ಸೋಮವಾರ, ಜೂಲೈ 6, 2020
22 °C
ಸುಖ ಸಂಸಾರಕ್ಕೆ ಶಿವಸೂತ್ರಗಳು

ಸಂಸಾರ ಚೆನ್ನಾಗಿರಬೇಕೆ? ಪರಶಿವನ ಮಾತು ಕೇಳಿ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

Prajavani

ಒಂದು ದಿನ ಶಿವಪ್ಪನು ತನ್ನ ಮನದೊಡತಿ ಪಾರ್ವತಿಯ ಕೈಹಿಡಿದು ಲೋಕಲೋಕಗಳನ್ನು ತಿರುಗಾಡುತ್ತಾ ಭೂಲೋಕಕ್ಕೂ ಬಂದ. ಮಾನವ ಶರೀರ ಹೊತ್ತ ತನ್ನ ಮಕ್ಕಳು ಅನುಭವಿಸುತ್ತಿದ್ದ ಹತ್ತಾರು ಬಗೆಯ ಕಷ್ಟಗಳನ್ನು ಕಂಡು ಪಾರ್ವತಿಯ ತಾಯಿಕರುಳು ಚುರುಕ್‌ ಅಂದು, ‘ಏನೋ ಒಂದು ಕೇಳಬೇಕಿತ್ತು’ ಎಂಬಂತೆ ಗಂಡನನ್ನೊಮ್ಮೆ ನೋಡಿದಳು. ‘ಅಮ್ಮೋರ ಮನಸ್ಸಿಗೆ ಬಂದ ಮೇಲೆ ಮುಗಿಯಿತು’ ಎಂದು ಇಷ್ಟುವರ್ಷ ಸಂಸಾರ ನಡೆಸಿದ್ದ ಪರಶಿವನಿಗೆ ಅರ್ಥವಾಗಿರಲಿಲ್ಲವೇ? ‘ಕೇಳಿಬಿಡು, ನನ್ಹತ್ರ ಏನು ಸಂಕೋಚ’ ಎಂದು ಮುಗುಳ್ನಕ್ಕ.

‘ಅಲ್ಲ ಕಣ್ರೀ, ಇಲ್ಲಿರೋರೆಲ್ಲಾ ನಮ್ಮ ಮಕ್ಕಳೇ ತಾನೆ? ಅವನ ಹತ್ತಿರ ದುಡ್ಡಿಲ್ಲ, ಆದರೆ ನೆಮ್ಮದಿಯಿದೆ. ಇವನ ಹತ್ತಿರ ದುಡ್ಡು ಇದೆ, ನೆಮ್ಮದಿ ಇಲ್ಲ. ಅವಳ ಹತ್ತಿರ ದುಡ್ಡು–ನೆಮ್ಮದಿ ಎರಡೂ ಇದೆ. ಇವಳ ಹತ್ತಿರ ದುಡ್ಡು–ನೆಮ್ಮದಿ ಎರಡೂ ಇಲ್ಲ. ಯಾಕ್ರೀ ಇಷ್ಟೆಲ್ಲಾ ವಿಚಿತ್ರ ಮಾಡಿಟ್ಟಿದ್ದೀರಿ. ಇವನ ಕಡೆ ನೋಡ್ರೀ, ಕಾರಣವೇ ಇಲ್ಲದೆ ಸಿಡುಕ್ತಾನೆ. ಅವನ ಕಡೆ ನೋಡ್ರೀ, ಕಾರಣವೇ ಇಲ್ಲದೆ ಹೆದರಿ ಸಾಯ್ತಿದ್ದಾನೆ. ಮಕ್ಕಳು ನೆಮ್ಮದಿಯಾಗಿರಲಿ ಅಂತ ತಾನೆ ಎಲ್ಲ ತಾಯಂದಿರೂ ಬಯಸೋದು. ನನ್ನನ್ನು ಜಗತ್ತಿನ ತಾಯಿ ಅಂತಾರೆ. ಆದ್ರೆ ನನ್ನ ಮಕ್ಕಳ ಕಥೆ ನೋಡಿದ್ರೆ ಹೀಗಾಗಿದೆ...’ ಎಂದು ಬೇಸರ ತೋಡಿಕೊಂಡಳು.

‘ಅಯ್ಯೋ ನನ್ನ ಪಾರ್ವತಿ, ನಿನಗೆ ಎಲ್ಲವೂ ಗೊತ್ತು, ಎಲ್ಲರ ಕಥೆಯೂ ಗೊತ್ತು. ಹೀಗಿದ್ದೂ ಇದೇನು ಹೊಸ ನಾಟಕ ಹೂಡಿದ್ದೀಯೇ? ನಿನ್ನ ಮಗ ಬರೆದುಕೊಳ್ತಿರೋ ಮಹಾಭಾರತಕ್ಕೆ ನಮ್ಮಿಬ್ಬರ ಸಂವಾದದಂಥ ಸಲ್ಲಾಪವೂ ಸೇರಿಕೊಳ್ಳಲಿ ಅಂತಾನಾ...’ ಅಂದು ಶಿವಪ್ಪ ಮಾತಿಗೆ ಶುರುವಿಟ್ಟುಕೊಂಡ.

***

‘ದೇಶ ಚೆನ್ನಾಗಿರಬೇಕು ಅಂದ್ರೆ, ದೇಶದ ಜನರು ನೆಮ್ಮದಿಯಾಗಿರಬೇಕು ಅಂದ್ರೆ ರಾಜ ಯೋಗ್ಯನಾಗಿರಬೇಕು, ವಿನಯಶಾಲಿಯಾಗಿರಬೇಕು. ರಾಜನನ್ನು ಜನರು ಆದರ್ಶವೆಂದು ಭಾವಿಸಿ ಅವನ ನಡವಳಿಕೆಯನ್ನು ಅನುಸರಿಸಲು ಯತ್ನಿಸುತ್ತಾರೆ. ವೃಷಭನಾಮಕ ಪರಮಾತ್ಮ ದೇಶವನ್ನು ಸುಧಾರಿಸುವ ಮೊದಲು ತನ್ನ ಮಕ್ಕಳನ್ನು ಸುಧಾರಿಸಲು ಯತ್ನಿಸಿದ ಪ್ರಸಂಗವನ್ನು ಒಮ್ಮೆ ನೆನಪಿಸಿಕೊ. ಮೊದಲು ರಾಜ ತನ್ನ ಮಿತಿ, ದೌರ್ಬಲ್ಯಗಳನ್ನು ಅರಿತುಕೊಂಡು ಅವುಗಳಿಂದ ಹೊರಗೆ ಬರಲು ಪ್ರಯತ್ನಿಸಬೇಕು. ತನ್ನನ್ನು ತಾನು ತಿದ್ದಿಕೊಳ್ಳದ ರಾಜ ಪ್ರಜೆಗಳನ್ನು ತಿದ್ದಲು ಪ್ರಯತ್ನಿಸಿದರೆ ಅಪಹಾಸ್ಯಕ್ಕೆ ಪಾತ್ರನಾಗುತ್ತಾನೆ. ವಿಪರೀತ ಸಿಟ್ಟು, ಕಂಡದ್ದೆಲ್ಲ ಬೇಕು ಎನ್ನುವ ಆಸೆ, ಪರಸ್ತ್ರೀಯರಲ್ಲಿ ಸೋದರ ಭಾವ ಇಲ್ಲದ ರಾಜನನ್ನು ರಾಜ್ಯ ಸಹಿಸಿಕೊಳ್ಳುವುದಿಲ್ಲ. ರಾಜನೇ ಲಂಚ ಅಪೇಕ್ಷಿಸುವವನಾದರೆ ಜನರು ಎಲ್ಲಿ ನ್ಯಾಯ ಕೇಳಬೇಕು?

‘ನಿನಗೊಂದು ವಿಷಯ ಗೊತ್ತಾ? ರಾಜನಾದವನಿಗೆ ಸ್ವಂತದ್ದು ಅಂತ ಏನೊಂದೂ ಇರುವುದಿಲ್ಲ. ಜನಪರ ಕೆಲಸ, ಜನಪರ ಚಿಂತನೆ, ಜನರ ಸೌಖ್ಯ ಬಿಟ್ಟರೆ ಬೇರೆ ಯಾವುದೂ ಅವನ ಮನಸ್ಸಿನಲ್ಲಿ ಸುಳಿಯಬಾರದು. ಪ್ರಜೆಗಳ ಸೌಖ್ಯವೇ ರಾಜನ ಸೌಖ್ಯ, ಪ್ರಜೆಗಳ ಹಿತವೇ ಅವನ ಹಿತ. ರಾಜನ ಸರ್ವಸ್ವವೂ ಪ್ರಜೆಗಳ ಸಲುವಾಗಿಯೇ ಇದೆ. ರಾಜನನ್ನು ಕಂಡರೆ ಜನರು (ದರೋಡೆಕೋರರನ್ನು ಕಂಡಾಗ) ಹೆದರುವ ಪರಿಸ್ಥಿತಿ ಇರಬಾರದು. ಆದರೆ (ತಂದೆಗೆ ಮಗ ನೀಡುವ) ಗೌರವದಿಂದ ಆದರಿಸುವಂಥ ವಾತಾವರಣ ಇರಬೇಕು. ತನ್ನ ಸಂಬಂಧವಾದ (ಅಧಿಕಾರ ಚಲಾವಣೆಯ) ಭಯದಿಂದಲೂ, ಇತರರ (ಶತ್ರುಭೀತಿ, ಕಳ್ಳಕಾಕರ) ಭಯದಿಂದಲೂ, ಪಾರಸ್ಪರಿಕವಾದ (ಅನ್ಯಾಯ) ಭಯದಿಂದಲೂ, ಅಮಾನುಷರ ಭಯದಿಂದಲೂ ರಾಜನು ಪ್ರಜೆಗಳನ್ನು ರಕ್ಷಿಸಬೇಕು.

‘ಭೂಲೋಕದಲ್ಲಿರುವ ನಮ್ಮ ಮಕ್ಕಳನ್ನು ಬಡತನ ಕಾಡುತ್ತಿದೆ. ನಿನ್ನ ಚಿಂತೆಯೂ ಇದೇ ಅಲ್ಲವೇ? ಆದರೆ ನೋಡು, ಈ ಜನರು ತಮ್ಮ ಬಡತನಕ್ಕೂ ನಮ್ಮನ್ನೇ ಹೊಣೆಯಾಗಿಸುತ್ತಿದ್ದಾರೆ. ‘ಎಲ್ಲವೂ ಶಿವನಿಚ್ಛೆ, ಶಿವಕೊಟ್ರೆ ಉಂಟು – ಇಲ್ಲದಿದ್ದರೆ ಉಪವಾಸ’ ಅಂತ ನನ್ನ ತಲೆಯ ಮೇಲೆ ತಮ್ಮ ಭಾರವನ್ನೂ ಹೊರಿಸುತ್ತಿದ್ದಾರೆ. ಆ ಗಂಗೆಯನ್ನೂ ಈ ಚಂದ್ರನನ್ನೂ ಹೊತ್ತ ನನಗೆ ಭೂಲೋಕದ ಮಕ್ಕಳು ಭಾರವೇ? ಹೆತ್ತವರಿಗೆ ಎಂದಾದರೂ ಅವರ ಮಕ್ಕಳು ಭಾರ ಎನಿಸುತ್ತಾರೆಯೇ? ಆದರೆ ನನಗೆ ಇವರು ಯೋಚನೆ ಮಾಡುವ ರೀತಿಯೇ ಸರಿಕಾಣುವುದಿಲ್ಲ.

‘ನೋಡು ಪಾರ್ವತಿ, ಮನುಷ್ಯ ಪ್ರಯತ್ನವಿಲ್ಲದೆ ಯಾವ ಕಾರ್ಯವೂ ಸಿದ್ಧಿಸುವುದಿಲ್ಲ. ಬಡತನ ಹೋಗಬೇಕು ಎಂದರೆ ಹಣ ಸಂಪಾದನೆ ಮಾಡಿಕೊಳ್ಳಬೇಕು. ಹಣ ಸಂಪಾದನೆಗೆ ಶ್ರಮ ಹಾಕಬೇಕು. ರೈತರು ನೆಲವನ್ನು ಹದಮಾಡಿ, ಉತ್ತಿ, ಬಿತ್ತಿದರೆ ತಾನೆ ಮಳೆ ಬಂದಾಗ ಪೈರು ಮೊಳಕೆಯೊಡೆಯಲು ಸಾಧ್ಯ. ಮಳೆ ಸುರಿಸುವುದು ನನ್ನ ಜವಾಬ್ದಾರಿ. ಆದರೆ ಉಳುವುದು ಮನುಷ್ಯರ ಕೆಲಸವಲ್ಲವೇ? ಕೆಲವರಂತೂ ಮೂರುಹೊತ್ತೂ ಗ್ರಹ–ನಕ್ಷತ್ರಗಳೇ ಎಲ್ಲವನ್ನೂ ನಿರ್ವಹಿಸುತ್ತವೆ. ನಮ್ಮದೆನ್ನುವುದು ಏನೂ ಇಲ್ಲ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾರೆ. ಗ್ರಹ–ನಕ್ಷತ್ರಗಳು ಹಿಂದಿನ ಜನ್ಮದ ನಮ್ಮ ಕರ್ಮಗಳನ್ನು ಸೂಚಿಸಬಹುದು. ಆದರೆ ಅವಕ್ಕೆ ಕರ್ಮದ ಕರ್ತೃತ್ವವಿದೆಯೇ? (ಪೆಟ್ರೋಲ್ ಎಷ್ಟು ಇದೆ ಎಂದು ಎಂಜಿನ್‌ನ ನೀಡಲ್ ತೋರಿಸಬಹುದು. ಆದರೆ ಅದಕ್ಕೆ ಗಾಡಿಯನ್ನು ಮುಂದಕ್ಕೆ ಓಡಿಸುವ ಸಾಮರ್ಥ್ಯವಿದೆಯೇ?)

‘ಇನ್ನೊಂದು ವಿಷಯ ಸ್ಪಷ್ಟವಾಗಿ ತಿಳಿದುಕೊ. ಇಚ್ಛಿತ ಫಲ ಯಾವುದೇ ಇರಲಿ, ಅದರ ಮಾರ್ಗವೂ ಬಹಳ ಮುಖ್ಯ. ಅಡ್ಡದಾರಿಯಿಂದ ಹಣಮಾಡಿದರೆ ಈ ಜನ್ಮದಲ್ಲಿ ಸುಖ ಸಿಗಬಹುದು. ಆದರೆ ಮುಂದಿನ ಅನೇಕ ಜನ್ಮಗಳು ಅವರು ಕಷ್ಟದ ಸರಮಾಲೆಯನ್ನೇ ಅನುಭವಿಸಬೇಕಾಗುತ್ತೆ. ಒಳ್ಳೆಯ ಪ್ರಯತ್ನದಿಂದ ಕಾರ್ಯಸಿದ್ಧಿಗೆ ಯತ್ನಿಸಿದರೆ ಕೀರ್ತಿ, ಕೆಟ್ಟಮಾರ್ಗದಿಂದ ಯತ್ನಿಸಿದರೆ ಅಪಕೀರ್ತಿ. ಮನುಷ್ಯ ತನ್ನಿಂದ ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನೂ ಯೋಗ್ಯರೀತಿಯಲ್ಲಿ ಮಾಡಿ, ಮುಂದಿನದ್ದನ್ನು ದೈವಬಲಕ್ಕೆ ಬಿಡಬೇಕು. ಮಾನವ ಯತ್ನ ಮತ್ತು ದೈವಸಹಾಯ ಎರಡೂ ಸೇರಿದರೆ ಕೆಲಸಗಳು ಆಗುತ್ತವೆ. ಬಡತನ, ಅಜ್ಞಾನ ನೀಗುತ್ತದೆ. ಕೆಲಸವನ್ನೇ ಮಾಡದವನಿಗೆ ದೈವಸಹಾಯ, ಓದುವ ಯತ್ನವನ್ನೇ ಮಾಡದವನಿಗೆ ಜ್ಞಾನ ಎಂದಿಗೂ ಸಿಗದು.

‘ನಾನು ಈ ಜಗತ್ತಿನ ತಂದೆ. ಎಲ್ಲ ಮಕ್ಕಳೂ ನನ್ನ ಕಣ್ಣಿಗೆ ಸಮಾನರೇ. ಆದರೆ ತಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಲು ಕಷ್ಟಪಟ್ಟು, ಶ್ರದ್ಧೆಯಿಂದ ಕೆಲಸ ಮಾಡುವವರನ್ನು ಕಂಡರೆ ನನಗೆ ಇಷ್ಟ. ಅಂಥವರಿಗೆ ನಾನು ಬೇಗ ಒಲಿಯುತ್ತೇನೆ. ಈ ಭೂಮಿಗೆ ಜೀವವನ್ನು ತರುವಾಗಲೇ ಅದರ ಜೀವನನಿರ್ವಹಣೆಯ ಬಗ್ಗೆ ಯೋಚಿಸಿರುತ್ತೇನೆ. ಒಂದಿಷ್ಟು ಪ್ರತಿಭೆಯನ್ನು, ಸಾಮರ್ಥ್ಯವನ್ನು ಇಟ್ಟಿರುತ್ತೇನೆ. ಮನುಷ್ಯರೂ ಅಷ್ಟೇ, ತಮ್ಮ ಸಾಮರ್ಥ್ಯ, ಸ್ವಭಾವ, ಪ್ರತಿಭೆ ಕಂಡುಕೊಳ್ಳಲು ಮೊದಲು ಯತ್ನಿಸಬೇಕು. ಜೀವನ ನಿರ್ವಹಣೆಗೆ ಎಷ್ಟು ಉಪಾಯಗಳಿವೆಯೋ ಆ ಎಲ್ಲ ಉಪಾಯಗಳನ್ನೂ ನ್ಯಾಯಪೂರ್ವಕವಾಗಿ ವಿಚಾರಮಾಡಬೇಕು. ತನ್ನಲ್ಲಿರುವ ಶಕ್ತಿ (ಆತ್ಮಬಲ), ಉಪಾಯ, ದೇಶ, ಕಾಲ, ಕಾರಣ, ಪ್ರವಾಸ ಮೊದಲಾದ ವಿಷಯಗಳಲ್ಲಿ ಯುಕ್ತಿಪೂರ್ವಕ ವಿಚಾರ ಮಾಡಬೇಕು. ದೈವಾನುಕೂಲವನ್ನೂ ಗಮನಿಸಿ ಯಾವ ವೃತ್ತಿಯಿಂದ ತನ್ನ ಜೀವಿಕೆಯು ಸುಗಮವಾಗಿ ಸಾಧಿಸಲ್ಪಡುವುದೆಂದು ಕಂಡುಬರುವುದೋ ಆ ವೃತ್ತಿಯನ್ನು (ಉದ್ಯೋಗ ಅಥವಾ ಕಸುಬು ಅಥವಾ ವ್ಯಾಪಾರ) ಆರಂಭಿಸಬೇಕು.

‘ಇಷ್ಟಪಟ್ಟ ಕೆಲಸ ಸಿಕ್ಕಿತೆಂದು ಮೈಮರೆಯಬಾರದು. ಉದ್ಯೋಗದಲ್ಲಿ ಮೇಲ್ಮೆ ಪಡೆಯಲು, ಮಾಡುತ್ತಿರುವ ಕೆಲಸವನ್ನು ಕಾಪಾಡಿಕೊಳ್ಳಲು ಯತ್ನಿಸಬೇಕು. ಹಾಗೆಂದು ಕೆಲಸ ಮಾಡುವುದರಲ್ಲಿಯೇ ಮೈಮರೆಯದೇ ಅದರ ಫಲವನ್ನು ಉಪಭೋಗಿಸುತ್ತಲೂ ಇರಬೇಕು. ಸಂಪಾದಿಸಿದ ಹಣದಿಂದ ಕುಟುಂಬದೊಂದಿಗೆ ಸಂತೋಷವಾಗಿರಬೇಕು ಮತ್ತು ಕ್ಷಣಗಳನ್ನು ಮನಃಪೂರ್ವಕ ಅನುಭವಿಸಬೇಕು. ಕಸುಬು ಸಿದ್ಧಿಸಿತೆಂದು ಮೈಮರೆತರೆ ವೃತ್ತಿಯೇ ವಿನಾಶವಾಗುವಂತೆ ಆಗುತ್ತದೆ. ವೃತ್ತಿಯ ರಕ್ಷಣೆ ಮತ್ತು ವೃದ್ಧಿಗಳನ್ನು ಮಾಡದೇ ಉಪಭೋಗಿಸುತ್ತಲೇ ಇದ್ದರೆ ಪರ್ವತ ಸದೃಶವಾದ ಧನರಾಶಿಯೂ ಕೆಲವೇ ದಿನಗಳಲ್ಲಿ ಕರಗಿಹೋಗುತ್ತದೆ.

‘ನಾನೇನೂ ಬ್ರಹ್ಮಸೂತ್ರಭಾಷ್ಯಗಳಂತೆ ಸಂಕೀರ್ಣಸೂತ್ರಗಳನ್ನು (ಕೋಡ್‌ವರ್ಡ್) ಹೇಳುತ್ತಿಲ್ಲ. ಇದು ಸರಳವಾದ ಸಂಗತಿ. ಒಬ್ಬ ಹುಟ್ಟು ದರಿದ್ರನಿದ್ದ ಅಂದುಕೊ. ಅವನಿಗೆ ದೈವಸಹಾಯದಿಂದ ಕಡಿಮೆ ಬಡ್ಡಿಗೆ ಸಾಲ ದೊರೆಯಿತು. ಮನುಷ್ಯಯತ್ನದಿಂದ ಸೌದೆ ವ್ಯಾಪಾರ ಮಾಡಿ, ಮೇಲೆ ಬಂದ. ಆದರೆ, ತನ್ನಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ ಎಂದು ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು, ಸಂಸಾರ–ಸುಖಗಳಲ್ಲಿಯೇ ಮೈಮರೆಯಲು ಆರಂಭಿಸಿದ. ಮೊದಲು ಒಣಗಿದ ಸೌದೆಯನ್ನು ಮಾತ್ರ ವಿಂಗಡಿಸಿ, ಸಣ್ಣಗೆ ಕತ್ತರಿಸಿ ಮಾರುತ್ತಿದ್ದ. ಕೆಲಸದಲ್ಲಿ ಆಸಕ್ತಿ ಕಳೆದುಕೊಂಡ ನಂತರ ಹಸಿಸೌದೆ, ಅಡ್ಡಾದಿಡ್ಡಿ ಸೀಳಿದ ಸೌದೆಗಳನ್ನೂ ಗ್ರಾಹಕರಿಗೆ ಮಾರಲು ಆರಂಭಿಸಿದ. ಅವನ ಅಂಗಡಿಗಳ ಸುತ್ತಮುತ್ತ ಹಲವು ಸೌದೆ ಅಂಗಡಿಗಳು ಬಂದವು. ಜನರು ಅಲ್ಲಿಗೆ ಹೋಗಲು ಆರಂಭಿಸಿದ ಮೇಲೆ ಇವನಿಗೆ ವ್ಯಾಪಾರ ಕಡಿಮೆಯಾಯಿತು. ಕೊನೆಗೊಮ್ಮೆ ಅಂಗಡಿ ಬಾಗಿಲು ಹಾಕುವ ಸ್ಥಿತಿ ಬಂತು. ಅವನು ಮತ್ತೆ ಬಡವನಾಗಬೇಕಾಯಿತು. ಅವನು ತುಸು ಎಚ್ಚೆತ್ತುಕೊಂಡಿದ್ದರೆ, ಮೈಮರೆಯದೇ ವ್ಯಾಪಾರದ ಕಡೆಗೆ ಗಮನ ಕೊಟ್ಟಿದ್ದರೆ ಮತ್ತೆ ಬಡವನಾಗುವ ಪರಿಸ್ಥಿತಿ ಬರುತ್ತಿತ್ತೆ?

‘ದುಡಿಮೆಯಲ್ಲಿಯೇ ಮೈಮರೆಯಬೇಕು, ಹಣ ಗಳಿಸುವುದು ಮತ್ತು ಅದನ್ನು ಉಳಿಸುವುದೇ ಜೀವನದ ಪರಮ ಉದ್ದೇಶವಾಗಿರಬೇಕು ಎನ್ನುವುದೂ ನನ್ನ ಮಾತಿನ ಭಾವವಲ್ಲ. ಪ್ರಾಮಾಣಿಕವಾಗಿ ಗಳಿಸಿದ ಹಣವನ್ನು ಧರ್ಮ (ದಾನ), ಅರ್ಥ (ವ್ಯಾಪಾರಾಭಿವೃದ್ಧಿ), ಕಾಮ (ಸುಖ) ಮತ್ತು ಆಪತ್ತಿನ ನಿವಾರಣೆ (ಆಪದ್ಧನ) ಎಂಬ ನಾಲ್ಕು ಉದ್ದೇಶಗಳಿಗಾಗಿ ವಿಭಾಗಿಸಿಕೊಳ್ಳಬೇಕು. ಧರ್ಮ ಕಾರ್ಯಕ್ಕೆಂದು ಮೀಸಲಿಟ್ಟ ಹಣವನ್ನು ಎಂದಿಗೂ ನಮ್ಮ ಬಳಿಗೆ ಬಂದು ದಾನ ಮಾಡಿ ಎಂದು ಬೇಡದ ದೀನ–ದಲಿತರ (ಬಡವರು) ಅಭ್ಯುದಯಕ್ಕೆ, ಅನ್ನದಾನ, ಪಿತೃಪೂಜೆ, ದೇವತಾಕಾರ್ಯದಂಥ ಸತ್ಕಾರ್ಯಗಳಿಗೆ ಬಳಸಬೇಕು. ಇಂಥ ಕೆಲಸಗಳಿಗೆ ಪ್ರಚಾರವನ್ನಾಗಲಿ, ಫಲವನ್ನಾಗಲಿ ಅಪೇಕ್ಷಿಸಬಾರದು. ಅರ್ಥದ ಹಣವನ್ನು ಸ್ಥಾನಪ್ರಾಪ್ತಿಗೆ (ಸಮಾಜದಲ್ಲಿ ನಮ್ಮ ಸ್ಟೇಟಸ್ ಹೆಚ್ಚಿಸಿಕೊಳ್ಳುವುದು), ರಾಜನ ವಿಶ್ವಾಸ, ಮಿತ್ರ ಸಂಗ್ರಹ, ಮಕ್ಕಳ ವಿವಾಹ, ಧನದ ವೃದ್ಧಿ, ಅನರ್ಥದ (ಕಷ್ಟ) ನಿವಾರಣೆಗೆ ಬಳಸಬೇಕು. ಕಾಮಕ್ಕೆಂದು ಮೀಸಲಿಟ್ಟ ಹಣವನ್ನು ಶರೀರಪೋಷಣೆ, ವಿಶಿಷ್ಟ ಆಹಾರ, ಮನರಂಜನೆ ಇತ್ಯಾದಿ ಮಾರ್ಗಗಳಲ್ಲಿ ಸುಖ ಅನುಭವಿಸಲು ಬಳಸಬೇಕು. ನಾಲ್ಕನೆಯ ಭಾಗವಾದ ಆಪದ್ಧನವನ್ನು ಮಾತ್ರ ಅನಿವಾರ್ಯ ಸಂದರ್ಭ ಹೊರತುಪಡಿಸಿ ಎಂದಿಗೂ ಖರ್ಚು ಮಾಡಬಾರದು. ಸರ್ಕಾರದಿಂದ ಉಪದ್ರವ, ಬರಗಾಲ, ಕಾಯಿಲೆ, ವೃದ್ಧಾಪ್ಯದ ಸಂದರ್ಭದಲ್ಲಿ ಆಪದ್ಧನ ಬಳಕೆಗೆ ಒದಗುತ್ತದೆ. ಕಷ್ಟಪಟ್ಟು ಗಳಿಸಿದ ಹಣವನ್ನು ಎಲ್ಲ ಶಕ್ತಿ–ಯುಕ್ತಿ ಬಳಸಿ ರಕ್ಷಿಸಿಕೊಳ್ಳಬೇಕು. ಧರ್ಮದ ಕೆಲಸಗಳಿಗೆ ಹಣವೂ ಒಂದು ಸಾಧನ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು.

‘ಇತರರ ವಸ್ತುಗಳನ್ನು, ದ್ರವ್ಯವನ್ನು ಕೇಳದೇ ತೆಗೆದುಕೊಳ್ಳಬಾರದು. ಧೀರನಾದವ ಯಾಚಿಸಬಾರದು. ಜೀವನು ಯಾವ ವಿಧದ ಕರ್ಮವನ್ನು ಮಾಡುವನೋ ಅದಕ್ಕೆ ಅನುಗುಣವಾದ ಫಲವನ್ನೇ ಉಪಭೋಗಿಸುವನು. ತಾನು ಮಾಡಿದ ಕರ್ಮದ ಫಲವನ್ನು ತಾನೇ ಅನುಭವಿಸಬೇಕೇ ಹೊರತು ಒಬ್ಬನ ಕರ್ಮದ ಫಲವನ್ನು ಮತ್ತೊಬ್ಬನು ಉಪಭೋಗಿಸಲು ಸಾಧ್ಯವಿಲ್ಲ. ಇವರನ್ನು ನೋಡು, ಇವರಿಗೆ ಸದಾ ತಮ್ಮ ಶರೀರಪೋಷಣೆ ಮತ್ತು ಸುಖದ ಬಗ್ಗೆಯೇ ಆಸಕ್ತಿ. ಪಕ್ಕದ ಮನೆಯವರ ಕಷ್ಟಕ್ಕೆ ಅಯ್ಯೋ ಎನ್ನುವ ಮನಸ್ಸೂ ಸಹ ಇವರಿಗೆ ಇಲ್ಲ. ಇವರ ಕಷ್ಟಕ್ಕೆ ಬೇರೆಯವರು ಸ್ಪಂದಿಸಬೇಕು ಎಂದು ನೀನು ಹೇಗೆ ಬಯಸುತ್ತೀ?

‘ಇವರನ್ನು ನೋಡು, ತನ್ನ ಹೆಂಡತಿಗೆ ಆಸಕ್ತಿ ಎಂದು ಬಡವರಿಗೆ ಅಷ್ಟೋಇಷ್ಟೋ ದಾನ ಮಾಡುತ್ತಾರೆ. ಕೊಡೋ ದುಡ್ಡು ಕೊಟ್ಟು ನಂತರ ಹೊಟ್ಟೆ ಉರಿದುಕೊಳ್ಳುತ್ತಾರೆ. ಇವರ ಪರಿಸ್ಥಿತಿ ಏನಾಗುತ್ತೆ ಗೊತ್ತಾ? ತಮ್ಮ ಸುತ್ತಮುತ್ತ ಸಾಕಷ್ಟು ಭೋಗಸಂಪತ್ತು ಇದ್ದರೂ ಇವರಿಗೆ ಅದನ್ನು ಅನುಭವಿಸುವ ಯೋಗ ಇರುವುದಿಲ್ಲ. ಬೇರೆಯವರು ಅನುಭವಿಸುವುದನ್ನು ನೋಡಿ ‘ಕಷ್ಟಪಡುವುದು ನಾನು, ಸುಖಪಡುವುದು ಅವರು’ ಎಂದು ನಿಟ್ಟುಸಿರು ಬಿಡುವುದು ಇವರ ಬಾಳಾಗುತ್ತೆ. ಆದರೆ ಇನ್ನೂ ಒಂದಷ್ಟು ಜನರಿರುತ್ತಾರೆ. ಅವರ ಮನೆಯಲ್ಲಿ ಬಡತನ ಕಾಲುಚಾಚಿ ಮಲಗಿರುತ್ತೆ. ಯಾವುದೇ ಭೋಗದ ವಸ್ತುಗಳಿಗೆ ಅವರು ಒಡೆಯರಲ್ಲ. ಆದರೆ ಪ್ರತಿದಿನ ಸುಖ ಅವರನ್ನು ಹುಡುಕಿ ಬರುತ್ತೆ. ಊರಿಗೆ ಹೋಗಬೇಕು ಎಂದುಕೊಂಡರೆ ಯಾರೋ ಸಿಕ್ಕಿ ಬಸ್ ಟಿಕೆಟ್ ಕೊಡಿಸುತ್ತಾರೆ, ಯುಗಾದಿಗೆ ಒಬ್ಬಟ್ಟು ತಿನ್ನಬೇಕು ಎಂದುಕೊಂಡರೆ ಯಾರೋ ಬಂದು ಊಟಕ್ಕೆ ಕರೆಯುತ್ತಾರೆ. ಅನಿಶ್ಚಿತ ಬಾಳಿನಲ್ಲಿ ಸುಖಕ್ಕೆ ಕೊರತೆಯಿರುವುದಿಲ್ಲ.

‘ಇದಕ್ಕೆ ಕಾರಣ ಏನು ಗೊತ್ತೆ? ಇವರ ಬಳಿ ಹಣಕ್ಕೆ ಬಡತನ ಇರಬಹುದು. ಆದರೆ ಇನ್ನೊಬ್ಬರ ಕಷ್ಟಕ್ಕೆ ಕರಗುವ ಮನಸ್ಸು ಧಾರಾಳವಾಗಿದೆ. ಯಾರದೇ ಮನೆಯಲ್ಲಿ ಸಮಾರಂಭ ಎಂದರೆ, ಊರಿನಲ್ಲಿ ಹಬ್ಬ ಎಂದರೆ ಮುಂದೆ ನಿಂತು ಶ್ರಮದಾನ ಮಾಡುತ್ತಾರೆ. ನಾನು ಇಂತಿಂಥ ಕೆಲಸ ಮಾಡಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಸ್ವಭಾವ ಇವರದ್ದಲ್ಲ. ‘ನನ್ನ ಹತ್ತಿರ ಏನೂ ಇಲ್ಲ, ಕೈಲಾದಷ್ಟು ಕೆಲಸ ಮಾಡಿಕೊಟ್ಟೆ. ದೇವರಿಗೆ ಪ್ರೀತಿಯಾಗಲಿ’ ಎಂದು ಪರೋಪಕಾರಕ್ಕಾಗಿಯೇ ತುಡಿಯುವ ಒಳ್ಳೆಯ ಮನಸ್ಸು ಇವರದು. ಮನಸ್ಸಿನಲ್ಲಿ ಇವರು ಅಂದುಕೊಳ್ಳುವ ಮಾತು ನನಗೆ ಕೇಳಿಸದೇ? ಇವರ ಪರಿಶ್ರಮಕ್ಕೆ ತಕ್ಕ ಗೌರವ ಕೊಡಬೇಕು ಎಂದೇ ಇಂಥವರ ಅಗತ್ಯವನ್ನು ನಾನೇ ಅರಿತುಕೊಂಡು ಅದಕ್ಕೆ ಸ್ಪಂದಿಸುವಂತೆ ಅಕ್ಕಪಕ್ಕದವರ ಮನಸ್ಸಿಗೆ ಪ್ರೇರಣೆ ಮಾಡುತ್ತೇನೆ.

‘ನೋಡು ಪಾರ್ವತಿ ಇದೇ ಭೂಲೋಕದಲ್ಲಿ ಇನ್ನೂ ಮೂರು ಥರದ ಜನರಿದ್ದಾರೆ. ಎದುರಿಗೆ ಇರುವವರಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುವೊಂದು ಇವರ ಬಳಿ ಇದೆ. ಉದಾಹರಣೆಗೆ, ಆ ವಸ್ತುವನ್ನು ದೋಸೆ ಹುಯ್ಯುವ ಹೆಂಚು ಎಂದುಕೊ. ಇವರ ಬಳಿ ಅಂಥ ಎರಡು ಹೆಂಚು ಇದೆ, ನೆರೆಮನೆಗೆ ನೆಂಟರು ಬಂದಾಗ ಇವರ ಮನೆಯಲ್ಲಿ ದೋಸೆ ಹಿಟ್ಟು ಸಹ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೆಲವರು ನೆರೆಯವರ ಕಷ್ಟವನ್ನು ಅರಿತು, ಅವರು ಕೇಳುವ ಮೊದಲೇ ಸ್ಪಂದಿಸುತ್ತಾರೆ. ಅಗತ್ಯ ನೆರವು ನೀಡುವ ಮೂಲಕ ಅವರ ಮಾನ–ಪ್ರಾಣಗಳನ್ನು ಕಾಪಾಡುತ್ತಾರೆ. ಇನ್ನೂ ಕೆಲವರು ನೆರೆಯವರ ಕಷ್ಟ ಅರಿತುಕೊಂಡರೂ, ಅವರು ತಾವಾಗಿಯೇ ಕೇಳುವವರೆಗೂ ಸುಮ್ಮನಿದ್ದು, ಅವರು ಬೇಡಿಕೊಂಡ ನಂತರ ಅಗತ್ಯ ವಸ್ತುಗಳನ್ನು ಒದಗಿಸುತ್ತಾರೆ. ಮತ್ತೊಂದು ವರ್ಗದ ಜನರು ಇರುತ್ತಾರೆ. ಅವರು ನೆರೆಯವರ ಕಷ್ಟ ಅರಿತರೂ, ಅವರು ತಾವಾಗಿಯೇ ಕೇಳಿದರೂ ತಮ್ಮಲ್ಲಿರುವ ವಸ್ತುಕೊಡುವುದಿಲ್ಲ. ತಮ್ಮ ಕಾಠಿಣ್ಯದಿಂದಾಗಿ ನೆರೆಯವರ ಮಾನ ಹರಾಜಾದಾಗ ಸಂತಸ ಅನುಭವಿಸುತ್ತಾರೆ.

‘ಪರರ ಕಷ್ಟ ಅರಿತುಕೊಂಡು ನೆರವು ಒದಗಿಸಿದವರ ಅಲ್ಪ ಪ್ರಯತ್ನಕ್ಕೆ ನಾನು ಪ್ರೀತನಾಗಿ ಫಲಗಳನ್ನು ಕೊಡುತ್ತೇನೆ, ಪರರಿಂದ ಬೇಡಿಸಿಕೊಂಡು ಸಹಾಯ ಮಾಡಿದವರೂ ಹೆಚ್ಚು ಕಷ್ಟಪಟ್ಟರೆ ಮಾತ್ರ ಫಲಗಳನ್ನು ಕೊಡುತ್ತೇನೆ, ಪರರ ಕಷ್ಟಕ್ಕೆ ಕರಗದವರ ಪ್ರಯತ್ನಕ್ಕೆ ನಾನೆಂದಿಗೂ ಕರಗುವುದಿಲ್ಲ. ಸಿರಿವಂತರಾಗಿದ್ದ ಅಂಥವರು ಬಡವರಾದರೂ ನಾನು ಕಣ್ಣೆತ್ತಿಯೂ ನೋಡುವುದಿಲ್ಲ.

‘ಇನ್ನು ಸಂಸಾರದ ವಿಷಯಕ್ಕೆ ಬರೋಣ ದೇವಿ. ರೂಪ, ಬಣ್ಣ, ಮೈಕಟ್ಟನ್ನು ಕಡೆಗಣಿಸಿ ಕೆಲ ಪುರುಷರನ್ನು ಕಂಡರೆ ಮಹಿಳೆಯರು ಗೌರವದಿಂದ ಆದರಿಸುತ್ತಾರೆ. ಕೆಲವು ಮಹಿಳೆಯರ ಕಷ್ಟಕ್ಕೆ ಪುರುಷರು ತಕ್ಷಣ ಕರಗುತ್ತಾರೆ. ಏಕೆ ಹೀಗೆ ಅಂತ ಎಂದಾದರೂ ಯೋಚನೆ ಮಾಡಿರುವೆಯಾ? ಇದರ ರಹಸ್ಯ ಈಗ ಹೇಳ್ತೀನಿ ಕೇಳು. ಯಾರು ತಮ್ಮ ಪತ್ನಿ/ಪತಿಯ ಅವಗುಣವನ್ನು ಎತ್ತಿ ಆಡುವುದಿಲ್ಲವೋ, ಬೇರೆಯವರ ಎದುರು ತಮ್ಮ ಸಂಗಾತಿಯ ಮಾನ ತೆಗೆಯುವುದಿಲ್ಲವೋ ಅಂಥವರನ್ನು ಇತರರೂ ಗೌರವಿಸುತ್ತಾರೆ, ಆದರಿಸುತ್ತಾರೆ. ತನ್ನ ಹೆಂಡತಿಯನ್ನು ಬೈಯ್ದುಕೊಂಡು ತಿರುಗುವ ಪುರುಷನನ್ನು ಇತರ ಮಹಿಳೆಯರು ಹೀನಾಯವಾಗಿ ಕಾಣುತ್ತಾರೆ. ಹತ್ತು ಜನರಿದ್ದಾಗ ಹೆಂಡತಿಯ (ಸಂಗಾತಿಯ) ಗುಣವರ್ಣನೆ ಮಾಡಬೇಕು, ಏಕಾಂತದಲ್ಲಿ ಲೋಪಗಳನ್ನು ತಿಳಿಸಿಹೇಳಿ ತಿದ್ದಬೇಕು. ಇನ್ನೊಬ್ಬರ ಹೆಂಡತಿ / ಗಂಡನನ್ನು ಕಾಮದ ದೃಷ್ಟಿಯಿಂದ ಎಂದಿಗೂ ನೋಡಬಾರದು. ಆಗ ಸಂಸಾರ ಚೆನ್ನಾಗಿರುತ್ತದೆ.

‘ಭೂಲೋಕದಲ್ಲಿರುವ ಎಲ್ಲ ಮನುಷ್ಯರೂ ನಮ್ಮ ಮಕ್ಕಳೇ ಆಗಿದ್ದರೂ ಬುದ್ಧಿವಂತಿಕೆ, ಗ್ರಹಣ ಸಾಮರ್ಥ್ಯದಲ್ಲಿ ವ್ಯತ್ಸಾಸವೇಕೆ ಎಂದು ನೀನೊಮ್ಮೆ ಕೇಳಿದ್ದೆ. ಇಂದು ಅದಕ್ಕೂ ಉತ್ತರ ಹೇಳುತ್ತೇನೆ ಕೇಳು. ಮನುಷ್ಯನಾದವ ಹುಟ್ಟಿನಿಂದ ಸಾಯುವವರೆಗೂ ಜ್ಞಾನ ಸಂಪಾದನೆಗೆ ಪ್ರಯತ್ನ ಮಾಡಬೇಕು. ತಾನು ಅರಿತದ್ದನ್ನು ಇನ್ನೊಬ್ಬರಿಗೆ ನಿರ್ವಂಚನೆಯಿಂದ ಹೇಳಿಕೊಡಬೇಕು. ತನಗೆ ತಿಳಿದಿರುವುದು, ಇನ್ನೊಬ್ಬರಿಗೆ ತಿಳಿದಿಲ್ಲ, ನಾನು ಮಹಾಜ್ಞಾನಿ, ಉಳಿದವರೆಲ್ಲರೂ ಅಜ್ಞಾನಿಗಳು ಎಂದು ಹಂಗಿಸುವವರನ್ನು ಕಂಡರೆ ನನಗೆ ಕೆಂಡದಂಥ ಕೋಪ. ಅಂಥವರ ಗ್ರಹಣ ಶಕ್ತಿಯನ್ನೇ ನಾನು ಹೀರಿಬಿಡುತ್ತೇನೆ. ಗ್ರಹಣ ಶಕ್ತಿಯೇ ಇಲ್ಲದವರು ಏನು ಜ್ಞಾನಾರ್ಜನೆ ಮಾಡಿಯಾರು?

‘ಯಾವಾಗ ನನಗೆ ಹೆಚ್ಚು ಸಿಟ್ಟು ಬರುತ್ತದೆ ಎಂಬುದು ನಿನ್ನ ಕುತೂಹಲವಲ್ಲವೇ? ಹೇಳುತ್ತೇನೆ ಕೇಳು. ಮಾಡುತ್ತಿರುವುದು ಪಾಪಕಾರ್ಯವೆಂದು ತಿಳಿದಿದ್ದರೂ, ಅನುದಿನವೂ ಅದೇ ಪಾಪಕರ್ಮವನ್ನೇ ಉದ್ದೇಶಪೂರ್ವಕವಾಗಿ ಮಾಡುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು. ಇಂಥವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಅವರು ಏನು ಮಾಡಿದರೂ ಪಾಪಕ್ಕೆ ಪ್ರಾಯಶ್ಚಿತ್ತ ಸಿಗುವುದಿಲ್ಲ. ಅದರ ಫಲವನ್ನು ಅನುಭವಿಸಿಯೇ ಕಳೆದುಕೊಳ್ಳಬೇಕು. ಅಹಿಂಸೆ, ಪರರಲ್ಲಿ ದಯೆ ನನಗೆ ಪರಮ ಪ್ರೀತಿಯ ವಿಷಯಗಳು. ಇಂಥವರನ್ನು ನಾನು ಎಂದೂ ಬಿಟ್ಟುಕೊಡುವುದಿಲ್ಲ. ಅವರಿಗೆ ನೆರಳಾಗಿ ನಿಂತು ಕಾಪಾಡಿಕೊಳ್ಳುತ್ತೇನೆ’.

(ಆಧಾರ: ಮಹಾಭಾರತ ಅನುಶಾಸನ ಪರ್ವದಲ್ಲಿ ಬರುವ ಉಮಾ–ಮಹೇಶ್ವರ ಸಂವಾದ ಪಠ್ಯ, ಸತ್ಯಾತ್ಮ ತೀರ್ಥರು ಮತ್ತು ಕಲ್ಲಾಪುರ ಪವಮಾನಾಚಾರ್ಯರ ಪ್ರವಚನ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.