ಸೋಮವಾರ, ಜೂನ್ 21, 2021
27 °C
ಶರಬತ್‌ ಕುಡಿಸಿದವರೆಲ್ಲ ನಾಯಕರಾಗಲ್ಲ

ರಮೇಶ– ಲಕ್ಷ್ಮಿ– ಡಿಕೆಶಿ ಒಂದೇ ಪರಿವಾರವಿದ್ದಂತೆ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲಾ ಉಸ್ತುವಾರಿ ಸಚಿವ, ಸಹೋದರ ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಒಂದೇ ಪರಿವಾರವಿದ್ದಂತೆ ಇದ್ದರು. ಈಗ ಅವರು ತಮ್ಮ ತಮ್ಮೊಳಗೆ ಕಿತ್ತಾಡಿಕೊಂಡಿದ್ದು, ಕಾರಣವೇನೆಂದು ನನಗೆ ಗೊತ್ತಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘20 ವರ್ಷಗಳಿಂದಲೂ ಅವರೆಲ್ಲ ಒಂದೆಯಾಗಿದ್ದರು. ಅವರ ಹಳೆಯ ವ್ಯವಹಾರಗಳೆಲ್ಲ ಗೊತ್ತಿಲ್ಲ. ಅವರ ನಡುವೆ ನಾನು ಯಾವತ್ತೂ ಮಧ್ಯೆಪ್ರವೇಶ ಮಾಡಿಲ್ಲ. ಅವರ ಪರಿವಾರವನ್ನೂ ಒಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪಿಎಲ್‌ಡಿ ಬ್ಯಾಂಕಿನ ಚುನಾವಣೆಯನ್ನು ನಾನು ನನ್ನ ಪಾಡಿಗೆ ಮಾಡುತ್ತಿದ್ದೆ. ರಮೇಶ ಅವರೇ ಮಧ್ಯೆಪ್ರವೇಶ ಮಾಡಿ, ನನಗೆ ಬೆಂಬಲ ನೀಡಿದರು. ಈಗ ಚುನಾವಣೆ ಮುಗಿದುಹೋಗಿದ್ದು, ಅದಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

ಶರಬತ್‌ ಕುಡಿಸಿದವರೆಲ್ಲ ನಾಯಕರಾಗಲ್ಲ;

‘ಪ್ರತಿಭಟನೆ ನಡೆಸುತ್ತಿದ್ದವರಿಗೆ ಎಳನೀರು, ಶರಬತ್‌ ಕುಡಿಸಿದವರೆಲ್ಲ ಬೆಳಗಾವಿ ಜಿಲ್ಲೆಯ ನಾಯಕರಾಗಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ಗೆ ಟಾಂಗ್‌ ನೀಡಿದರು. ಇತ್ತೀಚೆಗೆ ಕಬ್ಬಿನ ಬಾಕಿ ಬಿಲ್‌ಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ್ದ ರೈತರ ಜೊತೆ ಸಂಧಾನ ನಡೆಸಿದ ಶಿವಕುಮಾರ್‌, ಎಳನೀರು ಕುಡಿಸಿ, ಧರಣಿ ಅಂತ್ಯಗೊಳಿಸಿದ್ದನ್ನು ಸ್ಮರಿಸಬಹುದು.

‘ನಾವು ಕೂಡ ಬೇರೆ ಜಿಲ್ಲೆಗಳಿಗೆ ಹೋದಾಗ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿ ಮಾಡಿದ್ದೇವೆ. ಇದೇ ರೀತಿ ಜ್ಯೂಸ್‌ ಕುಡಿಸಿ, ಎಬ್ಬಿಸಿ ಕಳುಹಿಸಿದ್ದೇವೆ. ಇದರಲ್ಲಿ ಹೊಸದೇನಿಲ್ಲ. ರಾಜಕೀಯ ಬೆರೆಸಬಾರದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು