ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 2000 ಎಕರೆ ಅರಣ್ಯ ಪ್ರದೇಶ ಅಕ್ರಮ ಪರಭಾರೆ

ಐವರು ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ವಿಚಾರಣೆ
Last Updated 29 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದಲ್ಲಿ ಅರಣ್ಯನಾಶ ಮುಂದುವರಿಯುತ್ತಿರುವ ಆತಂಕದ ಮಧ್ಯೆಯೇ, ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಸಾವಿರ ಎಕರೆ ಕಾಡನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣ ಪತ್ತೆಯಾಗಿದೆ.

ಆರೋಪಕ್ಕೆ ಗುರಿಯಾಗಿರುವ ಐವರು ಅರಣ್ಯಾಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಧಿಕಾರಿಗಳ ವಿಚಾರಣಾ ಹೊಣೆಯನ್ನು ಉಪಲೋಕಾಯುಕ್ತರಿಗೆ ವಹಿಸಲಾಗಿದೆ.

ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ನಿಯಮ–2006 ಅಡಿಯಲ್ಲಿ ಜಿಲ್ಲೆಯ ಸಾಗರ, ಹೊಸನಗರ ತಾಲ್ಲೂಕುಗಳಲ್ಲಿ ಎರಡು ಸಾವಿರ ಎಕರೆ ಅರಣ್ಯವನ್ನು 2015 ಹಾಗೂ 2016ರಲ್ಲಿ ಅನರ್ಹರಿಗೆ ಮಂಜೂರು ಮಾಡಲಾಗಿದೆ ಎಂದು ಆರೋ‍ಪಿಸಿ ನಿವೃತ್ತ ಅರಣ್ಯಾಧಿಕಾರಿ ಎ.ಜಿ.ಯೋಗೇಂದ್ರ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ‘ಪ್ರತಿ ಗುಂಟೆಗೆ ₹ 3 ಸಾವಿರ ಲಂಚ ಪಡೆದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರ) ಮೋಹನ್‌ ಎನ್‌.ಗಂಗೊಳ್ಳಿ ಅವರು ಜಾಗ ಹಂಚಿದ್ದರು. ಉಳಿದ ನಾಲ್ವರು ಅಧಿಕಾರಿಗಳೂ ಲಂಚ ಪಡೆದಿದ್ದರು’ ಎಂದು ಅವರು ಆರೋಪಿಸಿದ್ದರು. ಪ್ರಕರಣದ ತನಿಖೆಯ ಹೊಣೆಯನ್ನು ಉಪಲೋಕಾಯುಕ್ತರಿಗೆ ವಹಿಸಲಾಗಿತ್ತು.

‘ಹಕ್ಕುಪತ್ರ ವಿತರಿಸುವ ಮುನ್ನ, 75 ವರ್ಷಗಳಿಂದ ಅರಣ್ಯ ಪ್ರದೇಶದಲ್ಲೇ ವಾಸಿಸುವವರನ್ನು ಗುರುತಿಸಬೇಕಿದೆ. ಸಮರ್ಪಕ ದಾಖಲೆಗಳು ಇಲ್ಲದಿದ್ದರೆ ಅಂತಹ ವ್ಯಕ್ತಿಗಳಿಂದ ಹೇಳಿಕೆ ಪಡೆದು ವಯಸ್ಸಿನ ಆಧಾರದಲ್ಲಿ ಫಲಾನುಭವಿಗಳೆಂದು ಗುರುತಿಸಿ ಶಿಫಾರಸು ಮಾಡಬಹುದು. ಈ ನಿಯಮ ಅನುಸರಿಸಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ’ ಎಂದು ಮೋಹನ್‌ ಗಂಗೊಳ್ಳಿ ಉತ್ತರ ನೀಡಿದ್ದರು.

ತನಿಖೆ ಬಳಿಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್‌ ಅವರು, ‘ಅನರ್ಹರಿಗೆ ದುರುದ್ದೇಶಪೂರ್ವಕವಾಗಿ ಭೂಮಿ ಹಂಚಲಾಗಿದೆ. ಈ ಸಂಬಂಧ ಐವರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಮೋಹನ್‌ ಗಂಗೊಳ್ಳಿ ವಿರುದ್ಧ ಅಕ್ಟೋಬರ್‌ 17ರಂದು ಹಾಗೂ ಉಳಿದ ನಾಲ್ವರು ಅಧಿಕಾರಿಗಳ ವಿರುದ್ಧ ಇದೇ 26ರಂದು ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಆರು ತಿಂಗಳೊಳಗೆ ವಿಚಾರಣಾ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

‘ಹಿರಿಯ ನಾಗರಿಕರ ಹೇಳಿಕೆಗಳನ್ನಷ್ಟೇ ಪಡೆದು ಹಕ್ಕುಪತ್ರ ವಿತರಿಸಲಾಗಿದೆ. ಅನುಸೂಚಿತ ಬುಡಕಟ್ಟು ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳ ನಿಯಮ 2007ರ ನಿಯಮ 13ರ ಪ್ರಕಾರ ಪರಾಮರ್ಶೆ ಮಾಡದೆ ಉಲ್ಲಂಘನೆ ಮಾಡಲಾಗಿದೆ. ಅನರ್ಹ ವ್ಯಕ್ತಿಗಳಿಗೆ ಭೂಮಿ ಹಂಚಿಕೆಯಲ್ಲಿ ಸ್ವಹಿತಾಸಕ್ತಿ ಅಡಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಶಿವಮೊಗ್ಗವು ಪಶ್ಚಿಮಘಟ್ಟಗಳ ತಪ್ಪಲಿನಲ್ಲಿದ್ದು,ಅಭಿವೃದ್ಧಿ ಚಟುವಟಿಕೆಯಿಂದ ಪಶ್ಚಿಮಘಟ್ಟಗಳಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಇದು ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಪರಿಸರ ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಬಕಾಗುತ್ತದೆ. ಆದರೆ, ಅನರ್ಹರಿಗೆ ಅರಣ್ಯ ಭೂಮಿ ಮಂಜೂರು ಮಾಡಿ ಸಂವಿಧಾನದ ಆಶಯಗಳಿಗೆ ಅಪಚಾರ ಎಸಗಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಒಂದೇ ಕುಟುಂಬಕ್ಕೆ 29 ಎಕರೆ ರಕ್ಷಿತಾರಣ್ಯ: ಮತದಾನದ ಗುರುತಿನ ಚೀಟಿಯ ಆಧಾರದಲ್ಲೇ ಮಂಜಪ್ಪ ಗೌಡ, ಅವರ ಪತ್ನಿ ಮೀನಾಕ್ಷಮ್ಮ, ಪುತ್ರರಾದ ಗಣಪತಿ ಹಾಗೂ ಷಣ್ಮುಖಪ್ಪ ಅವರಿಗೆ 29 ಎಕರೆ ಅರಣ್ಯ ಪ್ರದೇಶವನ್ನು ಹಂಚಿಕೆ ಮಾಡಲಾಗಿದೆ.

ಇದಲ್ಲದೆ, ಮಂಜಪ್ಪ ಗೌಡ ಅವರಿಗೆ ಸಾಗರ ತಾಲ್ಲೂಕಿನ ಮಲ್ಲಂದೂರು ಗ್ರಾಮದ ಸರ್ವೆ ಸಂಖ್ಯೆ 157ರಲ್ಲಿ 8 ಎಕರೆ ಕೃಷಿ ಭೂಮಿ ಇದೆ. ಹಂಚಿಕೆಯಾಗಿರುವ ಸರ್ವೆ ಸಂಖ್ಯೆ 24ರ ಪ್ರದೇಶವು ಬಾನ್ಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹಕ್ಕುಪತ್ರ ವಿತರಣೆಯ ನಡಾವಳಿಯಲ್ಲಿ ತಿಳಿಸಲಾಗಿದೆ. ಆದರೆ, ಕಾರ್ಗಲ್‌ ಉಪವಿಭಾಗದಲ್ಲಿರುವ ಈ ಪ್ರದೇಶವು ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿದೆ.

ಯಾವ ಅಧಿಕಾರಿಗಳ ವಿರುದ್ಧ ವಿಚಾರಣೆ

*ಮೋಹನ್‌ ಎನ್‌.ಗಂಗೊಳ್ಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ನಿವೃತ್ತ)

*ವೆಂಕಟೇಶ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌), ಸಾಗರ (ನಿವೃತ್ತ)

*ಜಿ.ಆರ್‌.ವೆಂಕಟೇಶಮೂರ್ತಿ, ಅರಣ್ಯ ಸಂರಕ್ಷಣಾಧಿಕಾರಿ, ಹೊಸನಗರ ವಿಭಾಗ (ನಿವೃತ್ತ)

*ಆರ್‌.ಡಿ.ನಾಯಕ್‌, ಹಿಂದಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸೊರಬ

*ಎಚ್‌.ಎಂ.ಜಗದೀಶಕುಮಾರ್‌, ಎಸಿಎಫ್‌, ಶಿಕಾರಿಪುರ (ನಿವೃತ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT