ಶುಕ್ರವಾರ, ಸೆಪ್ಟೆಂಬರ್ 17, 2021
30 °C
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯಿಂದ ಘೋಷಣೆ

ಸಾವಳಗೀಶ್ವರ ದೇವರು ನಾಗನೂರು ಮಠದ ಉತ್ತರಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಯಾಗಿ ತುಬಚಿಯ ಶಿವಲಿಂಗೇಶ್ವರ ಮಠದ ಸಾವಳಗೀಶ್ವರ ದೇವರನ್ನು ಆಯ್ಕೆ ಮಾಡಲಾಗಿದೆ’ ಎಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಘೋಷಿಸಿದರು. 

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಿದ ಅವರು, ‘ಮಠದ ಸಿದ್ಧರಾಮ ಸ್ವಾಮೀಜಿ ಅವರು ಗದುಗಿನ ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ನೇಮಕವಾದ ಹಿನ್ನೆಲೆಯಲ್ಲಿ ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ. ಉತ್ತರಾಧಿಕಾರಿ ಆಯ್ಕೆ ಮಾಡಲು ಕಳೆದ ವರ್ಷದ ಅಕ್ಟೋಬರ್‌ 7ರಂದು ಆಯ್ಕೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಆಯ್ಕೆ ಮಾಡಿದ ಸಾವಳಗೀಶ್ವರ ದೇವರನ್ನು ಸಿದ್ಧರಾಮ ಸ್ವಾಮೀಜಿ ಕೂಡ ಒಪ್ಪಿಕೊಂಡಿದ್ದಾರೆ’ ಎಂದರು.

‘ಇದೇ 31ರಂದು ನಾಗನೂರು ಮಠದಲ್ಲಿ ಸಾವಳಗೀಶ್ವರ ದೇವರಿಂದ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಬೆಳಗಾವಿಯ ಮಠದ ಆವರಣದಲ್ಲಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಎಲ್ಲ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಈ ವರ್ಷದೊಳಗಾಗಿ ಸ್ವಾಮೀಜಿ ಅವರು ಪೂರ್ಣಪ್ರಮಾಣದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ’ ಎಂದು ಹೇಳಿದರು. 

13 ಸದಸ್ಯರ ಆಯ್ಕೆ ಸಮಿತಿ:

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಮಹಾಂತೇಶ ಕೌಜಲಗಿ, ಪ್ರೊ.ಎಂ.ಆರ್‌. ಉಳ್ಳೇಗಡ್ಡಿ, ಶಿವಕುಮಾರ ಸಂಬರಗಿಮಠ, ಡಾ.ಎಚ್‌.ಬಿ. ರಾಜಶೇಖರ, ಡಾ.ಎಫ್‌.ವಿ. ಮಾನವಿ, ಬಿ.ಬಿ. ವಣ್ಣೂರ, ಉಮೇಶ ಪಾಟೀಲ, ಡಿ.ಎಂ. ‍ಪಾಟೀಲ, ಚನ್ನಬಸಪ್ಪ ತಲ್ಲೂರ, ಎಸ್‌.ಬಿ. ಗಾಡವಿ ಹಾಗೂ ರತ್ನಪ್ರಭಾ ಬೆಲ್ಲದ ಆಯ್ಕೆ ಸಮಿತಿಯಲ್ಲಿದ್ದರು.

‘ರಾಜ್ಯದ ವಿವಿಧ ಮಠ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿ, ಯೋಗ್ಯರ ಹುಡುಕಾಟ ನಡೆಸಲಾಗಿತ್ತು. ನಾಲ್ಕು ಬಾರಿ ಸಭೆ ನಡೆಸಿದ್ದೇವು. ಅಂತಿಮವಾಗಿ ಸಾವಳಗೀಶ್ವರ ದೇವರನ್ನು ಆಯ್ಕೆ ಮಾಡಲಾಯಿತು. ಅವರ ಪೂರ್ವಾಶ್ರಮದ ತಂದೆ–ತಾಯಿಗಳು ಹಾಗೂ ಗ್ರಾಮಸ್ಥರ ಒಪ್ಪಿಗೆಯನ್ನು ಪಡೆಯಲಾಗಿದೆ’ ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ, ಎಂ.ಆರ್. ಉಳ್ಳೇಗಡ್ಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಉತ್ತರಾಧಿಕಾರಿ ಪರಿಚಯ:     

ಸಾವಳಗೀಶ್ವರ ದೇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತುಬಚಿ ಗ್ರಾಮದಲ್ಲಿ 1987ರ ಅಕ್ಟೋಬರ್‌ 2ರಂದು ಬಸಯ್ಯ ಹಿರೇಮಠ ಮತ್ತು ವಿಜಯಲಕ್ಷ್ಮಿ ದಂಪತಿಯ ಮೊದಲ ಪುತ್ರನಾಗಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಮಂಜುನಾಥ ಹಿರೇಮಠ.

ತುಬಚಿಯ ಶಿವಲಿಂಗೇಶ್ವರ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅಲ್ಲಿ ಇವರ ಹೆಸರು ಸಾವಳಗಯ್ಯ ಎಂದು ಬದಲಾಯಿತು. ಪ್ರೌಢಶಾಲಾ ಶಿಕ್ಷಣವನ್ನು ನಾಗನೂರು ರುದ್ರಾಕ್ಷಿಮಠದಲ್ಲಿ, ಧಾರ್ಮಿಕ ಶಿಕ್ಷಣವನ್ನು ಬಾದಾಮಿಯ ಶಿವಯೋಗಮಂದಿರ ಸಂಸ್ಥೆಯಲ್ಲಿ ಪಡೆದಿದ್ದಾರೆ. 2004ರಿಂದ 2009ರವರೆಗೆ ಪಿಯುಸಿ, ಪದವಿ ಶಿಕ್ಷಣವನ್ನು  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪೂರೈಸಿದ್ದಾರೆ. 2012ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 

2019ರ ಏಪ್ರಿಲ್‌ನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ‘ಬಸವಣ್ಣ ಮತ್ತು ಮಾರ್ಟಿನ್ ಲೂಥರ್ ಚಿಂತನೆಗಳ ತುಲನಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿ, ಪಿಎಚ್‌.ಡಿ ಪದವಿ ಪಡೆದಿದ್ದಾರೆ. 

15 ವರ್ಷಗಳಿಂದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ವಿವಿಧ ಸೇವಾಕಾರ್ಯಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ತುಬಚಿಯ ಶಿವಲಿಂಗೇಶ್ವರ ಮಠದ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಆಚರಣೆಗಳ ನಿರ್ವಹಣೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು