ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧ ಗುರು ಅಂತ್ಯಕ್ರಿಯೆ

Last Updated 16 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಮಂಡ್ಯ: ಕಾಶ್ಮೀರದಲ್ಲಿ ಹುತಾತ್ಮರಾದ ಗುಡಿಗೆರೆ ಗ್ರಾಮದ ಯೋಧ ಎಚ್.ಗುರು ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ನೆರವೇರಿಸಲಾಯಿತು.

ಮೆಳ್ಳಹಳ್ಳಿ ಗ್ರಾಮದ ಹೊರವಲಯದ ಮದ್ದೂರು- ಮಳವಳ್ಳಿ ಮುಖ್ಯರಸ್ತೆ ಬದಿಯಲ್ಲಿ 10 ಗುಂಟೆ ಸ್ಥಳ ಗುರುತಿಸಲಾಗಿತ್ತು. ಮಡಿವಾಳ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಲಾಯಿತು.

ಸಂಜೆ 7.45ಕ್ಕೆ ಮೃತದೇಹ ಗುಡಿಗೆರೆ ಗ್ರಾಮ ತಲುಪಿತು. ಮೃತದೇಹ ಛಿದ್ರವಾಗಿದ್ದ ಕಾರಣ ಕುಟುಂಬದ ಸದಸ್ಯರಿಗೂ ಮುಖದರ್ಶನ ಸಿಗಲಿಲ್ಲ. ಕುಟುಂಬ ಸದಸ್ಯರು ಮುಚ್ಚಿದ ಶವಪೆಟ್ಟಿಗೆಗೆ ಪೂಜೆ ಸಲ್ಲಿಸಿದರು. ನಂತರ ಅಂತ್ಯಸಂಸ್ಕಾರ ಸ್ಥಳಕ್ಕೆ ಕೊಂಡೊಯ್ಯಲಾಯಿತು.

ಚಿತ್ರದುರ್ಗ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಬಾಗಲಕೋಟೆ ಭೋವಿ ಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ವಿಧಿವಿಧಾನ ಪೂರೈಸಿದರು. ಬಸವಣ್ಣನ ವಚನ ಪಠಿಸಿದರು.

ಸಿಆರ್‌ಪಿಎಫ್ ಯೋಧರು, ರಾಜ್ಯ ಮೀಸಲು ಪಡೆ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸೂಚಿಸಿದರು. ಅಂತಿಮವಾಗಿ ಗುರು ಪತ್ನಿ ಕಲಾವತಿ, ತಂದೆ ಹೊನ್ನಯ್ಯ, ತಾಯಿ ಚಿಕ್ಕಹೊಳ್ಳಮ್ಮ, ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶವಪಟ್ಟಿಗೆಗೆ ಹೊದಿಸಿದ್ದ ತ್ರಿವರ್ಣಧ್ವಜವನ್ನು ಗುರು ಪತ್ನಿಗೆ ನೀಡಿದರು. ಜೊತೆಗೆ ಸ್ಥಳದಲ್ಲೇ ₹ 25 ಲಕ್ಷದ ಪರಿಹಾರ ಚೆಕ್ ವಿತರಿಸಿದರು. ಗುರು ತಮ್ಮಂದಿರಾದ ಆನಂದ, ಮಧು ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು.

ಸಾವಿರಾರು ಜನರು ಮೃತದೇಹದತ್ತ ಓಡಿ ಬಂದ ಕಾರಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಪೊಲೀಸರ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ಅಗ್ನಿ ಸ್ಪರ್ಶಕ್ಕೆ ಮುನ್ನವೇ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ತೆರಳಿದ್ದರು.

ಕುಟುಂಬಕ್ಕೆ ₹25 ಲಕ್ಷ, ಪತ್ನಿಗೆ ಸರ್ಕಾರಿ ನೌಕರಿ

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಗುರು ಅವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಹಾಗೂ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ನೌಕರಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗುರು ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.

ಹಾರಿದ ಗುಂಡು: ಆತಂಕ

ರಾಜ್ಯ ಮೀಸಲು ಪಡೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸುವಾಗ ತಪ್ಪಾಗಿ ಗುಂಡು ಹಾರಿದ ಪರಿಣಾಮ ಸ್ಥಳದಲ್ಲಿ ಆತಂಕದ ಸ್ಥಿತಿ ಉಂಟಾಗಿತ್ತು.

ಎರಡನೇ ಸುತ್ತಿನ ಗುಂಡು ಹಾರಿಸುವಾಗ ಮಿಸ್ ಫೈರ್ ಆಯಿತು. ತಪ್ಪಾಗಿ ಗುಂಡು ಹಾರಿಸಿದ ಸಿಬ್ಬಂದಿ ಮುಂದೆ ನಿಂತಿದ್ದ ಪೊಲೀಸ್ ಅಧಿಕಾರಿಗಳು ಬೆದರಿದರು. ಸಿಆರ್‌ಪಿಎಫ್ ಯೋಧರು ಗುಂಡು ಹಾರಿಸುವಾಗಲೂ ಯೋಧರೊಬ್ಬರ ಗುಂಡಿನ ಪೆಟ್ಟಿಗೆ ಕಳಚಿ ಕೆಳಕ್ಕೆ ಬಿತ್ತು. ಅವರು ಗಾಳಿಯಲ್ಲಿ ಗುಂಡು ಹಾರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT