ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವಕ್ಕೆ ಬದ್ಧ, ಸಂವಿಧಾನವೇ ಸರ್ವಸ್ವ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಸಂಘ ಪರಿವಾರ ಪ್ರಭಾವದಿಂದ ಹೊರಬನ್ನಿ: ಕಾಂಗ್ರೆಸ್‌ ತಾಕೀತು
Last Updated 31 ಜುಲೈ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಸ್ವಯಂ ಸೇವಕ, ಹಿಂದುತ್ವದ ಮೂಲ ನಂಬಿಕೆಯಾಗಿರುವ ಸಂಘಟನೆ ಹಿನ್ನೆಲೆಯಿಂದ ಬಂದವನು. ಆದರೆ, ಸಂವಿಧಾನವನ್ನು ಭಗವದ್ಗೀತೆ ಎಂದೇ ನಂಬಿದ್ದೇನೆ. ಅದರ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವೆ’.

ವಿಧಾನಸಭೆಯ 22ನೇ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ ಸದಸ್ಯರ ಆತಂಕದ ಮಾತುಗಳಿಗೆ ಮೇಲಿನಂತೆ ಉತ್ತರಿಸಿದರು.

‘ಮನುಸ್ಮೃತಿ ಪ್ರತಿಪಾದಿಸುವ ಮತ್ತು ಅಂಬೇಡ್ಕರ್‌ ವಾದದ ವಿರುದ್ಧದ ದಿಕ್ಕಿನಲ್ಲಿರುವ ವಿಚಾರಧಾರೆಯ ಹಿನ್ನೆಲೆಯಿಂದ ಬಂದಿದ್ದೀರಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾದ ಗೋಳ್ವಲ್ಕರ್‌ ಮತ್ತು ಹೆಡಗೇವಾರ್‌ ಅವರು ಹಿಂದುತ್ವದ ಆಧಾರದಲ್ಲಿ ಅಖಂಡ ಭಾರತ ನಿರ್ಮಿಸುವ ಪರಿಕಲ್ಪನೆ ಹೊಂದಿದವರು. ಆದರೆ, ಅಂಬೇಡ್ಕರ್‌ ಅವರು ಸಂವಿಧಾನದ ಆಧಾರದಲ್ಲಿ ಅಖಂಡ ಭಾರತವನ್ನು ಬೆಸೆಯುವ ಕನಸು ಕಂಡವರು. ನಿಮ್ಮ ಪರಿವಾರದ ಪ್ರಭಾವದಿಂದ ಹೊರಬಂದು, ಹೊಸ ವ್ಯಕ್ತಿತ್ವದ ಮೂಲಕ ಕಾರ್ಯ ನಿರ್ವಹಿಸಬೇಕು. ಸಂವಿಧಾನಕ್ಕೆ ನಿಷ್ಠೆ ಇರಬೇಕು’ ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

‘ನೀವೊಬ್ಬ ಸಭ್ಯ ಮತ್ತು ಸಜ್ಜನಿಕೆಯ ವ್ಯಕ್ತಿ. ಈವರೆಗೆ ಸಾಕಷ್ಟು ಸ್ವಯಂ ಸೇವಕರನ್ನು ನೋಡಿದ್ದೇನೆ. ನಾನು ಆ ವಿಚಾರಧಾರೆಯನ್ನು ಒಪ್ಪದೇ ಇದ್ದರೂ ಸ್ವಯಂ ಸೇವಕರ ಶಿಸ್ತು, ಸರಳ ಜೀವನ, ಪ್ರಾಮಾಣಿಕತೆಯನ್ನು ಬಲ್ಲೆ. ಕಮ್ಯುನಿಸ್ಟ್‌ ಪಕ್ಷದಲ್ಲೂ ಇದೇ ರೀತಿ ಪ್ರಾಮಾಣಿಕರೂ, ಸರಳ ವ್ಯಕ್ತಿತ್ವದವರು ಇದ್ದಾರೆ. ಎರಡೂ ವಿಚಾರಗಳು ತದ್ವಿರುದ್ಧವಾದರೂ ಸರಳತೆ, ಪ್ರಾಮಾಣಿಕತೆ ಪಾಲಿಸುವುದರಲ್ಲಿ ಸಾಮ್ಯತೆ ಕಾಣಬಹುದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ‘ಎಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನನ್ನು ಅಕ್ಷರಶಃ ಪಾಲಿಸಬೇಕು. ನಮ್ಮ ದೇಶಕ್ಕೆ ಸಂವಿಧಾನವೇ ಇಲ್ಲದಿದ್ದರೆ, ಈಗ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ. ಪ್ರಧಾನಿ ಮೋದಿ ಸೇರಿದಂತೆ ನಾವೆಲ್ಲರೂ ಈ ಹಂತವನ್ನು ತಲುಪಲು ಸಾಧ್ಯವಾಗಿರುವುದು ಸಂವಿಧಾನದ ಕಾರಣದಿಂದಲೇ’ ಎಂದು ಪ್ರತಿಪಾದಿಸಿದರು.

‘ನಮ್ಮ ಯಾವುದೇ ವಿಚಾರಗಳು, ನಂಬಿಕೆಗಳು ರಾಷ್ಟ್ರಕ್ಕೆ ಪೂರಕವಾಗಿರಬೇಕು. ಹಿಂದುತ್ವ ಎಂಬುದು ಜೀವನ ಪದ್ಧತಿ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ರಾಷ್ಟ್ರೀಯತೆ ಪ್ರತಿನಿಧಿಸುವ ಸಂಘಟನೆಗೆ ಸೇರಿದವನು. ಯಾರಲ್ಲೂ ಭೇದ– ಭಾವ ಎಣಿಸುವ ವಿಚಾರಧಾರೆ ನಮ್ಮದಲ್ಲ. ಇದಕ್ಕೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ’ ಎಂದರು.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಸರಳ ಸಜ್ಜನಿಕೆಯವರಾದ ನೀವು ಹೋರಾಟದ ಪರಂಪರೆಯಿಂದ ಬಂದಿದ್ದೀರಿ. ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಆರ್‌ಎಸ್‌ಎಸ್‌, ಎಬಿಬಿಪಿ, ಬಿಜೆಪಿಯೊಂದಿಗೆ ಸಂಪರ್ಕ ಕಡಿತ ಮಾಡಿದ್ದೀರಿ ಎಂದು ಭಾವಿಸಿದ್ದೇನೆ. ಪಕ್ಷಾತೀತವಾಗಿರಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣಬೇಕು’ ಎಂದರು.

ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ‘ಕಡಿದರೂ ಹಿಂದುತ್ವ ಬಿಡುವವರಲ್ಲ. ಹಿಂದುತ್ವ ಎನ್ನುವುದು ಜೀವನ ವಿಧಾನ. ಕೆಲವರು ಹಿಂದುತ್ವದ ಬಗ್ಗೆ ಗೊಂದಲವನ್ನು ಮೂಡಿಸುತ್ತಲೇ ಬಂದಿದ್ದಾರೆ’ ಎಂದು ಹೇಳಿದರು.

ಶಾಸಕರಾದ ಆರ್‌.ವಿ.ದೇಶಪಾಂಡೆ, ಜಗದೀಶ ಶೆಟ್ಟರ್‌, ಕೃಷ್ಣ ಬೈರೇಗೌಡ, ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿದರು.

ಹೆಗಡೆ ಅಪ್ಪಟ ಮಣ್ಣಿನ ಮಗ

‘ವಿಶ್ವೇಶ್ವರ ಹೆಗಡೆ ಅಪ್ಪಟ ಮಣ್ಣಿನ ಮಗ. ಅವರು ಮನೆಯಲ್ಲಿದ್ದಾಗ ಸಾಮಾನ್ಯ ರೈತರಾಗಿ ಕೆಲಸ ಮಾಡುವುದನ್ನು ನೋಡಿದ್ದೇನೆ’ ಎಂದು ಬಿಜೆಪಿಯ ಗೋವಿಂದ ಕಾರಜೋಳ ಹೇಳಿದರು.

‘ಒಮ್ಮೆ ಅವರ ಊರಿಗೆ ಹೋದಾಗ ಬೆಳಗ್ಗಿನ ಉಪಾಹಾರಕ್ಕೆ ಕರೆದಿದ್ದರು. ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪ ತಂದಿಟ್ಟರು. ಅದು ಉಪ್ಪಿಟ್ಟು ಇರಬೇಕು ಎಂದು ಎರಡು ಸೌಟು ಬಾಳೆ ಎಲೆಗೆ ಹಾಕಿಕೊಂಡೆ. ಅದನ್ನು ಬಾಯಿಗೆ ಹಾಕಿಕೊಂಡರೆ ತುಪ್ಪ. ದೋಸೆ ಮತ್ತು ಜೋನಿ ಬೆಲ್ಲವನ್ನೂ ತಂದು ಬಡಿಸಿದರು. ಆ ಬಳಿಕ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ತಾವು ಸಾಕಿದ್ದ ಹಸುಗಳನ್ನು ತೋರಿಸಿದರು’ ಎಂದು ಅವರು ನೆನಪಿಸಿಕೊಂಡರು.

ಕಾಗೇರಿ ಅವಿರೋಧ ಆಯ್ಕೆ

ವಿಶ್ವೇಶ್ವರ ಹೆಗಡೆ ಕಾಗೇರಿ 22 ನೇ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕು ಎಂದು ಪ್ರಸ್ತಾವನೆಯನ್ನು ಸೂಚಿಸಿದರು. ಶಾಸಕ ಬಸವರಾಜ ಬೊಮ್ಮಾಯಿ ಅನುಮೋದಿಸಿದರು. ಸಭಾಧ್ಯಕ್ಷರ ಆಯ್ಕೆಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಬಳಿಕ ನೂತನ ಸಭಾಧ್ಯಕ್ಷ ಕಾಗೇರಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಾಂಗ್ರೆಸ್‌ನ ಹಿರಿಯ ಶಾಸಕ ಸಿದ್ದರಾಮಯ್ಯ ಸಭಾಧ್ಯಕ್ಷ ಪೀಠಕ್ಕೆ ಕರೆ ತಂದರು.

* ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸುವ ವಿಶ್ವಾಸವಿದೆ

ಬಿ.ಎಸ್‌.ಯಡಿಯೂರಪ್ಪ,ಮುಖ್ಯಮಂತ್ರಿ

*ಬುದ್ಧಿವಂತ ಭಾವಜೀವಿಯಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಧ್ವನಿಗೆ ಇಲ್ಲಿ ಅವಕಾಶ ಸಿಗಬೇಕು

ಎನ್‌.ಮಹೇಶ್‌,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT