ಗುರುವಾರ , ಜೂನ್ 24, 2021
21 °C
ಮರು ನೋಂದಣಿಗೆ ಬೆರಳಚ್ಚು ಕಡ್ಡಾಯ ಮಾಡಿದ್ದರಿಂದ ತಾಪತ್ರಯ

ಬೆಳಗಾವಿ: ರೇಷನ್‌ ಅಂಗಡಿಗೆ ಹಾಜರ್; ಶಾಲೆಗೆ ಚಕ್ಕರ್‌!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪಡಿತರ ಚೀಟಿಗಳಲ್ಲಿ ಹೆಸರಿರುವ ಎಲ್ಲರೂ ಬೆರಳಚ್ಚು ನೀಡುವ ಮೂಲಕ ‘ಗುರುತಿನ ಮರುನೋಂದಣಿ’ (ಇ–ಕೆವೈಸಿ: ವಿದ್ಯುನ್ಮಾನ–ನಿಮ್ಮ ಗ್ರಾಹಕರನ್ನು ಅರಿಯಿರಿ) ಮಾಡಿಸುವುದನ್ನು ಆಹಾರ ಇಲಾಖೆಯು ಕಡ್ಡಾಯಗೊಳಿಸಿರುವುದರಿಂದಾಗಿ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಮಹತ್ವದ ವಾರ್ಷಿಕ ಪರೀಕ್ಷೆಗೆ ಸಿದ್ಧವಾಗಿರಬೇಕಿರುವ ಈ ಸಂದರ್ಭದಲ್ಲಿ ಎದುರಾಗಿರುವ ಅನಿವಾರ್ಯತೆಯಿಂದ ಕಂಗಾಲಾಗಿದ್ದಾರೆ.

‘ಪೋಷಕರು, ತರಗತಿ ತಪ್ಪಿಸಿದರೂ ಪರವಾಗಿಲ್ಲ ನ್ಯಾಯಬೆಲೆ ಅಂಗಡಿಗೆ ಬರುವಂತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಸರ್ವರ್‌ ಡೌನ್‌ ಸಮಸ್ಯೆಯಿಂದಾಗಿ, ನಿಗದಿತ ತಂತ್ರಾಂಶವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಒಂದೇ ದಿನದಲ್ಲಿ ನೋಂದಣಿ ಸಾಧ್ಯವಾಗುತ್ತಿಲ್ಲ. ಪರಿಣಾಮ, ಮಕ್ಕಳು ಹಲವು ದಿನಗಳನ್ನು ಇ–ಕೆವೈಸಿಗಾಗಿಯೇ ವ್ಯಯಿಸಬೇಕಾಗಿದೆ. ವಿಶೇಷವಾಗಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.

ಶಿಕ್ಷಕರ ಕಳವಳ

ಸರ್ಕಾರದ ನಿಯಮವು ಮಕ್ಕಳು, ಪೋಷಕರು ಮತ್ತು ಶಿಕ್ಷಕರ ತಲೆನೋವು ತರಿಸಿದೆ. ಬೆರಳಚ್ಚು ನೀಡಬೇಕಾದ ಕಾರಣ ಹೇಳಿ ವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಳ್ಳುತ್ತಿರುವ ಕುರಿತು ಹಲವು ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಬರೆದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ‍ಪ್ರಕ್ರಿಯೆ ಆರಂಭಿಸಲಾಗಿದ್ದು, ತಿಂಗಳ 1ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ನಡೆಸುವಂತೆ ಸೂಚಿಸಲಾಗಿದೆ. ಕಳೆದೆರಡು ತಿಂಗಳುಗಳಲ್ಲೂ ಸರ್ವರ್ ಡೌನ್‌ ಸಮಸ್ಯೆ ಇತ್ತು. ಈ ತಿಂಗಳಲ್ಲಾದರೂ ಸರ್ವರ್‌ ಸಮಸ್ಯೆ ಬಗೆಹರಿದೀತೇ ಎನ್ನುವ ಪ್ರಶ್ನೆ ಇದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವುದು ತಪ್ಪುವುದಿಲ್ಲ.

ಹಾಸ್ಟೆಲ್‌, ವಸತಿ ಶಾಲೆಯವರು

‘ಒಂದು ದೇಶ ಒಂದು ಪಡಿತರ’ ಯೋಜನೆಯ ಭಾಗವಾಗಿ, ಎಲ್ಲ ಪಡಿತರ ಚೀಟಿದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸಿಗುವಂತಾಗಲು ಹಾಗೂ ರಾಜ್ಯದ ಯಾವುದೇ ಸ್ಥಳದಲ್ಲಿ ಬೇಕಾದರೂ ಪಡಿತರ ಪಡೆಯಲು ಅನುಕೂಲ ಕಲ್ಪಿಸಲು ಇಲಾಖೆಯು ‘ಇ– ಕೆವೈಸಿ’ ಸಂಗ್ರಹ ನಡೆಸುತ್ತಿದೆ. ಚೀಟಿಯಲ್ಲಿ ಹೆಸರಿರುವ ಎಲ್ಲರೂ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡಬೇಕು. ಹೀಗಾಗಿ, ದೂರದ ವಸತಿ ಶಾಲಾ–ಕಾಲೇಜು, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ರಜೆ ಹಾಕಿ ಊರಿಗೆ ಬರಬೇಕಾಗಿದೆ.

‘ಪ್ರಕ್ರಿಯೆ ಸುಗಮವಾಗಿ ನಡೆಯದಿರುವುದರಿಂದ ಅಂಗಡಿಕಾರರಿಗೂ ತೊಂದರೆಯಾಗುತ್ತಿದೆ. ಕೆಲಸ ಬಿಟ್ಟು, ಕುಟುಂಬ ಸಮೇತ ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುವ ಜನರು ‘ಸರ್ವರ್‌ ಸ್ಥಗಿತಗೊಂಡಿದ್ದು’ ಗೊತ್ತಾದರೆ ನಮ್ಮ ಮೇಲೆ ಸಿಟ್ಟಾಗುತ್ತಾರೆ. ಮಕ್ಕಳನ್ನು ಶಾಲೆಗೆ ರಜೆ ಹಾಕಿಸಿ ಕರೆತಂದಿರುತ್ತಾರೆ; ಕೆಲಸ ಆಗಲಿಲ್ಲವೆಂದರೆ ಕೂಗಾಡುತ್ತಾರೆ. ಸರ್ವರ್‌ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ  ಸಲ್ಲಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ವರ್‌ ಡೌನ್‌ ಹಾಗೂ ತಂತ್ರಾಂಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಸದ್ಯಕ್ಕೆ ಇ–ಕೆವೈಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಯೊಮೆಟ್ರಿಕ್‌ ಇಲ್ಲದಿದ್ದರೂ ಪಡಿತರ ವಿತರಿಸಲಾಗುತ್ತಿದೆ. ಸಮಸ್ಯೆ ಬಗೆಹರಿಸಿದರೆ ಇ–ಕೆವೈಸಿ ಮುಂದುವರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತದೆ’ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಪ್ರತಿಕ್ರಿಯಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನೂ ಹೊಂದಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು