ಲಾಡ್ಜ್‌ನಲ್ಲಿ ಸೆರೆಸಿಕ್ಕ ‘ರಣಂ’ ನಿರ್ಮಾಪಕ

ಶುಕ್ರವಾರ, ಏಪ್ರಿಲ್ 19, 2019
31 °C
ಚಿತ್ರೀಕರಣದ ವೇಳೆ ತಾಯಿ– ಮಗು ಮೃತಪಟ್ಟ ಪ್ರಕರಣ

ಲಾಡ್ಜ್‌ನಲ್ಲಿ ಸೆರೆಸಿಕ್ಕ ‘ರಣಂ’ ನಿರ್ಮಾಪಕ

Published:
Updated:
Prajavani

ಬೆಂಗಳೂರು: ‘ರಣಂ’ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತಾಯಿ–ಮಗು ಮೃತಪಟ್ಟ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ನಿರ್ಮಾಪಕ ಆರ್‌. ಶ್ರೀನಿವಾಸ್ ಅವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜಪೇಟೆಯ ಕೆಂಪೇಗೌಡ ನಗರದ ನಿವಾಸಿಯಾದ ಶ್ರೀನಿವಾಸ್, ರೇಷ್ಮೆ ವ್ಯಾಪಾರಿ. ಅದರ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದರು. ತಾಯಿ– ಮಗು ಮೃತಪಟ್ಟ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಬಾಗಲೂರು ಪೊಲೀಸರು ಹೇಳಿದರು. 

‘ಸಿನಿಮಾದ ಸ್ಟಂಟ್ ಮಾಸ್ಟರ್‌ ಸುಭಾಷ್‌ ಅವರನ್ನು ಕೆಲವು ದಿನಗಳ ಹಿಂದಷ್ಟೇ ಬಂಧಿಸಲಾಗಿದೆ.  ನಿರ್ದೇಶಕ ವಿ. ಸಮುದ್ರಂ, ವ್ಯವಸ್ಥಾಪಕ ಕಿರಣ್, ಸಾಹಸ ನಿರ್ದೇಶಕ ವಿಜಯನ್ ಹಾಗೂ ಕೆಲ ತಂತ್ರಜ್ಞರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ತಮಿಳುನಾಡಿಗೆ ಹೋಗಿದ್ದರು: ‘ನಗರದಿಂದ ಪರಾರಿಯಾಗಿದ್ದ ಶ್ರೀನಿವಾಸ್, ತಮಿಳುನಾಡಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರನ್ನು ಬಂಧಿಸುತ್ತಿದ್ದಂತೆ ಆ ಬಗ್ಗೆ ಪ್ರಶ್ನಿಸಲಾಯಿತು. ‘ರೇಷ್ಮೆ ವ್ಯಾಪಾರಕ್ಕೆ ಹೋಗಿದ್ದೆ’ ಎಂದು ಉತ್ತರಿಸಿದರು’ ಎಂದು ಪೊಲೀಸರು ಹೇಳಿದರು.

ದಿನಕ್ಕೊಂದು ಸಿಮ್‌ ಬಳಕೆ
‘ಪೊಲೀಸರಿಗೆ ತಾವಿರುವ ಜಾಗ ಗೊತ್ತಾಗಬಾರದೆಂದು ಶ್ರೀನಿವಾಸ್, ದಿನಕ್ಕೊಂದು ಸಿಮ್ ಕಾರ್ಡ್‌ ಬಳಕೆ ಮಾಡುತ್ತಿದ್ದರು’ ಎಂದು ಹಿರಿಯ ‍ಪೊಲೀಸ್ ಅಧಿಕಾರಿ ಹೇಳಿದರು.

‘ಗುರುವಾರ ಸಂಜೆಯಷ್ಟೇ ನಗರಕ್ಕೆ ಬಂದಿದ್ದ ಅವರು ಮನೆಗೂ ಹೋಗದೆ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಲಾಡ್ಜ್‌ಗೆ ಹೋಗಿ ಬಂಧಿಸಲಾಯಿತು. ‘ಮನೆ ಬಳಿ ಪೊಲೀಸರು ಓಡಾಡುತ್ತಿದ್ದ ಬಗ್ಗೆ ತಿಳಿದಿದ್ದರಿಂದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದೆ’ ಎಂಬುದಾಗಿ ಹೇಳುತ್ತಿದ್ದಾರೆ’ ಎಂದು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !