ಗುರುವಾರ , ಏಪ್ರಿಲ್ 2, 2020
19 °C

ಕ್ವಾರಂಟೈನ್ ವ್ಯಕ್ತಿ ಹೊರಬಂದರೆ ಪ್ರಕರಣ: ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೊರೊನಾ ವೈರಾಣು ಸೋಂಕು ಹರಡವುದನ್ನು ತಡೆಯುವುದಕ್ಕಾಗಿ ‘ಕ್ವಾರಂಟೈನ್’ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕುಟುಂಬದ ಸದಸ್ಯರಿಗೂ ಕಡ್ಡಾಯವಾಗಿ ಸ್ಟ್ಯಾಂಪಿಂಗ್ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದರು.

ಮಂಗಳವಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಅಧಿಕಾರಿಗಳೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಕ್ವಾರಂಟೈನ್‌ಗೆ ಒಳಗಾಗಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಸಂಚರಿಸುತ್ತಿರುವ ಮತ್ತು ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ ಎಂಬ ದೂರುಗಳಿವೆ. ಹೀಗಾಗಿ, ಕೂಡಲೇ ಕ್ವಾರಂಟೈನ್ ಇರುವರಿಗೆ ಕಡ್ಡಾಯವಾಗಿ ಸ್ಟ್ಯಾಂಪಿಂಗ್‌ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಕ್ವಾರಂಟೈನ್ ಇರುವ ವ್ಯಕ್ತಿಗಳ ಮನೆಗಳಲ್ಲಿ ನಿಗದಿತ ಮಾದರಿಯ ಎಚ್ಚರಿಕೆಯ ಪತ್ರವನ್ನು ಅಂಟಿಸಬೇಕು. ಅಂತಹ ವ್ಯಕ್ತಿಯ ಮನೆಗೆ‌ ಪೊಲೀಸ್ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ಅಕ್ಕಪಕ್ಕದ ಮನೆಯವರ ದೂರವಾಣಿ ಸಂಖ್ಯೆ ಪಡೆದು ನಿಗಾ ವಹಿಸಬೇಕು. ತಾಲ್ಲೂಕು, ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಈ ರೀತಿಯ ಕಾರ್ಯವಿಧಾನ ಪಾಲಿಸಬೇಕು’ ಎಂದು ತಿಳಿಸಿದರು.

ನಿಗಾ ವಹಿಸಬೇಕು: ‘ಆರೋಗ್ಯ ಇಲಾಖೆ ರಚಿಸಿರುವ ತಂಡಗಳು ಕ್ವಾರಂಟೈನ್ ವ್ಯಕ್ತಿ ಮತ್ತು ಕುಟುಂಬಗಳ ಸದಸ್ಯರ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು’ ಎಂದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ‘ಲಾಕ್‌ಡೌನ್ ಹಾಗೂ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಚಾಚೂತಪ್ಪದೆ ಪಾಲಿಸಬೇಕು. 144 ಕಲಂ (ನಿಷೇಧಾಜ್ಞೆ) ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು. ಅವಶ್ಯ ಸೇವೆಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಮೆಡಿಕಲ್, ದಿನಸಿ ಅಂಗಡಿ, ಅಂಚೆ ಇಲಾಖೆ, ಮಾಧ್ಯಮ ಪ್ರತಿನಿಧಿ ಸೇರಿದಂತೆ ತುರ್ತು ಸೇವೆ ಸಲ್ಲಿಸಲು ಅಗತ್ಯವಿರುವ ಜನರಿಗೆ‌ ಮಾತ್ರ ಅವಕಾಶ ಕಲ್ಪಿಸಬೇಕು’ ಎಂದು ಪೊಲೀಸರಿಗೆ ನಿರ್ದೇಶನ ನೀಡಿದರು.

ಸಾಮೂಹಿಕ ಪ್ರಾರ್ಥನೆ, ಉತ್ಸವಕ್ಕೆ ನಿರ್ಬಂಧ: ‘ಎಲ್ಲ‌ ಜಾತಿ-ಧರ್ಮಗಳ‌ ಧಾರ್ಮಿಕ ಉತ್ಸವ, ಆಚರಣೆ ಮತ್ತು ಸಾಮೂಹಿಕ ಪ್ರಾರ್ಥನೆ ಸೇರಿದಂತೆ ‌ಹೆಚ್ಚು ಜನರು ಸೇರುವ ಎಲ್ಲ ಆಚರಣೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಈ ಬಗ್ಗೆ ಎಲ್ಲ ಸಮುದಾಯದವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ ಮನವೊಲಿಸಬೇಕು. ಕರ್ತವ್ಯನಿರತ‌ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅನುಷ್ಠಾನ ಸುಲಭವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ‘ಗ್ರಾಮ ಮಟ್ಟದಲ್ಲಿ ಟಾಸ್ಕಫೋರ್ಸ್ ತಂಡಗಳನ್ನು ತಕ್ಷಣ ರಚಿಸಿಕೊಂಡರೆ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು ಸಾಧ್ಯವಾಗಲಿದೆ. ಸ್ಥಳೀಯವಾಗಿ ಲಭ್ಯವಿರುವ ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನಜಾಗೃತಿ ಮಾಡಿಸಬೇಕು’ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಎಂ.ಕೊಡ್ಲಿ, ‘ಪಡಿತರ, ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ಅವಕಾಶ ಮಾಡಿಕೊಡಬೇಕು’ ಎಂದು ತಹಶೀಲ್ದಾರರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಎಎಸ್ಪಿ ಅಮರನಾಥ್ ರೆಡ್ಡಿ, ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ, ಎಸಿಗಳಾದ ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಒಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು