿಡಿಲು ಬಡಿದು ಇಬ್ಬರಿಗೆ ಗಾಯ

Last Updated 20 ಮೇ 2019, 17:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಭಾನುವಾರ ತಡರಾತ್ರಿಯಿಂದ ಸೋಮವಾರ ನಸುಕಿನವರೆಗೆ ಗುಡುಗು ಸಹಿತ ಮಳೆಯಾಗಿದೆ. ಕಳಸ ಬಳಿಯ ಹಿರೇಬೈಲು ಗ್ರಾಮದ ಬಿ.ಆರ್‌. ಮಂಜುನಾಥ್‌ ಅವರಿಗೆ ಸಿಡಿಲು ಬಡಿದು ಗಾಯವಾಗಿದೆ. ಭಾನುವಾರ ರಾತ್ರಿ 10.30 ಸುಮಾರಿಗೆ ಅವರು ಮನೆಯಲ್ಲಿ ಕಿಟಕಿ ಬಳಿ ಕುಳಿತಿದ್ದಾಗ ಸಿಡಿಲು ಬಡಿದು ಬೆನ್ನಿನಲ್ಲಿ ಸುಟ್ಟ ಗಾಯಗಳಾಗಿವೆ.

ಸೋಮವಾರ ಬೆಳಗಿನ ಜಾವದವರೆಗೆ ಬಿಟ್ಟುಬಿಟ್ಟು ಮಳೆ ಸುರಿದಿದೆ. ಗುಡುಗು–ಮಿಂಚಿನ ಆರ್ಭಟ ಇತ್ತು. ಚಿಕ್ಕಮಗಳೂರಿನಲ್ಲಿ 50 ಮಿ.ಮೀ, ಮೂಡಿಗೆರೆಯಲ್ಲಿ 48.5, ಜೋಳದಾಳಿನಲ್ಲಿ 40, ಕೊಟ್ಟಿಗೆಹಾರದಲ್ಲಿ 35.8, ಕಡೂರಿನಲ್ಲಿ 24.5, ಜಯಪುರದಲ್ಲಿ 27.2, ತರೀಕೆರೆಯಲ್ಲಿ 25.4 ಮಿ.ಮೀ ಮಳೆಯಾಗಿದೆ.

ಉಡುಪಿ: ಜಿಲ್ಲೆಯ ಹಲವೆಡೆ ಸೋಮವಾರ ಮುಂಜಾನೆ ತುಂತುರು ಮಳೆಯಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನತೆಗೆ ವರುಣನ ಸಿಂಚನದಿಂದ ತಂಪೆರದಂತಾಯಿತು. ಕೆಲಕ್ಷಣ ಸುರಿದು ಮಳೆ ನಾಪತ್ತೆಯಾಗಿದ್ದು ಬೇಸರ ಮೂಡಿಸಿತು.

ಕುಂದಾಪುರ ತಾಲ್ಲೂಕಿನ ನಾಡಾ, ಗುಡ್ಡೆಯಂಗಡಿ, ಬೈಂದೂರು, ಬ್ರಹ್ಮಾವರ, ಪಡುಬಿದ್ರಿ, ಹೆಬ್ರಿ ಭಾಗಗಳಲ್ಲೂ ತುಂತುರು ಮಳೆಯಾಗಿದೆ.

ದಕ್ಷಿಣ ಕನ್ನಡ: ಮಂಗಳೂರು ನಗರಸೇರಿ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಹಾಗೂ ಸೋಮವಾರ ಮುಂಜಾನೆ ಗುಡುಗು ಸಹಿತ ಮಳೆಯಾಗಿದೆ.

ಭಾನುವಾರ ರಾತ್ರಿ ಸಮೀಪದ ಇರಾ ಗ್ರಾಮದ ಕೆಂಜಿಲ ರಾಧಮ್ಮ ಎಂಬುವವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮನೆಯ ವಿದ್ಯುತ್ ವೈರ್‌ಗಳು ಸಂಪೂರ್ಣ ಸುಟ್ಟುಹೋಗಿವೆ. ಅದೃಷ್ಟವಶಾತ್ ಮನೆಮಂದಿಗೆ ಯಾವುದೇ ತೊಂದರೆಯಾಗಿಲ್ಲ.

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರ್ಲ ಸಮೀಪದ ಬಜಕೂಡ್ಲಿನ ಲಕ್ಷ್ಮಣ ನಾಯ್ಕ ಎಂಬುವವರ ಪತ್ನಿ ಕಮಲ ಅವರಿಗೆ ಸಿಡಿಲು ಬಡಿದಿದೆ. ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT