ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿಗೆ ತಪ್ಪಿದ ಡಿಸಿಎಂ ಪಟ್ಟ: ಬೊಮ್ಮಾಯಿಗೆ ಗೃಹ, ಶೆಟ್ಟರ್‌ಗೆ ಕೈಗಾರಿಕೆ

ಎರಡನೇ ತಲೆಮಾರಿಗೆ ಮಣೆ ಹಾಕಿದ ವರಿಷ್ಠರು
Last Updated 27 ಆಗಸ್ಟ್ 2019, 2:56 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಗೂ ವರಿಷ್ಠರ ಸೂಚನೆಗೆ ಮಣಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ಪ್ರಕಟಿಸುವುದರ ಜತೆಗೆ ಅಳೆದು ತೂಗಿ ಎಲ್ಲ ಸಚಿವರಿಗೂ ಖಾತೆಗಳನ್ನುಸೋಮವಾರ ಹಂಚಿಕೆ ಮಾಡಿದರು.

ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ನೀಡುವುದರ ಜತೆಗೆ ಪ್ರಮುಖ ಖಾತೆಗಳನ್ನೂ ನೀಡಲಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ ಮತ್ತು ಆರ್‌.ಅಶೋಕ ಅವರಿಗೆ ಹಿಂಬಡ್ತಿ ನೀಡಲಾಗಿದೆ.

‘ಯಾರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಬೇಡ. ಇದರಿಂದ ಅಸಮಾಧಾನಗಳಿಗೆ ಕಾರಣವಾಗಬಹುದು’ ಎಂಬ ಕಾರಣಕ್ಕೆ, ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವರಿಷ್ಠರು ಯಡಿಯೂರಪ್ಪ ಮಾತಿಗೆ ಸೊಪ್ಪು ಹಾಕಲಿಲ್ಲ. ‘ನಾವು ಹೇಳಿದ್ದನ್ನಷ್ಟೇ ಮಾಡಿ’ ಎಂಬ ಸಂದೇಶ ರವಾನಿಸಿದ್ದರು.

ಇದರಿಂದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕೈ ಮೇಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ತಾವು ಹೇಳಿದ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡಿ, ಅವರಿಗೆ ಪ್ರಮುಖ ಖಾತೆಗಳನ್ನು ನೀಡಬೇಕು. ಉಳಿದವರಿಗೆ ನೀವೆ ಖಾತೆಗಳನ್ನು ಹಂಚಿಕೆ ಮಾಡಿ’ ಎಂಬ ಸಂದೇಶವನ್ನು ಪಕ್ಷದ ವರಿಷ್ಠರು ಕೆಲವು ದಿನಗಳ ಹಿಂದೆಯೇ ನೀಡಿದ್ದರು. ಆದರೆ, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಪಕ್ಷದಲ್ಲಿ ಉಳಿದವರು ಬಂಡಾಯ ಏಳಬಹುದು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರು, ಕೆ.ಎಸ್‌.ಈಶ್ವರಪ್ಪ ಅವರ ಪರ ವರಿಷ್ಠರ ಜತೆ ಚೌಕಾಸಿಗೂ ಇಳಿದರು ಎಂದು ಮೂಲಗಳು ಹೇಳಿವೆ.

ಗೋವಿಂದ ಕಾರಜೋಳ ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದವರು. ಕಳೆದ ಕೆಲವು ಚುನಾವಣೆಗಳಲ್ಲಿ ಮಾದಿಗ ಸಮುದಾಯ ಬಿಜೆಪಿ ಜತೆ ಗಟ್ಟಿಯಾಗಿ ನಿಂತಿದೆ. ಇದರಿಂದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಆದ್ದರಿಂದ ಮಾದಿಗ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕತ್ವವನ್ನು ಬೆಳೆಸುವ ಅದರಲ್ಲೂ ಬೆಂಗಳೂರಿನಲ್ಲಿ ಆರ್‌.ಅಶೋಕ್‌ ಅವರಿಗೆ ಪರ್ಯಾಯ ನಾಯಕತ್ವ ಹುಟ್ಟು ಹಾಕುವ ಉದ್ದೇಶದಿಂದ ಅಶ್ವತ್ಥ ನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಲಾಗಿದೆ ಎಂದೇ ವ್ಯಾಖ್ಯಾನಿಸಲಾಗಿದೆ.ಒಕ್ಕಲಿಗ ಸಮುದಾಯ ಸೆಳೆಯುವ ನಿಟ್ಟಿನಲ್ಲಿ ಅಶೋಕ್‌ ಮತ್ತು ಸಿ.ಟಿ.ರವಿ ಮಾಡಲಾಗದಕೆಲಸವನ್ನು ಅಶ್ವತ್ಥನಾರಾಯಣ ಅವರಿಂದ ನಿರೀಕ್ಷಿಸಲಾಗಿದೆ.

ಬಿಎಸ್‌ವೈ ತಂತ್ರ?: ಹಿರಿಯರಿಗೆ ಪ್ರಮುಖ ಹುದ್ದೆ ತಪ್ಪಿಸುವಲ್ಲಿ ಯಡಿಯೂರಪ್ಪ ಅವರ ತಂತ್ರವೇ ಕೆಲಸ ಮಾಡಿದೆ ಎಂಬ ಮಾತು
ಗಳೂ ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ.

ತಮ್ಮ ಆಪ್ತ ವಲಯಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡಿಸಬೇಕು ಎಂದು ಯಡಿಯೂರಪ್ಪ ಲೆಕ್ಕ ಹಾಕಿದ್ದರು. ಅದರಲ್ಲೂ ಅರವಿಂದ ಲಿಂಬಾವಳಿ ಅವರನ್ನು ಈ ಪಟ್ಟಕ್ಕೆ ತರಬೇಕು ಎಂಬುದು ಅವರ ಅಂದಾಜು ಆಗಿತ್ತು. ಸಚಿವ ಸಂಪುಟ ವಿಸ್ತರಣೆ ದಿನವೇ, ಈ ಹುದ್ದೆಗೆ ನಳಿನ್ ಕುಮಾರ್ ಕಟೀಲು ನೇಮಕ ಮಾಡುವ ಮೂಲಕ ಯಡಿಯೂರಪ್ಪಗೆ ಶಾಕ್‌ ಕೊಡಲು ಬಿ.ಎಲ್. ಸಂತೋಷ್ ಮುಂದಾದರು. ಈ ಬೆಳವಣಿಗೆ ಆಗುತ್ತಿದ್ದಂತೆ, ಮುಖ್ಯಮಂತ್ರಿ ತಮ್ಮ ವರಸೆ ಬದಲಿಸಿದರು ಎನ್ನಲಾಗಿದೆ.

ಸವದಿ ಅಸ್ತ್ರ ಪ್ರಯೋಗಿಸಿದ ವರಿಷ್ಠರು

ಲಕ್ಷಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರ ಹಿಂದೆ ವರಿಷ್ಠರ ರಹಸ್ಯ ಕಾರ್ಯಸೂಚಿಯೂ ಅಡಗಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಬೆಳೆಸುವುದು,ಬೆಳಗಾವಿ ಜಿಲ್ಲೆಯಲ್ಲಿ ಕತ್ತಿ ಮತ್ತು ಜಾರಕಿಹೊಳಿ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕುವುದು ಬಡ್ತಿ ಹಿಂದಿನ ಮುಖ್ಯ ಉದ್ದೇಶ ಎನ್ನಲಾಗಿದೆ.

ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಅಧಿಕಾರ ಕೇಂದ್ರೀಕೃತ ಆಗುವುದನ್ನು ತಪ್ಪಿಸುವುದುಮೂವರು ಉಪಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿ ವರಿಷ್ಠರ ಮತ್ತೊಂದು ಪ್ರಮುಖ ಕಾರ್ಯಸೂಚಿ. ಇದರಿಂದ ಯಡಿಯೂರಪ್ಪ ಕುಟುಂಬದ ಸದಸ್ಯರು ಆಡಳಿತದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಬಹುದು ಎಂಬ ಉದ್ದೇಶ ವರಿಷ್ಠರಿಗಿರಬಹುದು ಎಂದು ಮೂಲಗಳು ಹೇಳಿವೆ.

ಪಕ್ಷದಲ್ಲಿ ಹೊಸ ತಲೆ ಮಾರನ್ನು ಮುಂಚೂಣಿಗೆ ತರಲು ಈ ಅವಕಾಶವನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಪಕ್ಷವನ್ನು ಇನ್ನಷ್ಟು ಪ್ರಬಲವಾಗಿ ಬೆಳೆಸಬಹುದು. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಾಕಷ್ಟು ಸಚಿವರು ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದ್ದರು. ಈ ಬಾರಿ ಅದಕ್ಕೆ ಅವಕಾಶ ನೀಡಬಾರದು ಮತ್ತು ರಾಜ್ಯದ ಜನತೆಯಲ್ಲಿ ವಿಶ್ವಾಸ ಮೂಡಿಸುವ ತಂಡ ಕಟ್ಟುವ ಉದ್ದೇಶ ವರಿಷ್ಠರದು ಎಂದು ಮೂಲಗಳು ಹೇಳಿವೆ.

ಅನರ್ಹರಿಗಾಗಿ ಖಾತೆಗಳು ಮೀಸಲು

ಅನರ್ಹ ಶಾಸಕರಿಗಾಗಿ ಪ್ರಮುಖ ಖಾತೆಗಳನ್ನು ಯಡಿಯೂರಪ್ಪಮೀಸಲಿಟ್ಟಿದ್ದಾರೆ.

ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಇಂಧನ, ಅರಣ್ಯ, ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ, ವಾರ್ತೆ, ಕೃಷಿ, ಯುವ ಜನ ಸಬಲೀಕರಣ, ಆಹಾರ, ಕಾರ್ಮಿಕ ಖಾತೆಗಳನ್ನು ಹಂಚಿಕೆ ಮಾಡಿಲ್ಲ. ಇವುಗಳನ್ನು ಮುಂದೆ ಬಿಜೆಪಿ ಸೇರಲಿರುವ ಅನರ್ಹಗೊಂಡಿರುವ ಶಾಸಕರಿಗಾಗಿ ಕಾದಿರಿಸಲಾಗಿದೆ. ಇವುಗಳಲ್ಲಿ ಕೆಲವು ಖಾತೆಗಳನ್ನು ಕೆಲವು ಸಚಿವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದು, ಮುಂದೆ ಅವರಿಂದ ಹಿಂದಕ್ಕೆ ಪಡೆಯಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಅನರ್ಹ ಶಾಸಕರಲ್ಲಿ 8 ರಿಂದ 10 ಶಾಸಕರಿಗೆ ಸಚಿವ ಸ್ಥಾನ ನೀಡಿ ಉಳಿದವರಿಗೆ ಪ್ರಮುಖ ನಿಗಮ ಮಂಡಳಿಯನ್ನು ನೀಡುವ ಸಾಧ್ಯತೆ ಇದೆ. ಈ ಸಂಬಂಧ ಅನರ್ಹ ಶಾಸಕರ ಜತೆ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸುಪ್ರೀಂ ನಿರಾಕರಣೆ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶದ ಸಿಂಧುತ್ವ ಪ್ರಶ್ನಿಸಿ 17 ಅನರ್ಹರು ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಮತ್ತೆ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT