ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯಿಂದ ಬಂದರು; ಕಣ್ಣೀರಲ್ಲಿ ಮಿಂದರು

Last Updated 22 ಜನವರಿ 2019, 19:43 IST
ಅಕ್ಷರ ಗಾತ್ರ

ತುಮಕೂರು: ‘ಅಲ್ನೋಡು ಪುಟ್ಟ ಸಿದ್ಧಗಂಗೆಯ ಅಜ್ಜ’, ತನ್ನ ಹೆಗಲ ಮೇಲೆ ಕುಳಿತ ಮಗುವಿಗೆ ಆ ತಂದೆ, ಶಿವಕುಮಾರ ಸ್ವಾಮೀಜಿ ಅವರ ಪಾರ್ಥಿವ ಶರೀರದತ್ತ ಕೈ ತೋರುತ್ತಿದ್ದರೆ ಆ ಪುಟ್ಟ ಮಗು ಕುತ್ತಿಗೆ ಎತ್ತರಿಸಿ ಅತ್ತ ತಿರುಗುತ್ತಿತ್ತು. ತನ್ನಷ್ಟಕ್ಕೆ ತಾನಾಗಿಯೇ ಪಾರ್ಥಿವ ಶರೀರದತ್ತ ತಲೆ ಬಗ್ಗಿಸಿ ಕೈ ಮುಗಿಯುತ್ತಿತ್ತು.

ನಾಡಿನ ನಾನಾ ಭಾಗಗಳ ಭಕ್ತರು ತಮ್ಮ ಮಕ್ಕಳನ್ನೂ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಕರೆ ತಂದಿದ್ದರು. ಮಕ್ಕಳಿಗೆ ಅಂತಿಮವಾಗಿ ಸ್ವಾಮೀಜಿ ಅವರನ್ನು ತೋರಿಸಬೇಕು ಎನ್ನುವ ಭಾವನೆ ಅವರಲ್ಲಿತ್ತು. ನುಗ್ಗಿ ಬರುತ್ತಿದ್ದ ಜನರ ನಡುವೆ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದರು. ಸ್ವಾಮೀಜಿ ಅವರ ಪಾರ್ಥಿವ ಶರೀರವಿದ್ದ ವೇದಿಕೆಯ ಸಮೀಪ ಬಂದಾಗ ಮಕ್ಕಳನ್ನು ಮತ್ತಷ್ಟು ಎತ್ತರ ಎತ್ತಿ ಹಿಡಿಯುತ್ತಿದ್ದರು. ದೇವರಿಗೆ ಕೈಮುಗಿಯುವಂತೆ ಮಕ್ಕಳು ಮುಗ್ಧವಾಗಿ ಕೈ ಜೋಡಿಸುತ್ತಿದ್ದರು.

ಮತ್ತೊಂದು ಕಡೆ ಮಠದ ವಿದ್ಯಾರ್ಥಿ ನಿಲಯದ ಮಕ್ಕಳು ಒತ್ತರಿಸಿ ಬರುತ್ತಿದ್ದ ದುಃಖ ತಡದೇ ‘ಶಿವಕುಮಾರ ಸ್ವಾಮೀಜಿ ಅವರಿಗೆ ಜೈ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು. ಶ್ರೀಗಳು ನಿಧನರಾದ ಗಳಿಗೆಯಿಂದ ಮಡುಗುಟ್ಟಿರುವ ನೋವು ಮಕ್ಕಳಲ್ಲಿ ಜಯದ ಘೋಷಣೆಗಳನ್ನು ಹೊರಡಿಸುತ್ತಿದೆ. ಇದರ ನಡುವೆಯೇ ಮಠದ ಆವರಣದಲ್ಲಿ ನಡೆಯುತ್ತಿರುವ ದಾಸೋಹದ ಸಣ್ಣ ಪುಟ್ಟ ಕೆಲಸಗಳಲ್ಲಿ ಲಘು ಬಗೆಯಲ್ಲಿ ತೊಡಗಿಕೊಂಡಿದ್ದರು.

ಮಕ್ಕಳ ಈ ನೋವು, ಕೂಗು, ಭಕ್ತಿಯ ನಡುವೆಯೇ ‘ಭಕ್ತಿಯಿಂದ ಉದ್ಧಾನರ ಗೆದ್ದೆ, ಲೋಕದಿ ಜನರ ಮನಗೆದ್ದ ಲೋಕ ಜಂಗಮ ಗುರುವೇ, ಕರುನಾಡು ಕಂಡ ಹಿರಿಮೆಯ ಶಿವಕುಮಾರ ಪ್ರಭುವೇ’ ಎಂದು ಶ್ರೀಗಳ ಸಾಧನೆಯ ಕುರಿತು ಹೊರಡುತ್ತಿದ್ದ ಭಜನೆಯ ಪದಗಳು ವಾತಾವರಣವನ್ನು ಮತ್ತಷ್ಟು ಭಾವುಕಗೊಳಿಸಿದವು.

ಶಿವಕುಮಾರ ಸ್ವಾಮೀಜಿ ಅವರ ಕುರಿತು ಭಜನೆಯ ಪದಗಳನ್ನು ಗಾಯಕರು ಹಾಡಿದಾಗ ಭಕ್ತರ ಕಣ್ಣುಗಳಲ್ಲಿ ನೀರಾಡಿತು. ಜಯಕಾರದ ಘೋಷಣೆಯನ್ನು ಹೊರಡಿಸಿತು. ಮಠದಲ್ಲಿ ಕಲಿತು ಈಗ ನಾನಾ ಕಡೆಗಳಲ್ಲಿ ಉದ್ಯೋಗದಲ್ಲಿರುವವರು ಮತ್ತು ಇಲ್ಲಿನ ಅನ್ನ, ಆಶ್ರಯದಲ್ಲಿ ಬದುಕು ಕಟ್ಟಿಕೊಂಡವರು ಮೌನಕ್ಕೆ ಜಾರಿದರು.

ಸ್ವಾಮೀಜಿ ಅವರ ಪಾರ್ಥಿವ ಶರೀರವಿದ್ದ ವೇದಿಕೆಯ ಬಳಿ ಬರುತ್ತಿದ್ದಂತೆಯೇ ಹಿರಿಯರ ಕಣ್ಣುಗಳಲ್ಲಿಯೂ ನೀರು ಜಿನುಗಿತು.

‘ಇಲ್ಲಿನ ಅನ್ನವನ್ನು ಉಂಡು ಬೆಳೆದವರು ನಾವು. ಸ್ವಾಮೀಜಿ ಅವರು ನನ್ನಂತಹ ಹಲವರಿಗೆ ಬದುಕನ್ನು ಕೊಟ್ಟರು. ನಮ್ಮಂತಹ ಬಡವರಿಗಾಗಿ ಬದುಕಿದರು’ ಎನ್ನುತ್ತಲೇ ಚಿಕ್ಕನಾಯಕನಹಳ್ಳಿಯ ಶಿವಮಲ್ಲಪ್ಪ ಕಣ್ಣೀರು ಹಾಕಿದರು.

ಸ್ವಾಮೀಜಿ ಅವರ ಕ್ರಿಯಾ ಸಮಾಧಿ ಪೂರ್ಣವಾಗುವವರೆಗೂ ಜಯದ ಘೋಷಣೆಗಳು, ಕಣ್ಣೀರು ಭಕ್ತರ ಮುಖದಲ್ಲಿ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT