ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ನೀರು, ಜನಜೀವನ ಅಸ್ತವ್ಯಸ್ತ

ರಾಷ್ಟ್ರೀಯ ಹೆದ್ದಾರಿ- 275 ಕುಸಿಯುವ ಭೀತಿ, ಎರಡು ದಿನ ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ರಜೆ
Last Updated 7 ಆಗಸ್ಟ್ 2019, 14:52 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ವರುಣನ ಅಬ್ಬರಕ್ಕೆ ಬುಧವಾರ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಗ್ರಾಮೀಣ ಪ್ರದೇಶದ ಜನರು ಮೊಬೈಲ್ ನೆಟ್‌ವರ್ಕ್‌, ವಿದ್ಯುತ್‌ ಇಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಮುಂದುವರೆದಿದ್ದು, ಆಗಸ್ಟ್‌ 8 ಹಾಗೂ 9ರಂದು ಜಿಲ್ಲೆಯ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ.

ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಕುಸಿಯುವ ಸಾಧ್ಯತೆಯಿದೆ. ಕಳೆದ ವರ್ಷ ಕುಸಿದಿದ್ದ ಸ್ಥಳದಲ್ಲಿ ಎಂ–ಸ್ಯಾಂಡ್‌ ಅಳವಡಿಸಿ ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಿದ್ದರೂ ಮಳೆಯ ರೌದ್ರನರ್ತನಕ್ಕೆ ಮರಳು ತುಂಬಿದ ಚೀಲಗಳು ಕೊಚ್ಚಿ ಹೋಗುತ್ತಿವೆ. ಹೆದ್ದಾರಿ ಕುಸಿದರೆ ಮತ್ತೆ ಕೊಡಗು– ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.

ಹಲವೆಡೆ ರಸ್ತೆಗಳು ಜಲಾವೃತ: ಉಕ್ಕಿ ಹರಿಯುತ್ತಿರುವ ಜಿಲ್ಲೆಯ ನದಿ, ತೊರೆಗಳಿಂದ ರಸ್ತೆಗಳ ಮೇಲೆ ನೀರು ನಿಂತು ಜಲಾವೃತವಾಗಿದೆ. ಭಾಗಮಂಡಲದಲ್ಲಿ ಮಂಗಳವಾರ ಆವೃತವಾದ ನೀರು ಇನ್ನೂ ಇಳಿಮುಖ ಆಗಿಲ್ಲ. ಇನ್ನೂ ನೀರಿನಮಟ್ಟ ಏರಿಕೆ ಆಗುತ್ತಲೇ ಇದೆ. ಇದರಿಂದ ಭಾಗಮಂಡಲ– ನಾಪೋಕ್ಲು ರಸ್ತೆಯ ಸಂಪರ್ಕ ಕಡಿತಗೊಂಡಿದೆ.

ಹೊದ್ದೂರು– ನಾಪೋಕ್ಲು, ಮೂರ್ನಾಡು ಬಲಮುರಿ ರಸ್ತೆ ಹಾಗೂ ಅಭ್ಯತ್ ಮಂಗಲ ಗ್ರಾಮದ ಬಳಿಯ ಸೇತುವೆ ಸಂಪರ್ಕ ರಸ್ತೆಯ ಮೇಲೆ ನೀರು ನಿಂತಿದೆ. ಮಡಿಕೇರಿ ನಗರಸಭೆ ಹಾಗೂ ಮಂಗಳೂರು– ಭಾಗಮಂಡಲ ತಿರುವು ರಸ್ತೆಯಲ್ಲಿಯೂ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ.

ಖಾಸಗಿ ಬಸ್‌ ವಿರಳ: ಭಾಗಮಂಡಲ ರಸ್ತೆಯ ಅಪ್ಪಂಗಳ ಭಾಗದಲ್ಲಿ ದೊಡ್ಡ ಮರ ಬಿದ್ದು ಎರಡು ಗಂಟೆ ರಸ್ತೆ ಸಂಚಾರ ಬಂದ್‌ ಆಗಿತ್ತು. ಸ್ಥಳೀಯರ ಸಹಕಾರದಿಂದ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. ಈ ಮಾರ್ಗದಲ್ಲಿ ಖಾಸಗಿ ಬಸ್‌ ಸಂಚಾರ ವಿರಳವಾಗಿತ್ತು.

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತಾಳು ಸೇತುವೆ ಬಳಿ ಮರ ಬಿದ್ದು ಸೋಮವಾರಪೇಟೆ– ಡಿಕೇರಿ ರಸ್ತೆ ಸಂಚಾರ ಮಧ್ಯಾಹ್ನದ ತನಕವೂ ಬಂದ್ ಆಗಿತ್ತು.

ಕತ್ತಲೆಯಲ್ಲಿ ಗ್ರಾಮಗಳು: ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಿಂದ ವಿದ್ಯುತ್‌ ಕೈಕೊಟ್ಟಿದೆ. ಮೊಬೈಲ್‌ ನೆಟ್‌ವರ್ಕ್‌ ಕೈಕೊಟ್ಟಿದ್ದು, ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.

ಮಡಿಕೇರಿ ಹಿಲ್‌ ರಸ್ತೆಯಲ್ಲಿ ವಿದ್ಯುತ್‌ ವೈಯರ್‌ ತುಂಡಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಚಾಮುಂಡೇಶ್ವರಿ ನಗರದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT