ಬುಧವಾರ, ಜನವರಿ 29, 2020
30 °C
ಯಡಿಯೂರಪ್ಪ ಭೇಟಿಮಾಡಿದ ಉಮೇಶ್ ಕತ್ತಿ

ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು ಮೌನ, ದೆಹಲಿಯತ್ತ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.

ಶ್ರೀರಾಮುಲು ಅವರು ಸಚಿವ ಸಂಪುಟ ಸಭೆ, ಯಡಿಯೂರಪ್ಪ ಭಾಗವಹಿಸಿದ್ದ ನರ್ಸ್‌ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿದಿದ್ದರು. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲೂ ಪಾಲ್ಗೊಂಡಿರಲಿಲ್ಲ.

ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಹೇಳಿಕೊಂಡು ಬಂದಿದ್ದರು. ವಾಲ್ಮೀಕಿ ಸಮುದಾಯದಿಂದಲೂ ಒತ್ತಡ ತೀವ್ರವಾಗಿತ್ತು. ಆದರೆ ಉಪಚುನಾವಣೆ ನಂತರ ಅಂತಹ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂಬ ಕಾರಣಕ್ಕೆ ಮೌನಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ವಾಲ್ಮೀಕಿ ಸಮುದಾಯದ ರಮೇಶ್ ಜಾರಕಿಹೊಳಿ ಶಾಸಕರಾಗಿ ಆಯ್ಕೆ ಆಗಿದ್ದು, ಅವರಿಗೂ ಉಪಮುಖ್ಯಮಂತ್ರಿ ಸ್ಥಾನದ ಆಸೆತೋರಿಸಲಾಗಿದೆ.

‘ನನ್ನದೇ ಸಮುದಾಯದ ರಮೇಶ್‌ಗೆ ಅವಕಾಶ ನೀಡಿದರೆ, ನಾನು ಸಚಿವನಾಗಿಯೇ ಮುಂದುವರಿಯಬೇಕಾಗುತ್ತದೆ’ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದಕ್ಕೆ ಹೋಗಿದ್ದು, ಮುಂದಿನ ದಿನಗಳಲ್ಲಿ ಯಾರನ್ನೂ ಉಪಮುಖ್ಯಮಂತ್ರಿ ಮಾಡದೆ,  ಸಚಿವರನ್ನಾಗಿ ಮುಂದುವರಿಸುವ ಸಾಧ್ಯತೆಗಳಿವೆ ಎಂಬಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

ದೆಹಲಿಗೆ ಸವದಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಪಕ್ಷದ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸವದಿ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆಗಳು ಪಕ್ಷದ ಆಂತರಿಕ ವಲಯದಲ್ಲಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

22ರ ನಂತರ ಸಂಪುಟ ವಿಸ್ತರಣೆ

‘ಡಿ. 22ರ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು. ಈಗಾಗಲೇ ಮಾತು ಕೊಟ್ಟಂತೆ ಸರ್ಕಾರದ ಬೆಂಬಲಕ್ಕೆ ನಿಂತ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆಗೆ ಮಾತನಾ
ಡಿದ್ದು, ಅವರು ಜಾರ್ಖಂಡ್‌ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಒಂದು ವಾರ ಬಿಟ್ಟು ದೆಹಲಿಗೆ ಹೋಗಲಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು