ಭಾನುವಾರ, ಆಗಸ್ಟ್ 9, 2020
21 °C

ಉಡುಪಿಗೆ ಅಭಿನಂದನ್ ಕಳುಹಿಸಿಕೊಡಿ: ರಕ್ಷಣಾ ಸಚಿವರಿಗೆ ಪಲಿಮಾರು ಶ್ರೀ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಉಡುಪಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೇಳಿಕೊಂಡರು.

‌ಮಂಗಳವಾರ ಬೆಳಿಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪಲಿಮಾರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯುವ ಸಂದರ್ಭ ಶ್ರೀಗಳು ವಿಷಯ ಪ್ರಸ್ತಾಪಿಸಿದರು.

ಅಭಿನಂದನ್ ಪರಾಕ್ರಮ ಬಹಳ ಮೆಚ್ಚುಗೆಯಾಗಿದೆ. ಶ್ರೀಕೃಷ್ಣಮಠದಲ್ಲಿ ಅವರಿಗೆ ಗೌರವಾರ್ಪಣೆ ಮಾಡುವ ಹಂಬಲ ಇದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ವಾಮೀಜಿ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನಾತ್ಮಕ ಅಡೆ ತಡೆಗಳು ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ಈ ಸಂಬಂಧ ರಕ್ಷಣಾ ಇಲಾಖೆಗೆ ಪತ್ರ ಬರೆಯುವಂತೆ’ ತಿಳಿಸಿದರು.

‘ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯಲ್ಲಿರಬೇಕು ಎಂದು ದೇವರಲ್ಲಿ ಪ್ರಾರ್ಥಿಸುವಂತೆ’ ನಿರ್ಮಲಾ ಸೀತಾರಾಮನ್ ಅವರು ಪಲಿಮಾರು ಶ್ರೀಗಳಿಗೆ ಮನವಿ ಮಾಡಿದರು.

ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಸುರಕ್ಷಿತವಾಗಿರುತ್ತದೆ. ಈ ಕಾರ್ಯಕ್ಕೆ ದೇವರ ಅನುಗ್ರಹ ಸಿಗಬೇಕು ಎಂದು ನಿವೇದಿಸಿಕೊಂಡರು.

ಒಂದು ವರ್ಷದ ಮಗುವಿದ್ದಾಗಲೇ ಉಡುಪಿಯ ಜತೆಗೆ ನಂಟಿತ್ತು. ಕೊಲ್ಲೂರು, ಕೃಷ್ಣಮಠದ ಜೊತೆಯೂ ನಿರಂತರ ಸಂಪರ್ಕ ಇತ್ತು. ಮುಂದಿನ ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು