ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’

ತಂದೆಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು * ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
Last Updated 12 ಅಕ್ಟೋಬರ್ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು:ನಿಗೂಢವಾಗಿ ಮೃತಪಟ್ಟ ರಮೇಶ್‌ ಅವರ ಮೃತದೇಹ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಪತ್ನಿ ಹಾಗೂ ಮಕ್ಕಳ ಗೋಳಾಟ ಅಲ್ಲಿ ಸೇರಿದ್ದವರ ಕಣ್ಣುಗಳನ್ನು ಒದ್ದೆಯಾಗಿಸಿತು.

ಮೃತದೇಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ರಮೇಶ್ ಅವರ ಸ್ನೇಹಿತರು ಹಾಗೂ ಆಪ್ತರು, ಜ್ಞಾನಭಾರತಿ ಕ್ಯಾಂಪಸ್‌ಗೆ ಬರಲಾರಂಭಿಸಿದ್ದರು. ಮೃತದೇಹವಿದ್ದ ಸ್ಥಳದ ಸುತ್ತಲೂ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿತ್ತು. ಇನ್‌ಸ್ಪೆಕ್ಟರ್ ಶಿವಾರೆಡ್ಡಿ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮೃತದೇಹವಿದ್ದ ಸ್ಥಳಕ್ಕೆ ಯಾರನ್ನೂ ಬಿಡಲಿಲ್ಲ.

ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದ ಪತ್ನಿ ಸೌಮ್ಯಾ, ಮಕ್ಕಳಾದ ಮೋಹಿತ್ ಹಾಗೂ ಶ್ರೇಯಾ ಅವರನ್ನೂ ಆರಂಭದಲ್ಲಿ ದೂರದಲ್ಲೇ ನಿಲ್ಲಿಸಲಾಗಿತ್ತು. ಅಲ್ಲಿಯೇ ಅವರು ಗೋಳಾಡಿ ಕಣ್ಣೀರಿಟ್ಟರು. ಸಂಬಂಧಿಕರು ಎಷ್ಟೇ ಸಮಾಧಾನಪಡಿಸಿದರೂ ದುಃಖ ಕಡಿಮೆ ಆಗಲಿಲ್ಲ. ಮಕ್ಕಳಂತೂ ‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’ ಎಂದು ಬಿಕ್ಕಿ ಬಿಕ್ಕಿ ಅತ್ತರು. ಅಲ್ಲಿ ಸೇರಿದ್ದ ಜನ ಆ ದೃಶ್ಯ ಕಂಡು ಕಣ್ಣೀರಿಟ್ಟರು.

ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ: ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು.

‘ಕಾರಿನಲ್ಲಿದ್ದ ಬಟ್ಟೆಯಿಂದಲೇ ನೇಣು ಹಾಕಿಕೊಂಡು ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅವರ ಕಿಸೆಯಲ್ಲೇ ಮೊಬೈಲ್ ಸಹ ಒತ್ತು. ಅದನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಜ್ಞಾನಭಾರತಿ ಪೊಲೀಸರು ಹೇಳಿದರು.

ಗೆಳೆಯನಿಗೆ ಕೊನೆಯ ಕರೆ: ‘ಬೆಳಿಗ್ಗೆ 9 ಗಂಟೆಗೆ ಕಾರಿನಲ್ಲಿ ಮನೆಯಿಂದ ಹೊರಟಿದ್ದ ರಮೇಶ್, ಜ್ಞಾನಭಾರತಿ ಕ್ಯಾಂಪಸ್‌ನ ಸಾಯ್‌ ಮೈದಾನ ರಸ್ತೆಯಲ್ಲಿ ಕಾರು ನಿಲ್ಲಿಸಿ ಸ್ನೇಹಿತನಿಗೆ ಕರೆ ಮಾಡಿದ್ದರು. ‘ನಾನು ನಿಯತ್ತಿನಿಂದ ಬದುಕಿದ್ದೇನೆ. ಈಗ ಮನೆ ಕಟ್ಟಿಸ್ತಾ ಇದ್ದೇನೆ. ನನ್ನ ಮನೆ ಮೇಲೂ ದಾಳಿ ಆಗಿದೆ. ಐ.ಟಿಯವರು ಅನ್ಯಾಯ ಮಾಡುತ್ತಿದ್ದಾರೆ. ಅವರ ವಿಚಾರಣೆ ಎದುರಿಸುವ ಶಕ್ತಿ ನನಗಿಲ್ಲ. ಅವರು ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ. ಈಗ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇನೆ’ ಎಂದು ಕರೆ ಕಡಿತ ಮಾಡಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದರು’ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT