ಮಂಗಳವಾರ, ಜೂಲೈ 7, 2020
29 °C
ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆಗೂ ಮೊದಲೇ ತರಾತುರಿ

ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆ: ತರಾತುರಿಯಲ್ಲಿ ಸಮೀಕ್ಷೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಅನುಮೋದನೆ ನೀಡುವ ಮೊದಲೇ ‘ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆ’ಗಾಗಿ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಬೃಹತ್ ಯಂತ್ರಗಳು, ಕಾರ್ಮಿಕರು ಪರಿಸರ ಸೂಕ್ಷ್ಮ ವಲಯ ಪ್ರವೇಶಿಸಿರುವುದು ಆತಂಕ ಮೂಡಿಸಿದೆ.

ಸಮೀಕ್ಷೆಯ ಮೊದಲ ಭಾಗವಾಗಿ ಶರಾವತಿ ನದಿ ಕೊಳ್ಳದ ಸೂಕ್ಷ್ಮಜೀವಿಗಳ ಪ್ರದೇಶವಾಗಿರುವ ಸಿಂಗಳೀಕ ಸಂರಕ್ಷಣಾ ವಲಯದಲ್ಲಿ 15 ಕಡೆ ಸುಮಾರು ಅರ್ಧ ಕಿ.ಮೀ. ಆಳದ ರಂಧ್ರಗಳನ್ನು ಕೊರೆಯಲು ರಾಜ್ಯ ಅರಣ್ಯ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ.

ಶರಾವತಿ ಕಣಿವೆಯ ಜೋಗ ಜಲಪಾತ ಸಮೀಪ ದಟ್ಟ ಅರಣ್ಯದ ಮಧ್ಯೆ ಯೋಜನೆ ಯನ್ನು ಅನುಷ್ಠಾನಗೊಳಿಸಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ತಲಕಳಲೆ, ಗೇರುಸೊಪ್ಪ ಜಲಾಶಯಗಳ ಮಧ್ಯೆ ನೆಲಮಟ್ಟದಿಂದ ಸುಮಾರು 300 ಅಡಿ ಆಳದಲ್ಲಿ ಜಲವಿದ್ಯುದಾಗಾರ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಯೋಜನೆಗೆ ಸುಮಾರು ₹ 6 ಸಾವಿರ ಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ.

ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆ ಜಾರಿಯಿಂದ ಅಮೂಲ್ಯ ಸಸ್ಯ ಪ್ರಭೇದ, ಜೀವ ಸಂಕುಲವುಳ್ಳ 800 ಎಕರೆ ಅರಣ್ಯ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕರು ಅರಣ್ಯ ಪ್ರವೇಶಿದರೆ ವನ್ಯಜೀವಿಗಳಿಗೂ ಕೊರೊನಾ ಸೋಂಕು ಹರಡುವ ಆತಂಕ ಎದುರಾಗಿದೆ.

ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆ ಆರಂಭಿಸಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಕೆಲವು ವರ್ಷಗಳ ಹಿಂದೆ ಅನುಷ್ಠಾನ ಸಾಧ್ಯತಾ ವರದಿ ಸಿದ್ಧಪಡಿಸಿತ್ತು. 2017ರಲ್ಲಿ ದೆಹಲಿಯ ಖಾಸಗಿ ಸಂಸ್ಥೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಗುತ್ತಿಗೆ ನೀಡಲಾಗಿತ್ತು. ಡ್ರಿಲ್ಲಿಂಗ್ ಮಾಡಲು 15 ಸ್ಥಳ ಗುರುತಿಸಲಾಗಿತ್ತು. ಪರಿಸರವಾದಿಗಳಿಂದ ಭಾರಿ ವಿರೋಧ ವ್ಯಕ್ತವಾದ ನಂತರ ಸ್ಥಗಿತಗೊಂಡಿತ್ತು. ಮತ್ತೆ 2019 ಅಕ್ಟೋಬರ್‌ನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿತ್ತು. ರಾಷ್ಟ್ರೀಯ ವನ್ಯಜೀವಿ ಮಂಡಳಿ ವಾರದ ಹಿಂದೆ ಯೋಜನೆ ಪ್ರಸ್ತಾವ ಸ್ವೀಕರಿಸಿದೆ. ಅನುಮೋದನೆ ನೀಡಿಲ್ಲ. ಅಷ್ಟರಲ್ಲೇ ಸಮೀಕ್ಷೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಭೂ ಸರ್ವೆ, ಗಣಿಗಾರಿಕೆ ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ವನ್ಯಜೀವಿ ಮಂಡಳಿಗಳು ಅನುಮೋದನೆ ನೀಡಿದರೂ ತನ್ನ ಗಮನಕ್ಕೆ ತರಬೇಕು ಎಂದು 2012ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಯೋಜನೆ ಜಾರಿಯಾದರೆ ಜೋಗ, ಮಾವಿನಗುಂಡಿ, ತಲಕಳಲೆ, ಗೇರುಸೊಪ್ಪ, ಹೆನ್ನಿ, ಪಡನಬೈಲು, ಬಿದರೂರು ಭಾಗಗಳ ಜೀವಸಂಕುಲವೇ ನಾಶವಾಗುವ ಆತಂಕವಿದೆ ಯೋಜನೆ ಅನುಷ್ಠಾನಗೊಳಿಸುವುದು ಬೇಡ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ವಿಜ್ಞಾನಿಗಳು ದಶಕದ ಹಿಂದೆಯೇ ವರದಿ ನೀಡಿದ್ದರು.


ಶರಾವತಿ ಕಣಿವೆ

**
ಈ ಪ್ರದೇಶ ಪರಿಸರ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ. ಹೊಸ ಯೋಜನೆ ಬೇಡ ಎಂದು ಪರಿಸರ ‌ವಿಜ್ಞಾನಿಗಳು ವರದಿ ನೀಡಿರುವ ಕಾರಣ ಪುನರ್ ವಿಮರ್ಶೆ ಅಗತ್ಯ.
-ಅನಂತ ಹೆಗಡೆ ಅಶೀಸರ ಅಧ್ಯಕ್ಷ, ರಾಜ್ಯ ಜೀವ ವೈವಿಧ್ಯ ಮಂಡಳಿ

**
ಎರಡು ವರ್ಷಗಳಿಂದ ಯೋಜನೆ ವಿರೋಧಿಸಿ ಹೋರಾಟ ನಡೆಸಿದ್ದರೂ ಸರ್ಕಾರ ಗಮನಕ್ಕೆ ತೆಗೆದುಕೊಂಡಿಲ್ಲ. ಪಶ್ಚಿಮಘಟ್ಟಕ್ಕೇ ಕಂಟಕವಾಗಿರುವ ಯೋಜನೆಯ ವಿರುದ್ಧ ಕಾನೂನು ಹೋರಾಟವೊಂದೇ ನಮಗಿರುವ ಭರವಸೆ.
-ಅಖಿಲೇಶ್ ಚಿಪ್ಪಳಿ, ಪರಿಸರ ಹೋರಾಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು