ಶನಿವಾರ, ಏಪ್ರಿಲ್ 17, 2021
30 °C

ಉಗ್ರರ ವಿರುದ್ಧ ಕಾರ್ಯಾಚರಣೆ: ಗಾಯಗೊಂಡಿದ್ದ ಯೋಧ ಮಹೇಶ್ ವಿಶ್ರಾಂತಿಗಾಗಿ ಮನೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ: ಜಮ್ಮು–ಕಾಶ್ಮೀರದ ಶೋಪಿಯಾನ್‍ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಯೋಧ ಎಚ್.ಎನ್‌.ಮಹೇಶ್ ಅವರು ಚಿಕಿತ್ಸೆಯ ಬಳಿಕ ವಿಶ್ರಾಂತಿಗಾಗಿ ಸಹೋದ್ಯೋಗಿ ಪ್ರವೀಣ್ ಅವರೊಂದಿಗೆ ಪೊನ್ನಂಪೇಟೆಯಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದಾರೆ.

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಮಹೇಶ್ ಮೇ 15ರಂದು ಕರ್ತವ್ಯಕ್ಕೆ ಮರಳಿದ್ದರು. ಮೇ 29ಕ್ಕೆ ಶೋಪಿಯಾನ್‍ನ ಕಟ್ಟಡವೊಂದರಲ್ಲಿ ಅಡಗಿದ್ದ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಉಗ್ರರು ಹಾರಿಸಿದ ಗುಂಡು ಮಹೇಶ್ ಅವರ ಬಲದವಡೆಯ ಮೂಲಕ ಮುಖವನ್ನು ಸೀಳಿಕೊಂಡು ಮೂಗಿನ ಭಾಗದಿಂದ ಹೊರಬಂದಿತ್ತು. ಮುಖದ ಭಾಗಕ್ಕೆ ಸುಮಾರು 50 ಹೊಲಿಗೆ ಹಾಕುವ ಮೂಲಕ ಅವರಿಗೆ ಜಮ್ಮುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಂಡೀಗಢ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳ ಕಾಲ ಕೋಮಾದಲ್ಲಿದ್ದ ಮಹೇಶ್ ಅವರು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ನಂತರ ಮುಖದ ಭಾಗಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹಿರಿಯ ಅಧಿಕಾರಿಗಳ ಸಲಹೆಯಂತೆ ಕುಟುಂಬದವರೊಡನೆ ಸಮಯ ಕಳೆಯಲು ರಜೆಯ ಮೇಲೆ ಪೊನ್ನಂಪೇಟೆಯಲ್ಲಿರುವ ಮನೆಗೆ ಆಗಮಿಸಿದ್ದಾರೆ. 

ತಲೆಗೆ ಗುಂಡೇಟು ಬಿದ್ದ ಮೇಲೂ ಉಗ್ರರ ಮುಂದೆ ಕುಸಿದು ಬೀಳಬಾರದು. ಯೋಧನ ಸಾವು ಉಗ್ರರಿಗೆ ಸಂತೋಷ ತರಬಾರದು ಎಂಬ ಧೃಢ ನಿರ್ಧಾರದೊಂದಿಗೆ ನಿರಂತರವಾಗಿ ಉಗ್ರರ ಮೇಲೆ ಗುಂಡು ಹಾರಿಸುವ ಮೂಲಕ ಅವರನ್ನು ಸದೆಬಡಿಯುವ ಪ್ರಯತ್ನ ಮಾಡಿದೆ. ಕಾರ್ಯಾಚರಣೆ ಮುಂದುವರೆಸುವ ಮನಸ್ಸಿದ್ದರೂ ದೇಹ ಸ್ಪಂದಿಸುತ್ತಿರಲಿಲ್ಲ. ತನ್ನ ಜೊತೆಗಿದ್ದ ಯೋಧರು ತನ್ನನ್ನು ಗುಂಡೇಟು ಬಿದ್ದ ಸ್ಥಳದಿಂದ ದೂರ ಕರೆತಂದು ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ಯೋಧ ಮಹೇಶ್ ಕಾರ್ಯಾಚರಣೆಯನ್ನು ನೆನಪಿಸಿಕೊಂಡರು. 

ಗುಂಡೇಟು ಬಿದ್ದ ತಕ್ಷಣ ಅವರ ಅರಿವಿಗೆ ಬಂದಿರಲ್ಲಿಲ್ಲ. ಕೆಲ ಕ್ಷಣದ ನಂತರ ಒಂದು ಕಣ್ಣು ಕಾಣಿಸದಂತಾಗಿ ಹೃದಯ ಬಡಿತದಲ್ಲಿ ಏರುಪೇರಾದ ಅನುಭವವಾಗಿ ಮುಖವನ್ನು ಮುಟ್ಟಿನೋಡಿದಾಗ ಅವರಿಗೆ ಗುಂಡೇಟು ಬಿದ್ದಿರುವುದು ಗೊತ್ತಾಗಿತ್ತು.

ಗುಂಡೇಟು ತಿಂದ ಯೋಧ ಮಹೇಶ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮುಖದ ಭಾಗಕ್ಕೆ ತೀವ್ರವಾಗಿ ಗಾಯವಾಗಿರುವುದನ್ನು ಲೆಕ್ಕಿಸದೆ ಘಟನಾ ಸ್ಥಳದಿಂದ 200 ಮೀಟರ್‌ ನಡೆದುಕೊಂಡು ಹೋಗಿ ಸಹೋದ್ಯೋಗಿಗಳ ಸಹಾಯದಿಂದ ಆಂಬ್ಯುಲೆನ್ಸ್ ಏರಿದ್ದರು.

ಸೇನೆಯಲ್ಲಿ ಇನ್ನೂ 8 ವರ್ಷಗಳ ಸೇವಾವಧಿ ಬಾಕಿಯಿದೆ. ಚಿಕಿತ್ಸೆ ನಂತರ ಮುಂದಿನ 3 ವರ್ಷಗಳ ಕಾಲ ಬಾಂಬ್ ನಿಷ್ಕ್ರಿಯ ದಳದಲ್ಲಿ ಸೇವೆ ಸಲ್ಲಿಸುವ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಮಾಡುವ ಆಸೆಯಿದೆ ಎಂದು ಯೋಧ ಮಹೇಶ್‌ ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು