ಭಾನುವಾರ, ಸೆಪ್ಟೆಂಬರ್ 20, 2020
23 °C

ನಾಲೆಗೆ ಕಾರ್ಖಾನೆ ತ್ಯಾಜ್ಯ: ಮೀನುಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ವಿರಿಜಾ ನಾಲೆಗೆ ರಾಸಾಯನಿಕ ಮಿಶ್ರಿತ ಕೊಳಚೆ ನೀರು ಸೇರುತ್ತಿದ್ದು, ನಾಲೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ.

ತಾಲ್ಲೂಕಿನ ಕಾರೇಕುರ ಗ್ರಾಮದಿಂದ ಬೊಮ್ಮೂರು ಅಗ್ರಹಾರ ತಿರುವಿನವರೆಗೂ ಮೀನುಗಳು ನೀರಿನಲ್ಲಿ ತೇಲುತ್ತಿವೆ. ಮಳ್ಳಿ ಮೀನು, ಕೊರಮ, ಸಾಮಾನ್ಯ ಗೆಂಡೆ ಜಾತಿಯ ಮೀನುಗಳು ಸತ್ತಿದ್ದು, ಇವು ಕೊಕ್ಕರೆ, ನೀರುಕಾಗೆಗೆ ಆಹಾರವಾಗುತ್ತಿವೆ.

ಮೂರು ದಿನಗಳಿಂದ ಮೀನುಗಳು ನಾಲೆಯಲ್ಲಿ ತೇಲುತ್ತಿವೆ ಎಂದು ರೈತರು ಹೇಳಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸತ್ತಿರುವುದರಿಂದ ಮೂರು ದಿನಗಳಿಂದ ನೀರು ದುರ್ವಾಸನೆ ಬೀರುತ್ತಿದೆ. ನಾಲೆಗೆ ಇಳಿದರೆ ತುರಿಕೆ ಉಂಟಾಗುತ್ತಿದೆ. ಹೀಗಾಗಿ, ಈ ನೀರನ್ನು ಜಾನುವಾರುಗಳಿಗೆ ಕುಡಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಕೈಗಾರಿಕೆಗಳ ತ್ಯಾಜ್ಯ: ಮೈಸೂರಿನ ಹೆಬ್ಬಾಳ ಮತ್ತು ಬೆಳಗೊಳ ಕೈಗಾರಿಕಾ ಪ್ರದೇಶದ ರಾಸಾಯನಿಕ ತ್ಯಾಜ್ಯ ವಿರಿಜಾ ನಾಲೆಗೆ ಸೇರುತ್ತಿದೆ. ಈ ತ್ಯಾಜ್ಯದಲ್ಲಿ ಸೀಸ, ಕ್ಯಾಡ್ಮಿಯಂ ಇತರ ಅಪಾಯಕಾರಿ ರಾಸಾಯನಿಕಗಳಿದ್ದು, ಜಲಚರಗಳಿಗೆ ಮಾರಕವಾಗಿದೆ. ಕೃಷಿ ಜಮೀನಿಗೂ ಇದೇ ನೀರು ಹರಿಯುತ್ತಿದ್ದು, ಬೆಳೆಗಳಿಗೂ ಅಪಾಯವಾಗುವ ಸಾಧ್ಯತೆ ಇದೆ. ಈ ತ್ಯಾಜ್ಯವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಪತ್ರ ಬರೆದಿದ್ದರೂ ಕ್ರಮ ವಹಿಸಿಲ್ಲ. ಹಾಗಾಗಿ ಮುಡಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ವಿರಿಜಾ ನಾಲೆಗೆ ಅನೇಕ ವರ್ಷಗಳಿಂದ ಮೈಸೂರಿನ ಕೊಳಚೆ ನೀರು ಹರಿಯುತ್ತಿದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ‘ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮೇಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 **

ಕೆಸರೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ದುರಸ್ತಿಯಲ್ಲಿದೆ. ಹೀಗಾಗಿ, ಸಮಸ್ಯೆ ಉಂಟಾಗಿರಬಹುದು. ಅಷ್ಟಕ್ಕೂ ಇದು ಪಾಲಿಕೆ, ಕೆಐಡಿಬಿಎ ವ್ಯಾಪ್ತಿಗೆ ಬರುತ್ತದೆ
– ಸುರೇಶ್‌ ಬಾಬು, ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು