ಸೋಮವಾರ, ಸೆಪ್ಟೆಂಬರ್ 21, 2020
27 °C

ಟಿ.ವಿ ಕ್ಯಾಮೆರಾಗಳಿಗೆ ನಿರ್ಬಂಧ: ವ್ಯಾಪಕ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯಲ್ಲಿ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿರುವ ಕ್ರಮದ ಬಗ್ಗೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದ್ದರೂ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ನಿಲುವು ಬದಲಿಸಲಿಲ್ಲ.

ಮಾಧ್ಯಮ ಪ್ರತಿನಿಧಿಗಳು ಗುರುವಾರ ಕಾಗೇರಿಯವರನ್ನು ಭೇಟಿ ಮಾಡಿ, ಅಹವಾಲು ಸಲ್ಲಿಸಿದರು. ಅವರಿಂದ ಸಕಾರಾತ್ಮಕ ಭರವಸೆ ಬರಲಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸದನದಲ್ಲಿ ಸಭಾಧ್ಯಕ್ಷರ ನಿರ್ಧಾರವನ್ನು ವಿರೋಧಿಸಿದರು.

‘ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡವಳಿಕೆ’ ಎಂದು ಜೆಡಿಎಸ್‌ನ ಹಿರಿಯ ಶಾಸಕರಾದ ಎಚ್‌.ಡಿ.ರೇವಣ್ಣ, ಶಿವಲಿಂಗೇಗೌಡ ಹೇಳಿದರು.

‘ನಮ್ಮ ಸರ್ಕಾರ ಮಾಧ್ಯಮ ಸ್ವಾತಂತ್ರ್ಯ ನಿರ್ಬಂಧಿಸುವುದಿಲ್ಲ. ಸಭಾಧ್ಯಕ್ಷರು ತಮ್ಮ ಕ್ರಮವನ್ನು ಪುನರ್‌ ಪರಿಶೀಲಿಸಬೇಕು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದರು. ಬಳಿಕ ಅಳಿಸಿ ಹಾಕಿದ್ದೂ ಚರ್ಚೆಗೆ ಕಾರಣವಾಯಿತು.

ಲೋಕಸಭೆ, ರಾಜ್ಯಸಭೆ ಮಾದರಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಸರಿಸುತ್ತಿರುವ ಮಾದರಿಯನ್ನೇ ಇಲ್ಲಿ ಅನುಸರಿಸಲಾಗಿದೆ. ಅಲ್ಲಿಯೂ ಖಾಸಗಿ ವಾಹಿನಿಗಳ ಕ್ಯಾಮೆರಾಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.  ಮಾಧ್ಯಮಗಳಿಗೆ ಕಡಿವಾಣ ಹಾಕುವ ಪ್ರಶ್ನೆಯೇ ಇಲ್ಲ. ಸದನದ ಎಲ್ಲ ಮಾಹಿತಿಗಳೂ ಮಾಧ್ಯಮಗಳಿಗೆ ಸಿಗುತ್ತದೆ. ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಈ ಕುರಿತ ಚರ್ಚೆ ಅನೇಕ ವರ್ಷಗಳಿಂದ ನಡೆದಿತ್ತು. ಸುದ್ದಿ ವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ಪ್ರಾಯೋಗಿಕವಾಗಿದೆ. ಈ ನಿರ್ಧಾರವನ್ನು ಮುಂದುವರಿಸಬೇಕೆ ಅಥವಾ ಕೈಬಿಡಬೇಕೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು