ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ನೌಕರರಿಗೆ ಮುಂಬಡ್ತಿ: ಸಚಿವ ಸಂಪುಟ ಒಪ್ಪಿಗೆ

Last Updated 25 ಫೆಬ್ರುವರಿ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತ ಕಾಯಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಯಿತು.

‘ಕಾಯ್ದೆ ಅನುಷ್ಠಾನ ವಿಳಂಬ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಗ್ಗೆ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಪಟ್ಟು ಹಿಡಿದರು. ಕಾಯ್ದೆ ಜಾರಿಯ ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹೊಸ ಕಾಯ್ದೆಯಲ್ಲಿರುವಂತೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ ಬಳಿಕವೇ ಬಡ್ತಿ ನೀಡಬೇಕು ಎಂದು ಕೆಲವು ಸಚಿವರು ಸಲಹೆ ನೀಡಿದರು. ‘ಈ ಪ್ರಕ್ರಿಯೆಗೆ ಕನಿಷ್ಠ 2–3 ತಿಂಗಳುಗಳು ಬೇಕಾಗುತ್ತದೆ. ದಲಿತ ನೌಕರರು ಅಷ್ಟು ಸಮಯ ಕಾಯಲು ಸಿದ್ಧರಿಲ್ಲ. ವಿಳಂಬ ಮಾಡಿದರೆ ಸರ್ಕಾರದ ವಿರುದ್ಧ ಜನಾಂದೋಲನ ರೂ‍ಪಿಸುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಪರಮೇಶ್ವರ ಹಾಗೂ ಪ್ರಿಯಾಂಕ್‌ ಹೇಳಿದರು. ಬಳಿಕ ಸಂಪುಟ
ದಲ್ಲಿ ಸಹಮತ ವ್ಯಕ್ತವಾಯಿತು. ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಬಡ್ತಿ ಮೀಸಲು ಕಾಯ್ದೆ ರದ್ದತಿಯಿಂದ ಹಿಂಬಡ್ತಿಗೊಂಡಿರುವ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌.ಟಿ) ನೌಕರರ ಹಿತ ಕಾಪಾಡಲು ರೂಪಿಸಿದ ಹೊಸ ಕಾಯ್ದೆ ಜಾರಿಗೆ ಕಳೆದ ಸಂಪುಟ ಸಭೆಯಲ್ಲಿ ಸಂಪುಟ ಸಭೆ ಒಪ್ಪಿಗೆ ನೀಡಲಾಗಿತ್ತು. ಆದೇಶ ಹೊರಡಿಸುವ ವಿಷಯದಲ್ಲಿ ಗೊಂದಲ ಉಂಟಾಗಿತ್ತು.

‘ಹೊಸ ಕಾಯ್ದೆಯಲ್ಲಿರುವಂತೆ 1978 ಏ. 27ರಿಂದ ನೀಡಿರುವ ಬಡ್ತಿ ಮತ್ತು ಜ್ಯೇಷ್ಠತೆಗಳು ಸಿಂಧುವಾಗಿರಬೇಕು ಮತ್ತು ಭಂಗ ಉಂಟಾಗಬಾರದು. ಹಿಂಬಡ್ತಿಗೊಂಡವರನ್ನು, ಹಿಂಬಡ್ತಿ ದಿನದಿಂದ ಪೂರ್ವಾನ್ವಯವಾಗುವಂತೆ ಹುದ್ದೆ ಮತ್ತು ವೇತನ ಶ್ರೇಣಿಗೆ ನಿಯೋಜಿಸಿ ಆದೇಶ ಹೊರಡಿಸಬೇಕು’ ಎಂದು ರಾಜ್ಯ ಎಸ್‌.ಸಿ ಮತ್ತು ಎಸ್‌.ಟಿ ನೌಕರರ ಸಮನ್ವಯ ಸಮಿತಿ ಪಟ್ಟು ಹಿಡಿದಿತ್ತು. ಆ ಪ್ರಕಾರವೇ, ಕಾಯ್ದೆ ಜಾರಿಗೊಳಿಸಲು ಸಂಪುಟ ತೀರ್ಮಾನಿಸಿದೆ. ಈ ಮೂಲಕ ದಲಿತ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ‘ಇದರಿಂದ ಸುಮಾರು 50 ಸಾವಿರ ನೌಕರರಿಗೆ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಅನುಕೂಲವಾಗಲಿದೆ’ ಎಂದು ಸಚಿವರೊಬ್ಬರು ಮಾಹಿತಿ ನೀಡಿದರು.

‘ಉದಾಹರಣೆಗೆ ಕೃಷ್ಣ ಜಲ ಭಾಗ್ಯ ನಿಗಮದ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಒಬ್ಬರು ಹಿಂಬಡ್ತಿಗೆ ಒಳಗಾಗಿದ್ದರು ಎಂದಿಟ್ಟುಕೊಳ್ಳಿ. ಅವರಿಗೆ ಈಗ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಅವರಿಗೆ ಅದೇ ದರ್ಜೆಯ ವೇತನ ಶ್ರೇಣಿ ಸಿಗಲಿದೆ. ಆದರೆ, ಅವರಿಗೆ ನಿಗಮದ ಅದೇ ಹುದ್ದೆ ಸಿಗುವುದಿಲ್ಲ. ಯಾವುದಾದರೂ ಹುದ್ದೆ ಖಾಲಿಯಾದಾಗ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಇದರಿಂದ ದಲಿತ ಹಾಗೂ ಸಾಮಾನ್ಯ ನೌಕರರಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಅವರು ತಿಳಿಸಿದರು.

‘ಜ್ಯೇಷ್ಠತಾ ಪಟ್ಟಿ ಇಲ್ಲದೆ ಮುಂಬಡ್ತಿ ನೀಡುವುದು ಸೂಕ್ತವಲ್ಲ. ಒಂದು ವೇಳೆ ಜ್ಯೇಷ್ಠತಾ ಪಟ್ಟಿ ಇಲ್ಲದೆ ಬಡ್ತಿ ನೀಡಿದರೆ, ನ್ಯಾಯಾಲಯ ಆ ಪಟ್ಟಿಗೆ ತಡೆ ನೀಡಿದರೆ ಕಾಯ್ದೆ ಜಾರಿಗೆ ತಂದ ಉದ್ದೇಶ ವಿಫಲವಾಗುತ್ತದೆ.

ಯಾವುದೇ ಜ್ಯೇಷ್ಠತಾ ಪಟ್ಟಿ ಇಲ್ಲದೆ ಮುಂಬಡ್ತಿ ನೀಡುವುದು ಸೂಕ್ತವಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ವಾದಿಸಿತ್ತು. ಸದ್ಯ ಮುಂಬಡ್ತಿ ನೀಡಿ ಮುಂದಿನ ದಿನಗಳಲ್ಲಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಒಪ್ಪಿಗೆ ನೀಡಲಾಯಿತು.

ರಾಜ್ಯ ಸರ್ಕಾರ 2002ರಲ್ಲಿ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆ ಅನ್ನು ಸುಪ್ರೀಂಕೋರ್ಟ್‌ ಪೀಠ ರದ್ದುಪಡಿಸಿತ್ತು. ‘1978ರಿಂದ ಪೂರ್ವಾನ್ವಯವಾಗುವಂತೆ ಸೇವಾ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕು. ಕಾಯ್ದೆ ಅನ್ವಯ ಬಡ್ತಿಯಲ್ಲಿ ಮೀಸಲಾತಿ ಪಡೆದಿದ್ದವರಿಗೆ ಹಿಂಬಡ್ತಿ ನೀಡಬೇಕು. ಬಡ್ತಿಯಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿಯೇತರ ಅಧಿಕಾರಿ, ಸಿಬ್ಬಂದಿಗೆ ಸಾಮಾಜಿಕ ನ್ಯಾಯದ ಪಾಲನೆ ದೃಷ್ಟಿಯಿಂದ ಮುಂಬಡ್ತಿ ನೀಡಬೇಕು’ ಎಂದು ಆದೇಶದಲ್ಲಿ ಹೇಳಿತ್ತು. ಪರಿಶಿಷ್ಟ ಸಮುದಾಯದ ನೌಕರರಿಗೆ ರಕ್ಷಣೆ ನೀಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ 2017ರ ಜೂನ್‌ 23ರಂದು ತಿದ್ದುಪಡಿ ಮಸೂದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT