ಶುಕ್ರವಾರ, ಮಾರ್ಚ್ 5, 2021
27 °C
ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು

ಆಪರೇಷನ್ ಕಮಲ ನಡೆಸುತ್ತಿರೋದು ಸತ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ದೋಸ್ತಿ ಸರ್ಕಾರ ಕಲ್ಲು ಬಂಡೆಯಿದ್ದಂತೆ. ಇದರಲ್ಲಿ ಅನುಮಾನವೇ ಬೇಡ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿರೋದು ಸತ್ಯ. ನಮ್ಮ ಶಾಸಕರು ಹಾಗೂ ಜೆಡಿಎಸ್‌ ಶಾಸಕರಿಗೆ ಕೋಟಿ ಕೋಟಿ ಆಮಿಷವೊಡ್ಡುತ್ತಿರುವುದು ನಿಜ’ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ತಿರುಗೇಟು ನೀಡಿದರು.

‘ಆಪರೇಷನ್ ಕಮಲ ನಡೆಯುತ್ತಿಲ್ಲ’ ಎಂದ ಜಿ.ಟಿ.ದೇವೇಗೌಡರನ್ನು ಕುಟುಕಿದ ಸಿದ್ದರಾಮಯ್ಯ, ‘ನಾನಂತೂ ಮೋದಿ, ಅಮಿತ್‌ ಶಾ ಜತೆ ಮಾತನಾಡಿಲ್ಲ’ ಎಂದರು.

‘ಮೈತ್ರಿ ಸರ್ಕಾರ ನಡೆಸುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಫಲರಾಗಿದ್ದಾರೆ’ ಎಂದು ಹುಣಸೂರು ಶಾಸಕ ಎಚ್‌.ವಿಶ್ವನಾಥ್‌ ಮಾಡಿದ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ನೆಟ್ಟಗೆ ನಿಭಾಯಿಸದವರು ನಮ್ಮ ಬಗ್ಗೆ ಏನು ಮಾತಾಡೋದು?’ ಎಂದು ಗರಂ ಆದರು.

ಏಳನೇ ಸಭೆ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು, ಪದಾಧಿಕಾರಿ
ಗಳ ಜತೆ ಸಿದ್ದರಾಮಯ್ಯ ಮೈಸೂರಿನ ಜೆ.ಪಿ.ಪ್ಯಾಲೇಸ್‌ನಲ್ಲಿ ಗುರುವಾರ ಏಳನೇ ಗೋಪ್ಯ ಸಭೆ ನಡೆಸಿದರು.

ಲೋಕಸಭಾ ಚುನಾವಣೆ ಸೋಲಿನ ಪರಾಮರ್ಶೆ ಸಭೆ ಎಂದು ಬಹಿರಂಗವಾಗಿ ಹೇಳಿಕೊಂಡರೂ ಆಂತರಿಕ ವಿದ್ಯಮಾನಗಳನ್ನು ಮಾತ್ರ ಯಾರೊಬ್ಬರೂ ಬಿಟ್ಟು ಕೊಡುತ್ತಿಲ್ಲ.

ಸಭೆಗಾಗಿ ಹೋಟೆಲ್ ಪ್ರವೇಶಿಸುವ ಮುನ್ನ ತಮ್ಮನ್ನು ಭೇಟಿಯಾದ ಬೆಂಬಲಿಗನೊಬ್ಬ ‘ಎವರ್‌ ಗ್ರೀನ್‌ ಸಿಎಂ ನೀವೇ’ ಎಂದಿದ್ದಕ್ಕೆ; ‘ನಡಿಯೋ ಅತ್ತ ಮೂದೇವಿ’ ಎಂದು ಆತನ ಕೆನ್ನೆಗೆ ಪ್ರೀತಿಯ ಪೆಟ್ಟೊಂದನ್ನು ನೀಡಿದ್ದು ಗಮನ ಸೆಳೆಯಿತು.

‘ಯಾರೂ ನನ್ನ ಮಾತು ನಂಬುತ್ತಿಲ್ಲ’

ಮೈಸೂರು: ‘ಆಪರೇಷನ್‌ ಕಮಲ ಮಾಡುವುದಿಲ್ಲವೆಂದು ಮೋದಿ ಹೇಳಿದ್ದರು. ಹೀಗಾಗಿ, ಸಮ್ಮಿಶ್ರ ಸರ್ಕಾರ ಉರುಳಿಸಲು ಅವರು ಪ್ರಯತ್ನಿಸುವುದಿಲ್ಲ ಎಂದಿದ್ದೇನೆ. ಆದರೆ, ಯಾರೂ ನನ್ನ ಮಾತು ನಂಬುತ್ತಿಲ್ಲ. ಸರ್ಕಾರವೇ ಬಿದ್ದು ಹೋಯಿತು ಎಂಬಷ್ಟರ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ ಅಥವಾ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಮೋದಿ ಪ್ರಯತ್ನ ನಡೆಸುತ್ತಿಲ್ಲ. ಅವರಿಗೆ ಬೇರೆಯೇ ಕೆಲಸಗಳಿವೆ. ಹೀಗಾಗಿ, ಆಪರೇಷನ್‌ ಕಮಲ ನಡೆಯುವುದಿಲ್ಲ’ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

‘ಜಿ.ಟಿ.ದೇವೇಗೌಡರಿಗೆ ಯಾವ ರೀತಿ ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರ ಉರುಳಿಸಲು ಮೋದಿ, ಶಾ ತಂತ್ರ ಹೆಣೆದಿದ್ದಾರೆ’ ಎಂದಿರುವ ಸಿದ್ದರಾಮಯ್ಯ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು