ಶುಕ್ರವಾರ, ಆಗಸ್ಟ್ 7, 2020
28 °C

‘ಸೋಲಿಗ– ಇಂಗ್ಲಿಷ್‌’ ನಿಘಂಟು ಸಿದ್ಧ: ಸಂಶೋಧಕರೊಬ್ಬರ 12 ವರ್ಷದ ಶ್ರಮ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ವಾಸಿಸುತ್ತಿರುವ ಸೋಲಿಗರು ಬಳಸುವ ಭಾಷೆಗೆ ಸಂಬಂಧಿಸಿದ ನಿಘಂಟು ಸದ್ದಿಲ್ಲದೇ ಸಿದ್ಧವಾಗಿದೆ. ಇದರ ಹಿಂದೆ ವಿದೇಶಿ ಸಂಶೋಧಕರೊಬ್ಬರ ಶ್ರಮವಿದೆ.

ಬೆಟ್ಟದ ಸುತ್ತಮುತ್ತಲಿನ ಪೋಡುಗಳಲ್ಲಿ ವಾಸಿಸುತ್ತಿರುವ ಆರು ಕುಲ ಸೋಲಿಗರು ಮಾತ್ರ ಬಳಸುವ ಪದಗಳನ್ನು ಮ್ಯಾನ್ಮಾರ್‌ನ ಸಂಶೋಧಕ ಡಾ.ಆಂಗ್‌ ಸಿ ಎಂಬುವವರು ಸಂಗ್ರಹಿಸಿ, ಈ ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ.  

455 ಪುಟಗಳ ಈ ನಿಘಂಟಿನಲ್ಲಿ 1,500ಕ್ಕೂ ಹೆಚ್ಚು ಸೋಲಿಗ ಪದಗಳಿವೆ. ಆ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದ್ದು, ಅದಕ್ಕೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಲಾಗಿದೆ. ಅಪರೂಪದ ಗಿಡ–ಮರಗಳು, ಪ್ರಾಣಿಗಳ ಚಿತ್ರಗಳೂ ಇದರಲ್ಲಿವೆ.

ಆಂಗ್‌ ಸಿ ಅವರೇ ನಿಘಂಟಿನ 150 ಪ್ರತಿಗಳನ್ನು (ಬೆಲೆ ₹1,500) ಮುದ್ರಿಸಿದ್ದು, ಮಾರಾಟದ ಜವಾಬ್ದಾರಿಯನ್ನು ಸೋಲಿಗರ ಮುಖಂಡರಿಗೆ ನೀಡಿದ್ದಾರೆ. ಬಂದ ಲಾಭವನ್ನು ಸೋಲಿಗರ ಅಭಿವೃದ್ಧಿಗೆ ಬಳಸಲು ಸೂಚಿಸಿದ್ದಾರೆ. 

12 ವರ್ಷಗಳ ಶ್ರಮ: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿರುವ ಆಂಗ್‌ ಸಿ, 2012ರಲ್ಲಿ ಸೋಲಿಗರ ಜೀವನ ಮತ್ತು ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿ ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್‌.ಡಿ ಪಡೆದಿದ್ದಾರೆ. ಅವರು 2008ರಿಂದ ಸೋಲಿಗರು ಬಳಸುವ ಪದಗಳನ್ನು ಸಂಗ್ರಹಿಸಲು ತೊಡಗಿದ್ದಾಗಿ ಹೇಳಿಕೊಂಡಿದ್ದಾರೆ. 

ಇದಕ್ಕಾಗಿ, ಬಿಳಿಗಿರಿರಂಗನಬೆಟ್ಟದ ಅಶೋಕ ಟ್ರಸ್ಟ್‌ ಫಾರ್‌ ಇಕಾಲಜಿ ಆ್ಯಂಡ್‌ ಎನ್‌ ಎನ್ವಿರಾನ್‌ಮೆಂಟ್‌ (ಏಟ್ರೀ), ಸೋಲಿಗ ಮುಖಂಡರು ಹಾಗೂ ಸಂಶೋಧಕರ ನೆರವು ಪಡೆದಿದ್ದಾರೆ.

‘148 ಪೋಡುಗಳ ಪೈಕಿ, 55 ಪೋಡುಗಳ ಆರು ಕುಲ ಸೋಲಿಗರು ಮಾತ್ರ ಈ ಭಾಷೆ ಮಾತನಾಡುತ್ತಾರೆ. ಈ ನಿಘಂಟು ಸೋಲಿಗ ಭಾಷೆ, ಸಂಸ್ಕೃತಿ ರಕ್ಷಣೆ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಅನುಕೂಲ. ಈ ಭಾಷೆಯ ಹೆಚ್ಚಿನ ಅಧ್ಯಯನಕ್ಕೆ, ಸೋಲಿಗರ ಮಕ್ಕಳು ಓದುವ ಶಾಲೆಯ ಶಿಕ್ಷಕರಿಗೆ ಇದು ಸಹಕಾರಿ’ ಎನ್ನುತ್ತಾರೆ ‘ಏಟ್ರೀ’ ಸಮಾಜ ವಿಜ್ಞಾನಿ ಡಾ.ಸಿ.ಮಾದೇಗೌಡ.

*
ಸದ್ಯ ಸೋಲಿಗ–ಇಂಗ್ಲಿಷ್‌ ಶಬ್ದಕೋಶ ಸಿದ್ಧವಿದ್ದು, ಎರಡನೇ ಆವೃತ್ತಿಯಲ್ಲಿ ‘ಸೋಲಿಗ–ಕನ್ನಡ–ಇಂಗ್ಲಿಷ್‌’ ನಿಘಂಟು ತಯಾರಾಗಲಿದೆ. -ಡಾ.ಸಿ.ಮಾದೇಗೌಡ, ಸೋಲಿಗರ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು