ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ, ಕಾಲೇಜುಗಳಿಗೆ ರಜೆ ಎಲ್ಲಿದೆ, ಎಲ್ಲಿಲ್ಲ: ಇಲ್ಲಿದೆ ಮಾಹಿತಿ

Last Updated 7 ಜನವರಿ 2019, 15:25 IST
ಅಕ್ಷರ ಗಾತ್ರ

ಬೆಂಗಳೂರು:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಎರಡು ದಿನ ಮುಷ್ಕರಕ್ಕೆ ಕರೆ ನೀಡಿದ್ದು, ಶಾಲಾ ಕಾಲೇಜುಗಳಿಗೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ತೊಂದರೆ ಆಗದಂತೆ ರಜೆ ಘೋಷಿಸಿದ್ದಾರೆ. ಜಿಲ್ಲಾ ವಾರು ವಿವರ ಇಲ್ಲಿದೆ.

* ಚಿತ್ರದುರ್ಗ: ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮಂಗಳವಾರ ರಜೆ ಘೋಷಿಸಿದದ್ದಾರೆ.

* ದಕ್ಷಿಣ ಕನ್ನಡ, ಉಡುಪಿ: ಎರಡೂ ಜಿಲ್ಲೆಗಳ ಎಲ್ಲಾ ಶಾಲಾ ಹಾಗೂ ಕಾಲೇಜುಗಳಿಗೆ ದ.ಕ‌. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರಜೆ ಘೋಷಿಸಿದ್ದಾರೆ.

* ಮೈಸೂರಿನಲ್ಲಿ ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

* ದಾವಣಗೆರೆ: ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಂಗಳವಾರ (ಜ. 8) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದರು.

* ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜ.8ರಂದು ಒಂದು ದಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ. ಜ.8ರ ತರಗತಿಗಳನ್ನು ಪರ್ಯಾಯವಾಗಿ ಭಾನುವಾರ ಸರಿದೂಗಿಸಬೇಕು ಎಂದು ಅವರು ತಿಳಿಸಿದ್ದಾರೆ.

* ಮಂಡ್ಯ: ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ರಜೆ ಘೋಷಣೆ.

* ರಾಮನಗರ: ಎಲ್ಲ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಆದೇಶಿಸಿದ್ದಾರೆ.

* ಬಳ್ಳಾರಿ: ಜಿಲ್ಲೆಯಾದ್ಯಂತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಆದೇಶಿಸಿದ್ದಾರೆ. ಜ.08 ರಂದು ರಜೆ ಘೋಷಿಸಿರುವುದರಿಂದ, ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿ, ಜ.12ರ ಶನಿವಾರದಂದು ಪೂರ್ಣ ದಿನದ ಶಾಲೆ ಕಾಲೇಜು ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

* ಚಾಮರಾಜನಗರ: ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ‌ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರಲಿವೆ.

* ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಿದ್ದಾರೆ.

* ಕೊಪ್ಪಳ: ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂದ್ ಹಿನ್ನಲೆಯಲ್ಲಿ ಎಲ್ಲಾ ಬಸ್ ಸಂಚಾರ ಸೇರಿದಂತೆ ವಹಿವಾಟುಗಳ ಬಂದ್ ಆಗುವ ಸಾಧ್ಯತೆಗಳ ಹಿನ್ನಲೆಯಲ್ಲಿ ಜ.8 ರಂದು ಶಾಲೆ ಕಾಲೇಜುಗಳಿಗೆ ಸುರಕ್ಷತಾ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಆದೇಶ ಹೊರಡಿಸಿದ್ದಾರೆ.

* ಕಲಬುರಗಿ: ಜಿಲ್ಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆರ್ ವೆoಕಟೇಶಕುಮಾರ ಆದೇಶಿಸಿದ್ದಾರೆ.

* ಗದಗ:ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

* ತುಮಕೂರು: ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜ.8ರಂದು ಒಂದು ದಿನ ರಜೆ ಘೋಷಣೆ ಮಾಡಲಾಗಿದೆ ಎಂದುಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.ರಜೆಯಲ್ಲಿನ ಶಾಲಾ ತರಗತಿಗಳನ್ನು ಶನಿವಾರ ಸರಿದೂಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಜೆ ಘೋಷಣೆ ಇಲ್ಲದ ಜಿಲ್ಲೆಗಳು
* ಯಾದಗಿರಿ: ಬಂದ್ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿರುವ ಜಿಲ್ಲಾಧಿಕಾರಿ ಸರ್ಕಾರಿ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಎನ್ಇಕೆಎಸ್ಆರ್ ಟಿಸಿ, ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚಿಸಿದ್ದೇನೆ. ರಜೆ ಘೋಷಣೆ ಅಗತ್ಯ ಇಲ್ಲ ಎಂಬುದಾಗಿ ಸಮಾಲೋಚನಾ ಸಭೆಯಲ್ಲಿ ಚರ್ಚೆ ಆಗಿದೆ. ಹಾಗಾಗಿ, ರಜೆ ಘೋಷಿಸಿಲ್ಲ. ಎಂದಿನಂತೆ ಮಂಗಳವಾರ ಶಾಲಾ-ಕಾಲೇಜುಗಳು ಕದ ತೆರೆಯಲಿವೆ ಎಂಬುದಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

* ಚಿಕ್ಕಮಗಳೂರು: ಶಾಲಾ ಕಾಲೇಜುಗಳಿಗೆ ನಾಳೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

* ವಿಜಯಪುರ: ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

* ಬೆಳಗಾವಿ: ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ಅವು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

* ಹಾಸನ: ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಪರೀಕ್ಷೆ ಮುಂದೂಡಿಕೆ

*ದ್ವಿತೀಯ ಪಿಯು ಪೂರ್ವಭಾವಿ ಪರೀಕ್ಷೆಗಳು, ಧಾರವಾಡ, ತುಮಕೂರು, ದಾವಣಗೆರೆ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಲಾಗಿದೆ

ದಾವಣಗೆರೆ ವಿ.ವಿ ಪರೀಕ್ಷೆ ಮುಂದೂಡಿಕೆ
ದಾವಣಗೆರೆ:
ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜ.8 ಮತ್ತು 9ರಂದು ನಡೆಯುವ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಡಾ.ಬಸವರಾಜ್ ಬಣಕಾರ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ಒಂದು ತಿಂಗಳಿನಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿವೆ. ಜ.8 ಮತ್ತು 9ರಂದು ಸ್ನಾತಕೋತ್ತರ ಮತ್ತು ಬಿ.ಇಡಿ. ಪರೀಕ್ಷೆಗಳಿದ್ದವು. ಜ.8ರ ಪರೀಕ್ಷೆಗಳು ಜ.10ರಂದು ಹಾಗೂ ಜ.9ರ ಪರೀಕ್ಷೆಗಳು ಜ.10ರಂದು ನಡೆಸಲು ನಿರ್ಧರಿಸಲಾಗಿದೆ. ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮಂಡ್ಯ: ಸ್ನಾತಕೋತ್ತರ ಪದವಿ ಪರೀಕ್ಷೆ
ಮಂಡ್ಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಂಗಳವಾರ, ಬುಧವಾರ ಇದ್ದ ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಲಾಗಿದೆ.

ತುಮಕೂರು ವಿವಿ; ಪರೀಕ್ಷೆ ಮುಂದೂಡಿಕೆ
ತುಮಕೂರು:
ಜನವರಿ 8 ರಂದು ನಡೆಯಬೇಕಿದ್ದ ಸ್ನಾತಕೋತ್ತರ ಎಂ.ಬಿ.ಎ, ಎಂ.ಕಾಂ ಗಣಿತಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಪದವಿ ಪರೀಕ್ಷೆಗಳನ್ನು ಅನಿವಾರ್ಯವಾಗಿ ಜನವರಿ 10 ಕ್ಕೆ ಮುಂದೂಡಲಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿವಿ ಪರೀಕ್ಷೆಗಳು ಮುಂದಕ್ಕೆ
ಹುಬ್ಬಳ್ಳಿ:
ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜ 8-9ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕ ‌ವಿಶ್ವವಿದ್ಯಾಲಯ ಈ ದಿನಗಳಂದು‌ ನಡೆಸಬೇಕಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ.

ಎಂ.ಎ. ಎಂ.ಎಸ್ಸಿ ಹಾಗೂ ಎಂ.ಕಾಂ. ಪರೀಕ್ಷೆಗಳನ್ನು 17-18ರಂದು ನಡೆಸಲಾಗುವುದು ಎಂದು ಕರ್ನಾಟಕ ‌ವಿ.ವಿ. ಮೌಲ್ಯಮಾಪನ ‌ಕುಲಸಚಿವ ನಾರಾಯಣ ಸಾಲಿ ಪ್ರಜಾವಾಣಿಗೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ವಿವಿ ಪರೀಕ್ಷೆ ಮುಂದೂಡಿಕೆ

ಗದಗ: ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜ.8 ರಂದು ನಡೆಬೇಕಿದ್ದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT