ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸಾರ್ವತ್ರಿಕ ಮುಷ್ಕರ; ಅವ್ಯವಸ್ಥೆಗೆ ಎಡೆ ಇಲ್ಲ ಎಂದ ರಾಜ್ಯ ಸರ್ಕಾರ

ಜನಜೀವನಕ್ಕೆ ಯಾವುದೇ ತೊಂದರೆ ಆಗದಂತೆ ರಾಜ್ಯ ಸರ್ಕಾರದಿಂದ ನಿಗಾ
Last Updated 8 ಜನವರಿ 2020, 1:16 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬುಧವಾರದ ಸಾರ್ವತ್ರಿಕ ಮುಷ್ಕರದ ವೇಳೆ ಜನಜೀವನಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಿರುವ ರಾಜ್ಯ ಸರ್ಕಾರ, ಅವ್ಯವಸ್ಥೆಗೆ ಎಡೆ ಮಾಡಿಕೊಡದಿರಲು ತೀರ್ಮಾನಿಸಿದೆ.

ಹೀಗಾಗಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೊ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದು. ಹಾಲು, ಔಷಧ, ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯ ಸೇವೆಯಲ್ಲಿಯೂ ಸಮಸ್ಯೆ ಆಗದು. ಆ್ಯಪ್‌ ಆಧಾರಿತ ಓಲಾ, ಉಬರ್‌ನಂಥ ಕ್ಯಾಬ್‌ಗಳನ್ನು ಹೊರತುಪಡಿಸಿ, ವಾಣಿಜ್ಯ ಉದ್ದೇಶದ ಟ್ಯಾಕ್ಸಿ ಸಂಘಗಳು, ಆಟೊ ರಿಕ್ಷಾ ಸಂಘಗಳು ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ ಆಟೊ, ಟ್ಯಾಕ್ಸಿ ಸೇವೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ಕಟ್ಟುನಿಟ್ಟಿನ ಕ್ರಮ: ‘ಸಾರಿಗೆ ನಿಗಮದ ಬಸ್‌ಗಳು ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಷ್ಕರದಲ್ಲಿ ಭಾಗವಹಿಸುವವರು ಕಾನೂನು ಉಲ್ಲಂಘಿಸಿ ಅಹಿತಕರ ಘಟನೆಗಳಿಗೆ ಕಾರಣರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

‘ಸಾರಿಗೆ ನಿಗಮಗಳನ್ನು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಕರ್ತವ್ಯ. ಅದನ್ನು ಉಲ್ಲಂಘಿಸಿ ಕೆಲಸಕ್ಕೆ ಗೈರಾದರೆ ಅಂಥವರ ವೇತನ ಕಡಿತಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲ: ಮುಷ್ಕರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ‘ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ದೇಶದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ನೆರೆಹೊರೆ ಜಿಲ್ಲೆಗಳಲ್ಲಿನ ಬಡ ರೈತರಿಗೆ ಉಳುಮೆ ಚೀಟಿ ನೀಡಿಲ್ಲ. ರೈತರು ಸ್ವಂತ ನಿವೇಶನ ಹೊಂದಲು ಸಾಧ್ಯವಾಗಿಲ್ಲ. ರೈತನ ಗೋಳು ಕೇಂದ್ರದ ಕಣ್ಣಿಗೆ ಕಾಣುತ್ತಿಲ್ಲ’ ಎಂದು ದೂರಿದರು.

‘ಕೇಂದ್ರದ ಈ ರೈತ ವಿರೋಧಿ ಧೋರಣೆಯನ್ನು ಖಂಡಿಸಿಪುರಭವನದಿಂದ ಬುಧವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಮುಷ್ಕರದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಸೇರಿ ವಿವಿಧ ಜಿಲ್ಲೆಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ರೈತರು ಬೆಳೆಯುವ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗಬೇಕು. ರೈತರ ಮೇಲಿನ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು. ಕೇರಳ ಮಾದರಿ ಶಾಶ್ವತ ಋಣಮುಕ್ತ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಶಾಲಾ ಕಾಲೇಜಿಗೆ ರಜೆ ಇಲ್ಲ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ (ಜ. 8) ಕರೆ ನೀಡಿರುವ ಮುಷ್ಕರ, ‘ಭಾರತ್‌ ಬಂದ್‌’ ಎಂಬಂತೆ ಬಿಂಬಿತವಾಗಿದೆ. ಆದರೆ, ಬಂದ್‌ ಅಲ್ಲ ಎಂದು ಈ ಸಂಘಟನೆಗಳು ಸ್ಪಷ್ಟಪಡಿಸಿವೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು, ಆಟೊ, ಟ್ಯಾಕ್ಸಿ, ಕ್ಯಾಬ್‌ ಮತ್ತು ಸರಕು ಸಾಗಣೆ ಚಾಲಕರು ಮತ್ತು ಮಾಲೀಕರ ಸಂಘಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಆದರೆ, ಸೇವೆ ಸ್ಥಗಿತ
ಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ, ಎಂದಿನಂತೆ ಸೇವೆ ಲಭ್ಯವಾಗಲಿದೆ. ಶಿಕ್ಷಣ ಸಂಸ್ಥೆಗಳು ಕೂಡಾಎಂದಿನಂತೆ ಕಾರ್ಯನಿರ್ವಹಿಸಲಿವೆ.

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಮತ್ತು ಕೇಂದ್ರದ ಹಣಕಾಸು ನೀತಿಯನ್ನು ಬ್ಯಾಂಕ್‌ ನೌಕರರ ಸಂಘಗಳು ವಿರೋಧಿಸಿವೆ. ಅಲ್ಲದೆ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬ್ಯಾಂಕ್‌ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಬ್ಯಾಂಕ್‌ಗಳ ಎಟಿಎಂ ಸೇವೆಗಳಲ್ಲಿಯೂ ಸಮಸ್ಯೆ ಎದುರಾಗಬಹುದು. ಆದರೆ, ನೆಟ್‌ ಬ್ಯಾಂಕಿಂಗ್‌ ಸೇವೆಯಲ್ಲಿ ಯಾವುದೇ ತೊಡಕು ಉಂಟಾಗದು ಎಂದು ಬ್ಯಾಂಕ್‌ಗಳು ತಿಳಿಸಿವೆ. ಬ್ಯಾಂಕಿಂಗ್‌ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಫಾರ್ಮಸಿ ಪರೀಕ್ಷೆ ಮುಂದೂಡಿಕೆ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬಿ.ಫಾರ್ಮಾ, ಎಂ.ಫಾರ್ಮಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ ವಿಟಿಯು ಪರೀಕ್ಷೆಗಳ ಮುಂದೂಡಿಕೆ ಇಲ್ಲ ಎಂದು ಕುಲಪತಿ ತಿಳಿಸಿದ್ದಾರೆ.

ಮುಷ್ಕರದಲ್ಲಿ ಭಾಗವಹಿಸುವಂತೆ ಸಮಾಜ ವಿರೋಧಿ ಶಕ್ತಿಗಳು ಒತ್ತಾಯಿಸಿದರೆ, ಅಂಗಡಿ ಮುಚ್ಚಿಸಲು ಪ್ರಯತ್ನಿಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು?

* ಗುತ್ತಿಗೆ ಪದ್ಧತಿ ನಿಯಂತ್ರಣ

* ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ

* ಡಾ. ಸ್ವಾಮಿನಾಥನ್ ವರದಿ ಜಾರಿ

* ಸ್ಕೀಂ ನೌಕರರನ್ನು ನೌಕರರೆಂದು ಪರಿಗಣನೆ

* ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು

* ಬ್ಯಾಂಕಿಂಗ್, ವಿಮೆ, ರಕ್ಷಣೆಯಲ್ಲಿ ನೇರ ಬಂಡವಾಳಕ್ಕೆ ವಿರೋಧ

* ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ

* ₹ 21 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು

* ಆರ್ಥಿಕ ಹಿಂಜರಿತ ನೀತಿಗಳ ಕೈಬಿಡಬೇಕು

* ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್, ಪಿಂಚಣಿ

* ಪಡಿತರ ಮೂಲಕ ಅಗತ್ಯ ವಸ್ತುಗಳನ್ನು ವಿತರಿಸಬೇಕು

* ಉದ್ಯೋಗ ಖಾತ್ರಿ ಯೋಜನೆ ಬಲಪಡಿಸುವುದು

ಬಂದ್‌ ಪ್ರಶ್ನಿಸಿದ ಅರ್ಜಿ ವಿಲೇವಾರಿ

‘ಬಂದ್‌ಗಳಿಂದ ಶಾಲಾ ಮಕ್ಕಳು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ತೀವ್ರ ಅನನುಕೂಲವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.

ಈ ಸಂಬಂಧ, ‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ’ದ ಅಧ್ಯಕ್ಷ ಸಿ.ಆರ್. ಮೊಹಮ್ಮದ್ ಇಮ್ತಿಯಾಜ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಅರ್ಜಿದಾರರು ಈ ಸಂಬಂಧ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಬೇಕು. ಮನವಿಯನ್ನು ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಕೆಲವರು ಬಂದ್‌ ಕರೆ ಕೊಟ್ಟಿರುವುದಾಗಿ ಭಾವಿಸಿದ್ದಾರೆ. ಯಾವುದೇ ಸೇವೆಗಳು ಬಂದ್‌ ಆಗುವುದಿಲ್ಲ. ಸಾರಿಗೆ ಸಂಸ್ಥೆ ನೌಕರರು ಅಲ್ಲಲ್ಲಿ ಧರಣಿ ನಡೆಸಲಿದ್ದಾರೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಹೇಳಿದ್ದಾರೆ.

ಮುಷ್ಕರಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಮೆರವಣಿಗೆಗೆ ಅವಕಾಶ ನೀಡಿಲ್ಲ. ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT