ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ಮಸೂದೆ: ಖಾಸಗಿ ಏಕಸ್ವಾಮ್ಯಕ್ಕೆ ದಾರಿ

ಗೊಂದಲ ಮೂಡಿಸಿರುವ ಮಸೂದೆ l ರೈತರ ಹಿತದೃಷ್ಟಿಯಿಂದ ತಿದ್ದುಪಡಿಗೆ ತಜ್ಞರ ಒತ್ತಾಯ
Last Updated 29 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಪನಿಗಳು ನೀಡುವ ಬಿತ್ತನೆ ಬೀಜ ಮೊಳಕೆಯೊಡೆಯದಿದ್ದಲ್ಲಿ ಪರಿಹಾರ ಎಷ್ಟು? ಬೀಜ ಪೂರೈಕೆಯಲ್ಲಿ ವ್ಯತ್ಯಯವಾದರೆ ರೈತರು ಏನು ಮಾಡಬೇಕು? ಈ ಮಸೂದೆಯಡಿ ಯಾವೆಲ್ಲ ಬೀಜಗಳು ಬರುತ್ತವೆ? ಬಿತ್ತನೆ ಬೀಜಗಳಲ್ಲಿ ವೈವಿಧ್ಯ ನಾಶವಾಗದಂತೆ ತಡೆಯುವುದು ಹೇಗೆ?

ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ‘ಬಿತ್ತನೆ ಬೀಜಗಳ ಮಸೂದೆ–2019’ರಲ್ಲಿ ಇರುವ ಗೊಂದಲ ಹಾಗೂ ಆಕ್ಷೇಪಗಳ ಬಗ್ಗೆ ವಿಷಯ ತಜ್ಞರು ಪ್ರಶ್ನಿಸಿದರು. ‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಬೀಜ ಮಸೂದೆ’ ವಿಚಾರಸಂಕಿರಣದಲ್ಲಿ ‘ಬಿತ್ತನೆ ಬೀಜ ಕಂಪನಿಗಳ ಏಕಸ್ವಾಮ್ಯಕ್ಕೆ ಈ ಮಸೂದೆ ದಾರಿ ಮಾಡಿಕೊಡಲಿದೆ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕೃಷಿ ತಜ್ಞ ಡಾ.ಪ್ರಕಾಶ ಕಮ್ಮರಡಿ, ‘‌ಈ ಮಸೂದೆಯು ಭರವಸೆಯನ್ನು ಹುಟ್ಟಿಸುವ ಬದಲು ಆತಂಕ, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಿದೇಶಿ ಕಂಪನಿಗಳು ಬೀಜಗಳನ್ನು ಅಲ್ಲಿಯೇ ನೋಂದಣಿ ಮಾಡಿ, ಈ ದೇಶಕ್ಕೆ ತರಲು ಅವಕಾಶವಿದೆ. ಒಂದು ವೇಳೆ ಆ ಬೀಜಗಳಿಂದ ನಿಗದಿತ ಪ್ರಮಾಣದಲ್ಲಿ ಇಳುವರಿ ಬಾರದಿದ್ದಲ್ಲಿ ಯಾವ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತದೆ ಎಂಬ ಸ್ಪಷ್ಟನೆ ಇಲ್ಲ’ ಎಂದರು.

‘ಬೆಳೆ ವಿಫಲವಾದಲ್ಲಿ ರೈತರು ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಬೇಕು. ಮೊಕದ್ದಮೆ ಹೂಡಿ, ಪರಿಹಾರಕ್ಕೆ ಕಾಯಬೇಕಿದೆ. ಖಾಸಗಿ ಕಂಪನಿಗಳ ಜತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕವೂ ಬೀಜ ವಿತರಿಸಬೇಕು. ಬೀಜ ಪೂರೈಕೆಯಲ್ಲಿ ಅನ್ಯಾಯ ತಡೆಯಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕನ್ಯಾಯಮಂಡಳಿ ಸ್ಥಾಪಿಸಬೇಕು. ಬೀಜ ಬೆಲೆ ನಿಯಂತ್ರಣ ಪ್ರಾಧಿಕಾರ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಮಸೂದೆಯು ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ನೀಡಿದೆ. ಬೀಜ ಉತ್ಪಾದನೆಯ ಹಕ್ಕು ರೈತರ ಬಳಿಯೇ ಇರಬೇಕು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಜ ಬ್ಯಾಂಕ್ ಸ್ಥಾಪನೆ ಮಾಡಬೇಕು. ಆ ಪ್ರದೇಶದಲ್ಲಿ ಬೆಳೆಯುವ ಬೀಜಗಳ ತಳಿಗಳನ್ನು ಸಂರಕ್ಷಣೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯಗಳ ಸಹಾಯ ಪಡೆಯಬೇಕು’ ಎಂದು ಹೇಳಿದರು.

‘ಗುಣಮಟ್ಟದ ಬೀಜ ವಿತರಣೆಗೆ ಪೂರಕ’

‘ಬೀಜ ಪೂರೈಕೆ ಮಾಡುವ ಕಂಪನಿಗಳೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಮಸೂದೆಯಿಂದ ರೈತರಿಗೆ ಗುಣಮಟ್ಟದ ಬೀಜಗಳು ದೊರೆಯಲಿವೆ. ಅಧಿಕ ಇಳುವರಿ ಬರುವ ಬೀಜಗಳನ್ನು ಸಂಶೋಧನೆಗಳಿಂದ ಗುರುತಿಸಿ, ರೈತರಿಗೆ ಪೂರೈಕೆ ಮಾಡಲಾಗುತ್ತದೆ. ಶೇ 90 ರಷ್ಟು ಬೀಜಗಳು ಮೊಳಕೆ ಬರುತ್ತವೆ’ ಎಂದುವಿಜ್ಞಾನಿ ಡಾ.ಶರಣ್ ಅಂಗಡಿ ಅಭಿಮತ ವ್ಯಕ್ತಪಡಿಸಿದರು.

‘ಬರಗಾಲ ಪ್ರದೇಶಕ್ಕೆ ಸರಿ ಹೊಂದುವ ಬೀಜಗಳನ್ನು ಸಂಶೋಧಿಸಿ, ರೈತರಿಗೆ ನೀಡಿದ ಸಂದರ್ಭದಲ್ಲಿ ಅಧಿಕ ಮಳೆಯಾಗಿ, ಬೆಳೆ ಹಾನಿಯಾದಲ್ಲಿ ಪರಿಹಾರ ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT