ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಪೆಟ್ಟುಕೊಟ್ಟ ‘ಮೈತ್ರಿ’

ಮೈತ್ರಿ ಎಷ್ಟು ದಿನ ಮುಂದುವರಿಸುತ್ತೀರಿ: ರಾಹುಲ್‌ಗೆ ಸಿದ್ದರಾಮಯ್ಯ ಪ್ರಶ್ನೆ
Last Updated 19 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಸರ್ಕಾರ ರಚಿಸಿದ್ದರಿಂದ ಸಂಘಟನಾತ್ಮಕವಾಗಿ ಕಾಂಗ್ರೆಸ್‌ಗೆ ಬಲವಾದ ಪೆಟ್ಟು ಬಿದ್ದಿದ್ದು, ಮೈತ್ರಿಯನ್ನು ಎಷ್ಟು ದಿನ ಮುಂದುವರಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ತಮ್ಮ ನಾಯಕನನ್ನು ಬುಧವಾರ ಭೇಟಿ ಮಾಡಿದ ಸಿದ್ದರಾಮಯ್ಯ, ಸುಮಾರು 40 ನಿಮಿಷಗಳ ಕಾಲ ರಾಜ್ಯದ ವಿದ್ಯಮಾನ, ಸರ್ಕಾರದ ಕಾರ್ಯವೈಖರಿ, ಪಕ್ಷಕ್ಕೆ ಆದ ಹೊಡೆತಗಳ ಬಗ್ಗೆ ಸಾದ್ಯಂತವಾಗಿ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಸೋಲಿನ ಬಳಿಕ ರಾಹುಲ್ ಅವರನ್ನು ಭೇಟಿ ಮಾಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ದೂರು ಹೇಳಿದ್ದರು. ಅವೆಲ್ಲಕ್ಕೂ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ ಕೇವಲ 1 ಸ್ಥಾನ ಪಡೆಯಲು ಮೈತ್ರಿಯೇ ಕಾರಣ. ನಾವು ಮಿತ್ರ ಪಕ್ಷವಾಗಿದ್ದರೂ ನಮ್ಮದೇನೂ ನಡೆಯುತ್ತಿಲ್ಲ ಎಂದು ಅಹವಾಲು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಳ್ಳಲಾಯಿತು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ಇತ್ತು. ಜೆಡಿಎಸ್‌ ವರಿಷ್ಠರ ಜತೆ ಮಾಡಿಕೊಂಡ ಒಪ್ಪಂದದಂತೆ ಮೈತ್ರಿ ಮುಂದುವರಿಸುವುದು ಅನಿವಾರ್ಯ. ಸಂಭಾಳಿಸಿಕೊಂಡು ಹೋಗಿ’ ಎಂದು ರಾಹುಲ್ ಅವರು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಗೆಲುವಿಗೆ ಸಹಕಾರಿ ಆಗಬಹುದಾಗಿದ್ದ ಕೆಲ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು; ಮಂಡ್ಯದಲ್ಲಿ ಜೆಡಿಎಸ್ ಬೆಂಬಲಿಸುವ ಬದಲು ಸುಮಲತಾ ಅವರಿಗೆ ಪಕ್ಷದಿಂದ ಟಿಕೆಟ್ ನೀಡಬೇಕಾಗಿದ್ದುದು, ತುಮಕೂರಿನಲ್ಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೊಡದಿರುವುದು, ಕೊನೆ ಗಳಿಗೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲು ಎಚ್.ಡಿ.ದೇವೇಗೌಡ ನಿರ್ಧರಿಸಿದ್ದು ಇಂತಹ ಸಾಕಷ್ಟು ಗೊಂದಲಗಳಿಂದಾಗಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು ಎಂದು ಗೊತ್ತಾಗಿದೆ.

ಗೆಲ್ಲುವ ಸಾಮರ್ಥ್ಯ ಇಲ್ಲದ ಕ್ಷೇತ್ರಗಳನ್ನೂ ಜೆಡಿಎಸ್ ಪಡೆದುಕೊಂಡು, ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸದೆ ಹಿಂದೆ ಸರಿದರು. ಇದರಿಂದಾಗಿ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪರದಾಡಬೇಕಾಯಿತು.ಜೆಡಿಎಸ್ ಕುಟುಂಬ ರಾಜಕಾರಣದ ಪರಿಣಾಮ ನಮ್ಮ ಅಭ್ಯರ್ಥಿಗಳ ಮೇಲೂ ಆಗಿದೆ. ಈ ಅಪವಾದವನ್ನು ಎದುರಿಸುವುದು ಕಷ್ಟವಾಯಿತು ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT