ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಸಿಡಿಲಿಗೆ ರೈತ ಬಲಿ

Last Updated 8 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ಕೆಲವೆಡೆ ಸೋಮವಾರ ಹಾಗೂ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯೂ ಸಂಭವಿಸಿದೆ. ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗಿದೆ. ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬೆಳೆಗಳು ಹಾಳಾಗಿವೆ. ಟೆಂಗುಂಟಿ ಸೇರಿ ಕೆಲ ಗ್ರಾಮಗಳು ಜಲಾವೃತಗೊಂಡಿವೆ.

ಹಿರೇಮನ್ನಾಪುರ ಗ್ರಾಮದಲ್ಲಿ ಈರುಳ್ಳಿ, ಹತ್ತಿ, ಸಜ್ಜೆ, ಮೆಕ್ಕೆಜೋಳ, ತರಕಾರಿ ಬೆಳೆ, ಬೀಜೋತ್ಪಾದನೆ ಮಾಡುವ ಘಟಕದ ಬೆಳೆಗಳು ನಾಶವಾಗಿವೆ. ಬಳೂಟಗಿ, ಕುಷ್ಟಗಿ, ತಳುವಗೇರಾ, ಬಿಜಕಲ್ಲ, ತಾವರಗೇರಾ, ಹೊನಗಡ್ಡಿ, ನಿಡಶೇಸಿ ಮತ್ತು ಕುಷ್ಟಗಿಯ ಶಾಖಾಪುರ ರಸ್ತೆಯಲ್ಲಿನ ಮನೆ, ಗುಡಿಸಲುಗಳು ಜಲಾವೃತಗೊಂಡವು.

ರಾಯಚೂರು ಜಿಲ್ಲೆಯ ಮುದಗಲ್‌ ಬಳಿ ಸೋಮವಾರ ಸುರಿದ ಭಾರಿ ಮಳೆಗೆ ತಲೆಕಟ್ಟು ಗ್ರಾಮದ ಮುಖ್ಯರಸ್ತೆಯಲ್ಲಿನ ಸೇತುವೆ ಮುಳುಗಡೆಯಾಗಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಗರಿಷ್ಠ 491 ಮೀಟರ್‌ ಎತ್ತರದ ನಾಗರಾಳ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ.

ಧಾರವಾಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ರೈತ ಚನ್ನಪ್ಪ ಗುರಪ್ಪ ರೂಡಗಿ (48) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿದು, ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಗ್ರಾಮಗಳು, ಜಮೀನು ಜಲಾವೃತವಾಗಿದ್ದವು.ಉತ್ತರ ಕನ್ನಡ ಜಿಲ್ಲೆಯ
ಭಟ್ಕಳ ತಾಲ್ಲೂಕಿನ ಹೊನ್ನಗದ್ದೆಯಲ್ಲಿಯೂ ಸಿಡಿಲಿನಿಂದಾಗಿ ಮೂರು ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್‌ ಉಪಕರಣಗಳೆಲ್ಲ ಹಾಳಾಗಿವೆ.

ಶಿರಸಿ ತಾಲ್ಲೂಕಿನ ಮಂಜುಗುಣಿ, ಕಲ್ಲಳ್ಳಿ, ತೆಪ್ಪಾರ, ಖೂರ್ಸೆ ಸುತ್ತಮುತ್ತ ಸೋಮವಾರ ಸಂಜೆ ಭಾರಿ ಮಳೆಯಾಯಿತು.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಭಾರಿ ಮಳೆಯಾಗಿದೆ.

ಮೈಸೂರಿನಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಹುಣಸೂರು ತಾಲ್ಲೂಕಿನಲ್ಲಿ ಗುಡುಗು–ಸಿಡಿಲು ಸಹಿತ ಮಳೆ ಆರ್ಭಟಿಸಿದ್ದು, ಹುಣಸೂರಿನ ತಗ್ಗು ಪ್ರದೇಶಗಳಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದೆ.

ಹಾಸನದಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಮಳೆಗೆ ಟಿಪ್ಪು ನಗರದಲ್ಲಿನ ಎರಡು ಮನೆಗಳ ಗೋಡೆ ಕುಸಿದಿವೆ. ಸಕಲೇಶಪುರ ಪಟ್ಟಣದಲ್ಲಿ, ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಸಂಜೆ ಮಳೆಯಾಗಿದೆ.

ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದರೆ, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು
ಸಂಕಷ್ಟಕ್ಕೀಡಾಗಿದ್ದಾರೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ, ಸಂತೇಮರಹಳ್ಳಿ, ಗುಂಡ್ಲುಪೇಟೆಯಲ್ಲೂ ಸೋಮವಾರ ರಾತ್ರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT