ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಶಾಸಕರ ಬಂಧನ: ಶಾಸಕ ಅನ್ನದಾನಿ ಆರೋಪ

Last Updated 21 ಜುಲೈ 2019, 17:35 IST
ಅಕ್ಷರ ಗಾತ್ರ

ಮಂಡ್ಯ: ‘ಮುಂಬೈನಲ್ಲಿರುವ ಶಾಸಕರು ನಮ್ಮ ಜೊತೆ ಮಾತನಾಡಲು ತಯಾರಿದ್ದಾರೆ. ಆದರೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಅವರನ್ನು ಬಂಧನದಲ್ಲಿಟ್ಟಿದೆ. ಅಲ್ಲಿಯ ಬಿಜೆಪಿ ಮುಖಂಡರಿಗೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‌ನಿಂದ ಆಚೆಗೆ ಕಳುಹಿಸಲಿ’ ಎಂದು ಶಾಸಕ ಡಾ.ಕೆ.ಅನ್ನದಾನಿ ಭಾನುವಾರ ಸವಾಲು ಹಾಕಿದರು.

ಮಳವಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇನ್ನೆರಡು ದಿನದಲ್ಲಿ ಸಮ್ಮಿಶ್ರ ಸರ್ಕಾರ ಏನಾಗುತ್ತದೋ ಗೊತ್ತಿಲ್ಲ. ಆದರೆ ಮಹಾರಾಷ್ಟ್ರದ ಬಿಜೆಪಿ ಮುಖಂಡರು ನಮ್ಮ ಶಾಸಕರನ್ನು ಬಂಧನದಿಂದ ಬಿಟ್ಟರೆ ಸೋಮವಾರ ಸಂಜೆಯೊಳಗೆ ಸರ್ಕಾರ ಉಳಿಯುತ್ತದೆ. ಆದರೆ ಅವರನ್ನು ಬಲವಂತದಿಂದ ಬಂಧನದಲ್ಲಿ ಇರಿಸಲಾಗಿದೆ. ಹಣ ಹಾಗೂ ಮಂತ್ರಿ ಸ್ಥಾನದ ಆಮಿಷವೊಡ್ಡಲಾಗಿದೆ’ ಎಂದು ಆರೋಪಿಸಿದರು.‌

‘ಅತೃತ್ತಶಾಸಕರು ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಬರಬೇಕು. ಅವರು ಬಿಜೆಪಿಗೆ ಮತ ಹಾಕಿದರೆ ಹಾಕಲಿ, ಆದರೆ ಈ ರೀತಿ ಬಂಧನದಲ್ಲಿ ಇರುವುದು ಸರಿಯಲ್ಲ. ವಿಧಾನಸಭೆಯಲ್ಲಿ ಸ್ಪೀಕರ್‌ ಅವರೇ ಸುಪ್ರೀಂ, ರಾಜ್ಯಪಾಲರು ಏನೂ ಮಾಡಲು ಸಾಧ್ಯವಿಲ್ಲ’ ಎಂದರು.

ಚೆಲ್ಲಿದರೂ ಮಲ್ಲಿಗೆಯಾ...: ರೆಸಾರ್ಟ್‌ನಿಂದ ಹೊರಬಂದು ಮಳವಳ್ಳಿಯಲ್ಲಿ ನಡೆದ ಸುತ್ತೂರು ಶಿವಯೋಗಿ ಶ್ರೀಗಳ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅನ್ನದಾನಿ ಪಾಲ್ಗೊಂಡರು. ಸರ್ಕಾರದ ಅಳಿವು–ಉಳಿವಿನ ಒತ್ತಡದ ನಡುವೆಯೂ ಅವರು ‘ಚೆಲ್ಲಿದರೂ ಮಲ್ಲಿಗೆಯಾ’ ಜನಪದ ಗೀತೆ ಹಾಡಿ ಜನರನ್ನು ರಂಜಿಸಿದರು. ಹಲವು ದಿನಗಳ ನಂತರ ಶಾಸಕರನ್ನು ಕಂಡ ಜನರು ಜೈಕಾರ ಹಾಕಿದರು.

‘ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇಲ್ಲಿಗೆ ಬರಲು ಸಾಧ್ಯವಿರಲಿಲ್ಲ. ವರಿಷ್ಠರ ಸೂಚನೆಯನ್ನೂ ಧಿಕ್ಕರಿಸಿ ಜನರ ಬಳಿಗೆ ಬಂದಿದ್ದೇನೆ. ಸಂಜೆಯೊಳಗೆ ಮತ್ತೆ ರೆಸಾರ್ಟ್‌ನಲ್ಲಿ ಶಾಸಕರನ್ನು ಸೇರಿಕೊಳ್ಳುತ್ತೇನೆ. ಜನರ ಸಮಸ್ಯೆಯನ್ನು ಆಲಿಸದಿದ್ದರೆ ನಾವು ಶಾಸಕರಾಗಿ ಉಳಿಯಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT