ಗುರುವಾರ , ಸೆಪ್ಟೆಂಬರ್ 24, 2020
27 °C
ಶಬರಿಮಲೆ: ಅಮಿತ್‌ ಶಾ ಸೂಚನೆಯಂತೆ ಅಧ್ಯಯನ ನಡೆಸಿದ ತಂಡ

ಅಯ್ಯಪ್ಪ ವ್ರತಧಾರಿಗಳಿಗೆ ಬಿಜೆಪಿ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಗಳೂರು: ಶಬರಿಮಲೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯ ಕೇಂದ್ರ ನಾಯಕರು ನೀಡಿದ ಸೂಚನೆಯಂತೆ ನಾಲ್ವರು ಸಂಸದರನ್ನು ಒಳಗೊಂಡ ತಂಡ, ಕೇರಳದ ಕೊಚ್ಚಿ, ಎರ್ನಾಕುಲಂ ಸೇರಿದಂತೆ ಹಲವೆಡೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದೆ.

ಎರಡು ದಿನ ನಿರಂತರ ಪ್ರವಾಸ ಮಾಡಿದ ತಂಡದ ಸದಸ್ಯರು, ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಜತೆಗೂ ಸಮಾಲೋಚನೆ ನಡೆಸಿದರು.

ಸರೋಜ್ ಪಾಂಡೆ, ವಿನೋದ್ ಸೋನಕರ, ಪ್ರಹ್ಲಾದ್ ಜೋಷಿ, ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಒಳಗೊಂಡ ಅಧ್ಯಯನ ತಂಡ, ಕೊಚ್ಚಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಿತು. ಶಬರಿಮಲೆ ಭಕ್ತರ ಜತೆಗೆ ಪೊಲೀಸರು ನಡೆದುಕೊಂಡ ರೀತಿ, ಶಬರಿಮಲೆ ವಿಚಾರದಲ್ಲಿ ಕೇರಳದ ಸರ್ಕಾರ ಅನುಸರಿಸುತ್ತಿರುವ ನೀತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಶಬರಿಮಲೆ ಯಾತ್ರಾರ್ಥಿಗಳಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಅರಿಯಲು ಖುದ್ದು ಶಬರಿಮಲೆ ಅಯ್ಯಪ್ಪ ಕರ್ಮ ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಲಾಯಿತು. ಈ ಸಭೆಯಲ್ಲಿ ಅಯ್ಯಪ್ಪ ವ್ರತಧಾರಿಗಳ ಹೋರಾಟಕ್ಕೆ ಅಗತ್ಯ ಬೆಂಬಲ ನೀಡುವುದಾಗಿಯೂ ನಿಯೋಗದ ಸದಸ್ಯರು ಭರವಸೆ ನೀಡಿದರು.

ಶಬರಿಮಲೆಗೆ ತೆರಳುವ ಸಂದರ್ಭದಲ್ಲಿ ಕೇರಳ ಸರ್ಕಾರ ಬಂಧಿಸಿದ ಬಿಜೆಪಿ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಹಾಗೂ ಹಲವು ಅಯ್ಯಪ್ಪ ಭಕ್ತರನ್ನು ತಿರುವನಂತಪುರ ಸೆಂಟ್ರಲ್ ಜೈಲ್‌ನಲ್ಲಿ ಕೇಂದ್ರದ ನಿಯೋಗ ಭೇಟಿ ಮಾಡಿತು.

ಕೇರಳ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ಧಾರ್ಮಿಕ ಶ್ರದ್ಧೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಅಯ್ಯಪ್ಪ ಭಕ್ತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಸುರೇಂದ್ರನ್‌ ಅವರು ನಿಯೋಗದ ಎದುರು ವಿವರಣೆ ನೀಡಿದರು.

ನಂತರ ಯಾತ್ರಾರ್ಥಿಗಳಿಗೆ ಆಗಿರುವ ಸಮಸ್ಯೆಗಳ ಕುರಿತು ಚೆಂಗನ್ನೂರಿನ ತಂತ್ರಿಗಳ ಕುಟುಂಬಸ್ಥರನ್ನು ಭೇಟಿಯಾದ ನಿಯೋಗ, ಪಂದಲಮ್ ಅರಮನೆ ಟ್ರಸ್ಟಿಗಳೊಂದಿಗೆ ಸಭೆ ನಡೆಸಿತು.

ರಾಜ್ಯಪಾಲರ ಜತೆ ಚರ್ಚೆ: ವಿವಿಧೆಡೆ ಸಂಗ್ರಹಿಸಿದ ಮಾಹಿತಿಯೊಂದಿಗೆ ಕೇರಳದ ರಾಜ್ಯಪಾಲ ಪಿ.ಸದಾಶಿವಂ ಅವರನ್ನು ಭೇಟಿ ಮಾಡಿದ ಸಂಸದರು, ವಿಸ್ತೃತ ಚರ್ಚೆ ನಡೆಸಿದರು.

ಕೇರಳ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಕುರಿತು ರಾಜ್ಯಪಾಲರಿಗೆ ವಿವರಿಸಿದ ಸಂಸದರು, ಅಯ್ಯಪ್ಪ ಸ್ವಾಮಿ ಯಾತ್ರಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ನಿಯೋಗದವರು ಕೇರಳದಿಂದ ಹಿಂದಿರುಗಿದ್ದು, ಶೀಘ್ರದಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

**

ಎನ್‌ಡಿಎ ನಾಯಕರ ಜತೆ ಚರ್ಚೆ

ನಿಯೋಗವು ತಿರುವನಂತಪುರದಲ್ಲಿ ಎನ್‌ಡಿಎ ನಾಯಕರೊಂದಿಗೂ ಸಭೆ ನಡೆಸಿತು. ಶಬರಿಮಲೆ ವಿಚಾರದಲ್ಲಿ ಬಿಜೆಪಿ ಮಿತ್ರ ಪಕ್ಷಗಳು ಅನುಸರಿಸಬೇಕಾದ ನೀತಿಯ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಕೇಂದ್ರ ನಾಯಕರು ನೀಡಿದ ಸಂದೇಶವನ್ನು ಎನ್‌ಡಿಎ ನಾಯಕರಿಗೆ ತಿಳಿಸಿದ ಸಂಸದರು, ರಾಜ್ಯದಲ್ಲಿ ಪಕ್ಷದ ನೆಲೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು