ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿಲ್ಲ: ಮತ್ತೆ ಮೋದಿ, ಶಾ ಹೊಗಳಿದ ಜಿಟಿಡಿ

Last Updated 2 ಜುಲೈ 2019, 20:15 IST
ಅಕ್ಷರ ಗಾತ್ರ

ಮೈಸೂರು: ‘ಸಮ್ಮಿಶ್ರ ಸರ್ಕಾರ ಕೆಡವಲು, ಅಸ್ಥಿರಗೊಳಿಸಲು ಅಥವಾ ಅಭದ್ರತೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಂಥ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಂಗಳವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಬೀಳಿಸುವುದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲವೇ ಇಲ್ಲ. ಅದಕ್ಕೆ ಮೋದಿ, ಶಾ ನಿರ್ದೇಶನವಿದ್ದರೆ ಮಾತ್ರ ಸಾಧ್ಯ. ಬೇರೆ ಯಾರ ನಿರ್ದೇಶನ ಇದ್ದರೂ ಅದು ಅಧಿಕೃತ ಅಲ್ಲ’ ಎಂದು ಹೇಳಿದರು.

‘ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ದೇಶಕ್ಕಾಗಿ ಏನು ಮಾಡಬೇಕು? ಕಾಶ್ಮೀರ, ಚೀನಾ, ಅಮೆರಿಕ ಜೊತೆ ಯಾವ ರೀತಿ ಸಂಬಂಧ ಹೊಂದಬೇಕು ಎಂಬ ವಿಚಾರದ ಬಗ್ಗೆ ಯೋಚಿಸುತ್ತಿದ್ದಾರೆ. ರೈತರ ಪರ ಬಜೆಟ್‌ ನೀಡುವುದಾಗಿ ಹೇಳಿದ್ದಾರೆ. ಅಧಿವೇಶನದತ್ತ ಗಮನ ಹರಿಸುತ್ತಿದ್ದಾರೆ. ಹೀಗಾಗಿ, ಬಿಜೆಪಿ ಮೇಲೆ ಕೆಸರು ಎರಚಬಾರದು. ಅವರು ಜೆಡಿಎಸ್‌ ಅಥವಾ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಲು ಪ್ರಯತ್ನಿಸುತ್ತಿಲ್ಲ’ ಎಂದು ಬಿಜೆಪಿ ಪರ ಬ್ಯಾಟ್‌ ಬೀಸಿದರು.

‘ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರ ಹೊಸದಲ್ಲ. ಅವರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿಲ್ಲ. ಆನಂದ್‌ ಸಿಂಗ್ ಅವರದ್ದು ವೈಯಕ್ತಿಕ ಸಮಸ್ಯೆ. ಅದನ್ನು ಕಾಂಗ್ರೆಸ್‌ ನಾಯಕರೇ ಸರಿಪಡಿಸಿಕೊಳ್ಳಬೇಕು’ ಎಂದರು.

‘ನಾನು ಕೂಡ ಹಿಂದೆ ಬಿಜೆಪಿಯಲ್ಲಿ ಇದ್ದವನು. ಆ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ ನನ್ನನ್ನು ಗೃಹ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿದ್ದರು. ಹೀಗಾಗಿ, ಅವರ ಬಗ್ಗೆ ಒಳ್ಳೆಯ ಭಾವನೆ ಇದೆ. ಆದರೆ, ಈಗ ನಾನು ಪಕ್ಕಾ ಜೆಡಿಎಸ್‌’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT