ಶನಿವಾರ, ಜೂನ್ 6, 2020
27 °C

ಕಂಟೈನ್‌ಮೆಂಟ್‌ ವಲಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ:ಎಸ್‌.ಸುರೇಶ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್ ಕಾರಣಕ್ಕೆ ಕಂಟೈನ್‌ಮೆಂಟ್‌ ವಲಯಗಳೆಂದು ಘೋಷಿಸಿದ ಸ್ಥಳಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತಿಳಿಸಿದ್ದಾರೆ.‌

ಶುಕ್ರವಾರ ಬೆಂಗಳೂರು ಆಕಾಶವಾಣಿ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್‌ಮೆಂಟ್‌ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ವೇಳೆ ಅವಕಾಶ ನೀಡಲಾಗುವುದು. ಆಗ ಆ ವಿದ್ಯಾರ್ಥಿಯಗಳನ್ನು ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೇ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದು’ ಎಂದಿದ್ದಾರೆ.

‘ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು ಅದು ಯಾರೊಬ್ಬರ ಪ್ರತಿಷ್ಠೆಯಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

 ಜುಲೈ 31ರೊಳಗೆ ಮೌಲ್ಯಮಾಪನ: ‘ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಹಾಸ್ಟೆಲ್‌ಗಳ ವಾಸಿ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ ಹಾಲ್ ಟಿಕೆಟ್‌ಗಳನ್ನು ಒದಗಿಸಲಾಗುತ್ತಿದೆ. ಜುಲೈ 31ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಜುಲೈ 12ರಂದು ಟಿಇಟಿ ಪರೀಕ್ಷೆ: ‘ಜುಲೈ 5ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ದಿನ ಕೇಂದ್ರೀಯ ಶಿಕ್ಷಣ ಅರ್ಹತಾ ಪರೀಕ್ಷೆ (ಸಿಟಿಇಟಿ) ನಡೆಯಲಿದೆ. ಹೀಗಾಗಿ ರಾಜ್ಯದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಯನ್ನು ಜುಲೈ 12ರಂದು ನಡೆಸಲು ನಿರ್ಧರಿಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಶನ ಇದೇ 25ರ ಬೆಳಿಗ್ಗೆ 7.15ಕ್ಕೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು