ಬುಧವಾರ, ಏಪ್ರಿಲ್ 8, 2020
19 °C

ಅಂಬಿ ಅಜಾತಶತ್ರು; ಆದರೆ ಅವನಿಗೆ ಅವನೇ ಶತ್ರು

ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನನ್ನ 50 ವರ್ಷಗಳ ಗೆಳೆಯ ಅಂಬಿ. ಅವನು ಎಲ್ಲರಿಗೂ ಅಜಾತಶತ್ರುವಾಗಿದ್ದ; ಆದರೆ ಅವನಿಗೆ ಅವನೇ ಶತ್ರುವಾಗಿಬಿಟ್ಟ. ಎಲ್ಲ ವಿಷಯಗಳಲ್ಲೂ ಡೋಂಟ್‌ಕೇರ್‌ ಸ್ವಭಾವ. ಅವನ ಬಗ್ಗೆಯೇ ಅವನು ಕೇರ್‌ ತಗೊಳ್ಳಿಲ್ಲ.

ಏನ್‌ ಮಾಡೋದು? ಅವನ ಸ್ಟೈಲೇ ಬೇರೆ. ಅವನು ಬದುಕಿದ್ದೇ ಹಾಗೆ. ಯಾವುದೇ ದೊಡ್ಡ ಸ್ಟಾರ್‌ಗಳಾದರೂ ಅವನ ಬಳಿಗೇ ಬರಬೇಕು. ಯಾವ ಮುಖ್ಯಮಂತ್ರಿಗಳಿಗೂ ಕೇರ್‌ ಮಾಡುತ್ತಿರಲಿಲ್ಲ. ಯಾವುದನ್ನೂ ಯಾರ ಬಳಿಯೂ ಅವನು ಬೇಡಲಿಲ್ಲ.  ಸಿನಿಮಾದಲ್ಲಿ ಮತ್ತು ರಾಜಕೀಯದಲ್ಲಿ ಎಲ್ಲವೂ ಅವನನ್ನು ಹುಡುಕಿಕೊಂಡು ಬಂದವು. ಆದರೆ ಸಾವು ಕೂಡಾ ಹೀಗೆ ಹುಡುಕಿಕೊಂಡು ಬರುತ್ತದೆ ಎಂದು ನಾನಂದುಕೊಂಡಿರಲಿಲ್ಲ.

ನಮ್ಮದು ಮೈಸೂರಿನ ಸ್ನೇಹ. ಮೊದಲು ನನ್ನ ತಮ್ಮನಿಗೆ ಫ್ರೆಂಡ್‌. ಆಮೇಲೆ ನನಗೆ ಕ್ಲೋಸ್‌ ಆದ. ನನಗೂ ಅವನಿಗೂ ವಯಸ್ಸಿನಲ್ಲಿ ಎರಡು ವರ್ಷದ ಅಂತರ. ಕಾಲೇಜು ಇಬ್ಬರದೂ ಬೇರೆ ಬೇರೆ. ಆದರೆ ಮಹಾರಾಣಿ ಕಾಲೇಜಿನ ಹುಡುಗಿಯರನ್ನು ನೋಡಲು ಇಬ್ಬರೂ ಬೈಕ್‌ನಲ್ಲಿ ರೌಂಡ್‌ ಹೊಡೆಯುತ್ತಿದ್ದೆವು. ನನ್ನ ಹತ್ರ ಒಂದು  ಜಾವಾ ಮೋಟರ್‌ಸೈಕಲ್‌ ಇತ್ತು.  ನನ್ನ ಮನೆಗೆ ಬರೋನು, ಬೈಕ್‌ ಹತ್ತಿಕೊಂಡು ಇಬ್ಬರೂ ಹೊರಟುಬಿಡುತ್ತಿದ್ದೆವು. ಬೆಂಗಳೂರು ಟ್ರಿಪ್‌ ಮಾಮೂಲು.

ನನ್ನ ತಂದೆಯವರು ಬೇಡ ಎಂದರೂ ಶೂಟಿಂಗ್‌ ಸಲುವಾಗಿ ಗೋವಾಕ್ಕೆ  ನಾವಿಬ್ಬರೇ ಬೈಕ್‌ನಲ್ಲಿ ಹೋಗಿಬರುತ್ತಿದ್ದೆವು. ಮೈಸೂರಿನಿಂದ ಬೆಂಗಳೂರಿಗೆ ಬಂದು ನಾವು ನೋಡಿದ ಸಿನಿಮಾಗಳಿಗೆ ಲೆಕ್ಕವಿಲ್ಲ. ಬಹುತೇಕ ರಾಜ್‌ಕುಮಾರ್‌ ಸಿನಿಮಾಗಳನ್ನು ನಾವಿಬ್ಬರೂ ಒಟ್ಟಿಗೇ ನೋಡಿದ್ದೇವೆ. ಕ್ಯಾಬರೆ ನೋಡೋದಕ್ಕೆಂದು ಎಷ್ಟೋ ಸಲ ಬೆಂಗಳೂರಿಗೆ ಬಂದದ್ದುಂಟು.

ನಮ್ಮ ಮನೆಯ ಹತ್ತಿರ ಒಂದು ಕಟ್ಟೆ ಇತ್ತು. ಅದು ಫೇಮಸ್‌ ಕಟ್ಟೆ. ಈಗ ಖ್ಯಾತರಾಗಿರುವ ಬಹುತೇಕರು ಆ ಕಟ್ಟೆಯಲ್ಲಿ ಬಂದು ಕುಳಿತುಕೊಳ್ಳೋರು. ಅಡಗೂರು ವಿಶ್ವನಾಥ್‌, ಕೆ.ಜೆ.ಜಾರ್ಜ್‌, ಅಂಬಿ ಎಲ್ಲರಿಗೂ ಅದೇ ಕೇಂದ್ರ. ಸ್ನೇಹಿತರೆಂದರೆ ಪ್ರಾಣ. ಎಕ್ಸ್‌ಟ್ರಾ ಆರ್ಡಿನರಿ ಡ್ರೈವರ್‌. ಸಖತ್ತಾಗಿ ಕಾರು ಓಡಿಸೋನು. ವಾರಕ್ಕೆ ಮೂರು ದಿನ ಬೆಂಗಳೂರಿಗೆ ಬರುತ್ತಿದ್ದೆವು. ರಾಜ್‌ಕಪೂರ್‌ ಅವರ ಸಂಗಮ್‌ ಸಿನಿಮಾ ನೋಡಲು ಬೆಂಗಳೂರಿಗೆ ಬಂದದ್ದು ಈಗಲೂ ನೆನಪಿದೆ. ಅಲಂಕಾರ್‌ ಥಿಯೇಟರಿನಲ್ಲೇ ಸಿನಿಮಾ ನೋಡಬೇಕು ಎನ್ನುವ ಹುಚ್ಚು. ಜತೆಗೆ ವಾಪಸ್‌ ಮೈಸೂರಿಗೆ ಬರುವಾಗ ಪಾರ್ಟಿ ಮಾಡ್ಕೊಂಡು ಬರಬಹುದಲ್ಲ?

ಉಸಿರಾಟದ ಸಮಸ್ಯೆ ಸಿಗರೇಟ್‌ ಸೇದೋದರಿಂದ ಬಂದಿರಬೇಕು. ಸಿಂಗಪುರಕ್ಕೆ ಚಿಕಿತ್ಸೆಗೆ ಹೋದಾಗಲೂ ಉಸಿರಾಟದ್ದೇ ಸಮಸ್ಯೆ ಆಗಿತ್ತು.  ಡ್ರಿಂಕ್ಸ್‌. ಸಿಗರೇಟ್‌ ಇದ್ದರೂ  ಆರೋಗ್ಯ ಚೆನ್ನಾಗಿಯೇ ಇತ್ತು. ಹಾಗಂತ ಅವರ ಬ್ರದರ್‌ ಡಾಕ್ಟರ್‌ ಶೇಖರ್‌ ಅವರೇ ಇತ್ತೀಚೆಗೆ ಹೇಳಿದ್ದರು. ಏನ್‌ ಕಾಂಪ್ಲಿಕೇಶನ್‌ ಆಯಿತೋ ದೇವರೇ ಬಲ್ಲ. ಶನಿವಾರ ನಡೆದ ಮಂಡ್ಯದ ಬಸ್‌ ಅಪಘಾತದ ಬಗ್ಗೆ ಟೀವಿಯವರು ಬಂದು ಕೇಳಿದಾಗ ಮಾತನಾಡಿದ್ರು. ಬಹಳ ಬೇಜಾರ್‌ ಮಾಡ್ಕೊಂಡಿದ್ರು. ಹುಷಾರಿಲ್ಲದ್ದರಿಂದ ತಕ್ಷಣ ಹೋಗಲಿಕ್ಕೆ ಆಗ್ತಿಲ್ಲವಲ್ಲ ಅಂತ ಬೇಸರ ಮಾಡ್ಕೊಂಡಿದ್ರು.

ಮೂರು ನಾಲ್ಕು ತಿಂಗಳಿಂದ ಪ್ರತಿವಾರವೂ 2–3 ಸಲ ಒಟ್ಟಿಗೆ ಸೇರುತ್ತಿದ್ದೆವು. ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ ಮತ್ತು ನಾನು. ರಾತ್ರಿ ಸೇರಿದರೆ ಬೆಳಗಿನ ಜಾವ ಮೂರು ಗಂಟೆಯವರೆಗೂ ಹರಟೆ, ನಗು, ಇಸ್ಪೀಟು, ಮಾತು. ಮೊನ್ನೆ ಗುರುವಾರ ಕೂಡಾ ಒಟ್ಟಿಗೇ ಇದ್ದೆವು. ಭಾನುವಾರದ ಚಲನಚಿತ್ರ ಕಲಾವಿದರ ಸಂಘದ ಸಮಾರಂಭದ ಸಂಘಟನೆ ಮಾಡುವುದರಲ್ಲಿ ಬ್ಯುಸಿ ಆಗಿದ್ದರು. ‘ಭಾನುವಾರ ಬಂದ್ಬಿಡಪ್ಪ, ಒಟ್ಟಿಗೇ ತಿಂಡಿ ತಿಂದು ಅಲ್ಲಿಗೆ ಹೋಗೋಣ, ಅಲ್ಲೇ ಒಟ್ಟಿಗೇ ಊಟ ಮಾಡೋಣ ಎಂದಿದ್ದರು. ಅದು ಮಂಡ್ಯ ಘಟನೆಯ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯೇ ಕ್ಯಾನ್ಸಲ್‌ ಮಾಡಿದೆವು. ಈಗ ನೋಡಿದರೆ ಭಾನುವಾರದ ಊಟ ಬರಲೇ ಇಲ್ಲ.

ತಿರುಪತಿಗೆ ಪ್ರತಿವರ್ಷ ಹೋಗ್ತಿದ್ದ. ದೇವರು ಅಂದರೆ ಇತರರಂತೆ ಭಾರೀ ಭಕ್ತಿ ತೋರಿಸುವವನಲ್ಲ. ಸರಳವಾಗಿ ಕೈಮುಗಿಯುತ್ತಿದ್ದ. ರಾಜ್‌ ಕುಮಾರ್‌ ಜೊತೆಗೆ ನಾವೆಲ್ಲರೂ  ಶಬರಿಮಲೆಗೆ ಹೋಗಿದ್ದೆವು.  ಆಮೇಲೆ ನಾನು, ವಿಷ್ಣು ಮತ್ತು ಅಂಬಿ  8–10 ಸಲ ಮಾಲೆ ಹಾಕ್ಕೊಂಡು ಹೋಗಿದ್ದೇವೆ. ವಿಷ್ಣು ನಡುವೆ ಬಿಟ್ಟುಬಿಟ್ಟ. ಕೊನೆಗೆ ನಾವಿಬ್ಬರು ಕಾರಿನಲ್ಲಿ ಹೋಗುತ್ತಿದ್ದೆವು. ಗುಂಡ್ಲುಪೇಟೆಯಿಂದ ನಮಗೆ ಹತ್ತಿರ. ಅಲ್ಲಿ ಅವರ ಅಕ್ಕ ಒಬ್ಬರಿದ್ದರು. ವಾಪಸ್‌ ಬರುವಾಗ ಶಬರಿಮಲೆಯಿಂದಲೇ ಫೋನು. ಮನೇಲಿ ಖೈಮಾ ಚಾಪ್ಸ್‌ ಬಿರಿಯಾನಿ ಏನೇನು ಬೇಕು ಅಂತ! ಗುಂಡ್ಲುಪೇಟೆಗೆ ಬಂದ ತಕ್ಷಣ ಅಕ್ಕನ ಮನೇಲೇ ಮಾಲೆ ತೆಗೆದು ಭರ್ಜರಿ ನಾನ್‌ವೆಜ್‌ ಊಟ.

1981 ರಲ್ಲಿ  ಭರ್ಜರಿ ಬೇಟೆ ಚಿತ್ರದ ಶೂಟಿಂಗ್ ನಲ್ಲಿ ನಡೆದ ಅಪಘಾತ ನೆನಪಾಗುತ್ತಿದೆ. ರೈಲು ಮೇಲೆ ನಿಂತು ಹಾಡಿನ ದೃಶ್ಯ. ನಾವು ರೈಲು ಸ್ಪೀಡ್‌ ಹೆಚ್ಚಿಸಲು ಸೂಚನೆ ನೀಡಿದೆವು. ನಾವು ಆ ಕಡೆ ನೋಡ್ತಿದ್ದೆವು. ಆದರೆ ಕೇಬಲ್‌ ವೈರ್‌ ಒಂದು ಕೆಳಗೆ ನೇತಾಡುತ್ತಿದ್ದದ್ದು ನೋಡಲೇ ಇಲ್ಲ. ವೈರ್‌ ತಾಗಿ ಎಲ್ಲ ಬಿದ್ದುಹೋಗ್ಬಿಟ್ರು, ಕ್ಯಾಮರಾ ಬಿದ್ದು ಹೋಯಿತು. ಶಂಕರ್‌ ನಾಗ್‌ ಎರಡು ಬೋಗಿಗಳ ನಡುವಿನ ಗ್ಯಾಪ್‌ನಲ್ಲಿ ಬಿದ್ದರು. ಅವರು ಸತ್ತೇ ಹೋದರು ಎಂದು ಎಲ್ಲರೂ ಅಂದುಕೊಂಡಿದ್ದೆವು. ಅಂಬರೀಶ್‌ ಕೆಳಗೆ ಬೀಳಲಿಲ್ಲ. ಆದರೆ ಶಂಕರ್‌ನಾಗ್‌ ಬಿದ್ದದ್ದು ನೋಡಿ ಪ್ರಜ್ಞೆ ತಪ್ಪಿದ. ಆದರೆ ಶಂಕರ್‌ನಾಗ್‌ ಪುಣ್ಯಕ್ಕೆ ಹುಕ್‌ ಒಂದಕ್ಕೆ ಶರ್ಟು  ಸಿಕ್ಕಿ ಬಚಾವಾದರು. ನಾನು ಉಡುಪಿ ಜಯರಾಂ ಓಡಿ ಹೋಗಿ ಅಂಬರೀಶ್‌ಗೆ ನೀರು ತಟ್ಟಿ ಎಚ್ಚರಿಸಿದೆವು.

ಅಂಬಿಗೆ ಜಗತ್ತಿನಾದ್ಯಂತ ಫ್ರೆಂಡ್ಸ್‌ ಇದ್ದರು. ಅಮೆರಿಕ, ಯೂರೋಪ್‌ ದೇಶಗಳು, ನ್ಯೂಜಿಲೆಂಡ್‌ ಆಸ್ಟ್ರೇಲಿಯಾಗಳಿಂದ ಗೆಳೆಯರು ಹುಡುಕಿಕೊಂಡು ಬರುತ್ತಿದ್ದರು. ತೀರಾ ಇತ್ತೀಚೆಗೆ ಮಲೇಷ್ಯಾದಿಂದ ಬಂದ ಗೆಳೆಯರ ಜತೆಗೆ ಗಾಲ್ಫ್‌ ಆಡಲು ಹೋಗಿದ್ದ.

ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳುವ ಮನುಷ್ಯ ಅವನಲ್ಲ. ಯಾರು ಪ್ರಾಬ್ಲಂ ತಂದ್ರೂ ತಾಳ್ಮೆಯಿಂದ ಕೇಳಿ ಪರಿಹರಿಸಲು ಯತ್ನಿಸುತ್ತಿದ್ದ. ಜನರ ಕೆಲಸ ಮಾಡಿಸುವಾಗ  ಯಾರನ್ನೂ ಕೇರ್‌ ಮಾಡ್ತಿರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್‌ ಅವರ ಹತ್ರ ಯಾವುದೋ ಟ್ರಾನ್ಸ್‌ಫರ್‌ ಗೆ ಹೋಗಿದ್ದ. ‘ಮಾಡ್ತೀರಾ ಇಲ್ವಾ ಹೇಳ್ರಿ, ನಿಮಗೊಂದು  ಗುಡ್‌ಬೈ ’ ಅಂದು ಹೇಳಿ ಬಂದಿದ್ದ. ಆ ಬಳಿಕ ಅವರು ಮನೆಗೇ ಟ್ರಾನ್ಸ್‌ಫರ್‌ ಆರ್ಡರ್‌ ಕಳಿಸಿದ್ರು. ಜೆಎಚ್‌ ಪಟೇಲ್‌  ಮುಖ್ಯಮಂತ್ರಿ ಆಗಿದ್ದಾಗ ‘ಕಲಾವಿದರ ಸಂಘದ ಜಾಗ ಬೇರೆ ಯಾರಿಗೋ ಹೋಗುತ್ತಿದೆ’ ಎನ್ನುವ ಸುದ್ದಿ ಸಿಕ್ಕಿತು. ಆಗ ಡೆಂಟಲ್‌ ಪ್ರಾಬ್ಲಂ ಇದ್ದುದರಿಂದ ಪೈಪ್‌ ಮೂಲಕ ಆಹಾರ ಕೊಡ್ತಿದ್ರು. ಪೈಪ್‌ ಇಟ್ಕೊಂಡೇ ಪಟೇಲರ ಆಫೀಸಿಗೆ ಹೋದ ಅಂಬಿ, ಹಠ ಹಿಡಿದು ಜಾಗದ ಆರ್ಡರ್‌ ಮಾಡಿಸಿಕೊಂಡು ಬಂದ.

ಅಂಬರೀಷ ಇದ್ದದ್ದೇ ಹಾಗೆ. ಯಾರಿಗೂ ಹೆದರದಿದ್ದ ವಿಷ್ಣುವರ್ಧನ್‌, ಅಂಬಿಗೆ ಮಾತ್ರ ಹೆದರುತ್ತಿದ್ದ. ರಾಜ್‌ಕುಮಾರ್ ಅವರ ಬಗ್ಗೆ ಅಂಬಿಗೆ ತುಂಬ ಗೌರವ ಇತ್ತು. ಆದರೆ ಅವರನ್ನೂ ತಮಾಷೆ ಮಾಡುತ್ತಿದ್ದ. ಅವರು 8 ಗಂಟೆಗೆ ಸೆಟ್‌ಗೆ ಬಂದರೆ ಇವನು 11 ಗಂಟೆಗೆ ಹೋಗುತ್ತಿದ್ದ. ರಾಜ್‌ಕುಮಾರ್‌ ಗುರುವಾರ ಮಟನ್‌ ತಿನ್ನಲ್ಲ ಅಂತಿದ್ರು. ಅದನ್ನು ಅಂಬಿಯೇ ಬಿಡಿಸಿಬಿಟ್ಟಿದ್ದು. ಪಾರ್ವತಮ್ಮ ಅವರಿಗೆ ಒಂದು ದಿನ ‘ಅವರನ್ಯಾಕ್ರೀ ಮನೇಲಿ ಕೂಡಿ ಹಾಕಿದ್ದೀರಿ, ಬಿಡ್ರಿ, ನಾವೇ ಅವರನ್ನು ಸುತ್ತಾಡಿಸಿಕೊಂಡು ಬರ್ತೀವಿ ಕಳಿಸಿ’ ಅಂತ ಒಮ್ಮೆ ಹೇಳಿದ್ದ. ‘ಓಹೋ ನಿನ್‌ ಜೊತೆಗೆ ಕಳಿಸೋದಾ?’ ಎಂದು ಪಾರ್ವತಮ್ಮ ಅವರು ಹೇಳಿದರೆ, ರಾಜ್‌ಕುಮಾರ್‌ ‘ಹೋಗ್ಲಿ ಏನಂತೆ.. ಒಂದು ರೌಂಡ್‌ ಹಾಕ್ಕೊಂಡು ಬಂದ್ರೆ ಆಯ್ತು..’ ಅಂದಿದ್ದರು.

ಅಂಬರೀಷ್‌ ಜೊತೆಗೆ ಕೊನೆಯದಾಗಿ ಗಾಡ್‌ಫಾದರ್‌ ಸಿನಿಮಾ ಮಾಡುವ ಆಸೆ ನನಗಿತ್ತು. ಅವನೂ ಒಪ್ಪಿದ್ದ. ಆದರೆ ಸಮಯ ಕೂಡಿ ಬರಲಿಲ್ಲ. ಷೇಕ್ಸ್‌ಪಿಯರ್‌ಗೆ ರೋಸ್‌ ಬಗ್ಗೆ ಹೇಳಿ ಅಂದಾಗ, ‘ರೋಸ್‌ ಈಸ್‌ ಎ ರೋಸ್ ಇಸ್‌ ಎ ರೋಸ್‌’ ಅಂದರಂತೆ, ಹಾಗೆ ನಮ್ಮ ಅಂಬಿ. ಅವನಿಗೆ ಅವನೇ ಸಾಟಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು