ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನಮತ ಆರಂಭಿಸಿದ್ದೇ ಸತೀಶ ಜಾರಕಿಹೊಳಿ’

ತಮ್ಮನ ವಿರುದ್ಧ ಕಿಡಿಕಾರಿದ ರಮೇಶ ಜಾರಕಿಹೊಳಿ;
Last Updated 24 ಏಪ್ರಿಲ್ 2019, 14:59 IST
ಅಕ್ಷರ ಗಾತ್ರ

ಬೆಳಗಾವಿ: ‘ಭಿನ್ನಮತ ಆರಂಭಿಸಲು ಹಚ್ಚಿದ್ದೇ ಸಹೋದರ, ಸಚಿವ ಸತೀಶ ಜಾರಕಿಹೊಳಿ. ಅವರ ಗೋ ಮುಖವನ್ನು ನೋಡಿ ಮೋಸ ಹೋದೆ’ ಎಂದು ಕಾಂಗ್ರೆಸ್‌ ತೊರೆಯಲು ಸಿದ್ಧವಾಗಿರುವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಸಚಿವನಾಗಿ ಆರಾಮಾಗಿದ್ದೆ. ನನಗೆ ಇದರ ಜರೂರತ್ತು ಇರಲಿಲ್ಲ. ಆಗ ಮನೆಗೆ ಅಳುತ್ತ ಬಂದ ಸತೀಶ, ನನ್ನನ್ನು ಎತ್ತಿಕಟ್ಟಿದರು. ಅವರ ಗೋಮುಖ ನೋಡಿ ಮೋಸ ಹೋದೆ’ ಎಂದರು.

‘ಸೋದರ ಸತೀಶ ಜಾರಕಿಹೊಳಿಯೇ ನನಗೆ ಮೋಸ ಮಾಡಿದ್ದು.ಬೇಕಿದ್ದರೆ ಡಾ.ಸುಧಾಕರ (ಚಿಕ್ಕಬಳ್ಳಾಪುರ ಶಾಸಕ) ಅವರನ್ನು ಕೇಳಿ ನೋಡಿ’ ಎಂದರು.

‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳುವಂತೆ ನನ್ನ ಸ್ಥಿತಿ ತೋಳ ಬಂತು ತೋಳ ಎನ್ನುವಂತಾಗಿದೆ. ನಾನೊಬ್ಬನೇ ರಾಜೀನಾಮೆ ನೀಡುವುದಾಗಿದ್ದರೆ ಬಹಳ ಹಿಂದೆಯೇ ನೀಡುತ್ತಿದ್ದೆ. ಆದರೆ, ಎಲ್ಲರೂ ಒಟ್ಟಾಗಿ ನೀಡೋಣವೆಂದು ಕೆಲವರು ಸಲಹೆ ನೀಡಿದ್ದರು. ಅದಕ್ಕಾಗಿ ಇಷ್ಟು ದಿನಗಳವರೆಗೆ ಕಾದೆ. ಬೆಂಗಳೂರಿನಲ್ಲಿ ಅತೃಪ್ತ ಶಾಸಕರೆಲ್ಲರೂ ಒಟ್ಟಾಗಿ ಸೇರಿ, ಯಾವತ್ತು ರಾಜೀನಾಮೆ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ’ ಎಂದು ನುಡಿದರು.

‘ಸತೀಶ ಸಂಪೂರ್ಣವಾಗಿ ಹತಾಶರಾಗಿದ್ದಾರೆ. ಸೋಲು ಒಪ್ಪಿಕೊಂಡಿದ್ದಾರೆ. ಅವರ ಕತೆ ಮುಗಿದಿದೆ. ಅವರು ಆರೋಪಿಸಿರುವಂತೆ ಅಂಬಿರಾವ್‌ ಪಾಟೀಲಗೂ ಈ ಬೆಳವಣಿಗೆಗಳಿಗೂ ಸಂಬಂಧವಿಲ್ಲ. ಅಂಬಿರಾವ್‌ ನನ್ನ ಪತ್ನಿ ಸಹೋದರ. ನನ್ನ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ ಅಷ್ಟೇ’ ಎಂದರು.

ಯಮಕನಮರಡಿಯಲ್ಲಿ ಸ್ಪರ್ಧೆ:

‘ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಗೋಕಾಕದಲ್ಲಿ ನಡೆಯುವ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರವನ್ನು ಇನ್ನೊಬ್ಬ ಸಹೋದರ ಲಖನ್‌ ಜಾರಕಿಹೊಳಿಗೆ ಬಿಟ್ಟುಕೊಡುತ್ತೇನೆ. ಯಮಕನಮರಡಿ ಕ್ಷೇತ್ರದಿಂದ (ಸತೀಶ ಅವರ ಕ್ಷೇತ್ರ) ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.

ಅವನೊಬ್ಬ ಸುಳ್ಳುಗಾರ, ಅಳಬುರುಕ:

‘ರಮೇಶ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನೊಬ್ಬ ಅಪ್ಪಟ್ಟ ಸುಳ್ಳುಗಾರ, ಕಣ್ಣೀರು ಹಾಕುವ ಜಾಯಮಾನದವನು. ಭಿನ್ನಮತ ಮಾಡುವಂತೆ ನಾನು ಹೇಳಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಅಣ್ಣನ ವಿರುದ್ಧವೇ ಏಕವಚನದಲ್ಲಿ ಹರಿಹಾಯ್ದರು.

‘ಪಿಎಲ್‌ಡಿ ಚುನಾವಣೆ ಸಂದರ್ಭದಲ್ಲಿ ಸಿ.ಎಂ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದಿತ್ತು. ಹೊರಜಿಲ್ಲೆಯವರ ಪ್ರವೇಶವನ್ನು ತಡೆಯುವುದಕ್ಕಾಗಿ ಭಿನ್ನಮತವನ್ನು ಸ್ಥಗಿತಗೊಳಿಸಿದ್ದೆ. ಆದರೆ, ರಮೇಶ ಮುಂದುವರಿಸಿದರು. ಅವನೊಬ್ಬ ಜವಾಬ್ದಾರಿ ಇಲ್ಲದ ವ್ಯಕ್ತಿ. ಇವತ್ತು ಈ ರೀತಿ ಹೇಳುತ್ತಾನೆ. ಮತ್ತೆ ನಾಳೆ ಮತ್ತೊಂದು ಹೇಳುತ್ತಾನೆ. ಅವನಿಗೆ ರಾಜಕೀಯ ಬದ್ಧತೆ ಇಲ್ಲ’ ಎಂದು ಕಿಚಾಯಿಸಿದರು.

‘ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಈ ಗುಂಪುಗಾರಿಕೆಗೂ ಸಂಬಂಧವಿಲ್ಲ. ಅವರ ಹೆಸರನ್ನು ಕೆಡಿಸಲು ರಮೇಶ ಪ್ರಯತ್ನಿಸುತ್ತಿದ್ದಾರೆ. ರಮೇಶ ಏನನ್ನೋ ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೀಗಾಡುತ್ತಿದ್ದಾರೆ. ಅದೇನು ಎನ್ನುವುದನ್ನು ಅವರನ್ನೇ ಕೇಳಿನೋಡಿ’ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT