ಬುಧವಾರ, ಏಪ್ರಿಲ್ 8, 2020
19 °C

ಕೊಠಡಿ ನಿರ್ಮಾಣಕ್ಕೆ ₹758 ಕೋಟಿ: ‘ಪ್ರಜಾವಾಣಿ’ ವರದಿಗೆ ಸಚಿವರ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗಳ ಶಾಲೆಗಳ ಸ್ಥಿತಿಗತಿ ಕುರಿತಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕ, ಕಳಕಳಿಗೆ ತಕ್ಷಣ ಸ್ಪಂದಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌, ‘ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹ 758 ಕೋಟಿ ಮಂಜೂರಾಗಿದೆ’ ಎಂದು ತಿಳಿಸಿದ್ದಾರೆ.

ಶನಿವಾರ ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟವಾದ ‘ಸಚಿವರೇ, ದಮ್ಮಯ್ಯ ಇತ್ತ ನೋಡಿ’ ಎಂಬ ಸುದ್ದಿಗೆ ಕೂಡಲೇ ಸ್ಪಂದಿಸಿರುವ ಅವರು, ‘ಶಾಲೆಗಳ ಪುನರ್‌ನಿರ್ಮಾಣದ ಅತಂಕ ಯಾರಿಗೂ ಬೇಡ, 15 ಜಿಲ್ಲೆಗಳಲ್ಲಿ ₹ 199 ಕೋಟಿ ವೆಚ್ಚದಲ್ಲಿ 1,806 ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ, 4,271 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೂಲಕ ಒಟ್ಟು  6,077 ಶಾಲೆಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಮಳೆ ಹಾನಿಯಿಂದ ದುರಸ್ತಿ ಸಾಧ್ಯವೇ ಇಲ್ಲದ 29 ಶೈಕ್ಷಣಿಕ ಜಿಲ್ಲೆಗಳ ಶಾಲಾ ಕೊಠಡಿಗಳ ಮರು ನಿರ್ಮಾಣ ಮಾಡಬೇಕಾದ 3,227 ಪ್ರಾಥಮಿಕ ಶಾಲೆಗಳ 6,044 ಕೊಠಡಿಗಳು ಮತ್ತು 159 ಪ್ರೌಢಶಾಲೆಗಳ 425 ಕೊಠಡಿಗಳು ಸೇರಿ 6,469 ಕೊಠಡಿಗಳನ್ನು ಪುನರ್‌ ನಿರ್ಮಾಣಕ್ಕೆ ಗುರುತಿಸಿ ₹ 782 ಕೋಟಿ ಅನುದಾನವನ್ನು ಆರ್‌ಐಡಿಎಫ್ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

‘ನಬಾರ್ಡ್’ ಇದರ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ₹ 644 ಕೋಟಿಯನ್ನು ಜನವರಿ 30ರಂದು ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ₹ 113 ಕೋಟಿ ಪಾಲಿನ ಅನುದಾನ ಸೇರಿದಂತೆ  ₹ 758 ಕೋಟಿ ಲಭ್ಯವಾಗುವುದಿದೆ. ಶೀಘ್ರ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದಿದ್ದಾರೆ.

ಕಣ್ಣ ಮುಂದೆ ಸುಳಿದ ಪ್ರವಾಹದ ಚಿತ್ರ
‘ಪ್ರಜಾವಾಣಿಯ ವರದಿಯನ್ನು ಗಮನಿಸಿದಾಗ, ಕಳೆದ ಆಗಸ್ಟ್‌ನಿಂದ ಇಲ್ಲಿವರೆಗೆ ನಾನು ಈ ನಿಟ್ಟಿನಲ್ಲಿ ಕೈಗೊಂಡ ಎಲ್ಲ ಪ್ರಯತ್ನಗಳೊಂದಿಗೆ ನಾನು ಅಂದು ಕಂಡ ಭೀಕರ ಪ್ರವಾಹ ಪರಿಸ್ಥಿತಿಯ ಚಿತ್ರಣ ಸ್ಮೃತಿಪಟಲದಲ್ಲಿ ಹಾದುಹೋದವು. ಸರ್ಕಾರಿ ಶಾಲೆಗಳಲ್ಲಿ ಅತ್ಯುನ್ನತ ಶೈಕ್ಷಣಿಕ ವಾತಾವರಣ ಕಲ್ಪಿಸುವ ನನ್ನ ಪ್ರಯತ್ನ ಮುಂದುವರಿಯುತ್ತದೆ’ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

*
ಈ ತಿಂಗಳ ಅಂತ್ಯದೊಳಗೆ ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. -ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು