ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಹಠಾತ್ ಬೆಳವಣಿಗೆ: ಟ್ರಸ್ಟ್ ಅಧ್ಯಕ್ಷ, ಸಾಲೂರು ಮಠದ ಕಿರಿಯ ಶ್ರೀ ವಶಕ್ಕೆ

ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣ: ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ
Last Updated 19 ಡಿಸೆಂಬರ್ 2018, 3:51 IST
ಅಕ್ಷರ ಗಾತ್ರ

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಲಯದ ದುರಂತಕ್ಕೆ ಸಂಬಂಧಿಸಿ ಪೊಲೀಸರು ದೇವಾಲಯದ ಟ್ರಸ್ಟ್ ಅಧ್ಯಕ್ಷ ಹಾಗೂ ಮಹದೇಶ್ವರ ಬೆಟ್ಟದ ಕಿರಿಯ ಸ್ವಾಮೀಜಿ ಇಮ್ಮಡಿ ಮಹಾದೇವಸ್ವಾಮಿ ಅವರನ್ನುಮಂಗಳವಾರ ತಡ ರಾತ್ರಿ ಕೊಳ್ಳೇಗಾಲದ ಮಠದಿಂದ ವಶಕ್ಕೆ ಪಡೆದಿದ್ದಾರೆ.

ಐದು ದಿನಗಳ ಹಿಂದೆ ನಡೆದಿದ್ದ ಅಮಾನವೀಯ ಘಟನೆಯ ತನಿಖೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಸ್ವಾಮೀಜಿ ಅವರನ್ನು ಸೋಮವಾರ ವಿಚಾರಣೆಗೆ ಒಳಪಡಿಸಲಾಗಿತ್ತು.

ದೇವಾಲಯದ ವ್ಯವಸ್ಥಾಪಕ ಹಾಗೂ ಈಗಾಗಲೇ ಪೊಲೀಸರ ವಶದಲ್ಲಿರುವ ಮಾದೇಶ ಅವರ ಪತ್ನಿ ಅಂಬಿಕಾ ಅವರನ್ನು ಮಂಗಳವಾರ ವಶಕ್ಕೆ ಪಡೆದಿದ್ದ ತನಿಖಾಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಅವರು ದೇವಾಲಯ ಆಡಳಿತ ಹಾಗೂ ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಮಹತ್ವ ವಿಚಾರಗಳನ್ನು ಬಹಿರಂಗ ಪಡಿಸಿದ್ದರು ಎನ್ನಲಾಗಿದೆ.

ಇದರ ಆಧಾರದಲ್ಲಿ ಪೊಲೀಸರು ಇಮ್ಮಡಿ ಸ್ವಾಮೀಜಿ ಅವರನ್ನು ಮಂಗಳವಾರ ಮಧ್ಯಾಹ್ನದ ಮೇಲೆ ಮತ್ತೆ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿ ಹರಡಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಇದನ್ನು ಖಚಿತ ಪಡಿಸಿರಲಿಲ್ಲ.

ರಾತ್ರಿ 9 ಗಂಟೆಯ ನಂತರ ಹಲವು ಮಹತ್ವದ ಬೆಳವಣಿಗೆಗಳು ನಡೆದವು. ಈಗಾಗಲೇ ವಶಕ್ಕೆ ಪಡೆದವರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಮಾಧ್ಯಮಗಳ ಮುಂದೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೀನಾ ಅವರು, ‘ಅಂತಹ ಯಾವ ಬೆಳವಣಿಗೆಗಳೂ ನಡೆದಿಲ್ಲ. ತನಿಖೆ ಅಂತಿಮ ಹಂತದಲ್ಲಿದೆ. ಸದ್ಯಕ್ಕೆ ಏನೂ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ಇಬ್ಬರು ಚಾಲಕರು, ಟ್ರಸ್ಟಿಗಳು ಸೇರಿದಂತೆ 35 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೀನಾ ಅವರು ಹೇಳಿದ್ದರು.

ಇದಾದ ಎರಡು ಗಂಟೆಗಳಲ್ಲಿ ಸ್ವಾಮೀಜಿಯವರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವವರ ಸಂಖ್ಯೆ 11ಕ್ಕೆ ಏರಿದೆ.

ಕೃಷಿ ಅಧಿಕಾರಿ ವಿಚಾರಣೆ: ಈ ಮಧ್ಯೆ,ಹನೂರು ತಾಲ್ಲೂಕು ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಳೆಗಳಿಗೆ ಬಳಸುವ ‘ಮೊನೊ ಕ್ರೋಟೊಫಾಸ್‌’ ಕೀಟ ನಾಶಕ, ಅದರ ಮಾರಾಟ ಹಾಗೂ ಲಭ್ಯತೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ವಿಳಂಬಕ್ಕೆ ಕೇಳಿ ಬಂದಿತ್ತು ಟೀಕೆ

ದುರಂತ ಸಂಭವಿಸಿ ಐದು ದಿನಗಳು ಕಳೆದರೂ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾಗದೇ ಇದ್ದುದರಿಂದ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.

ತನಿಖಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಆದರೆ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಅವರು ಇದನ್ನು ನಿರಾಕರಿಸಿದ್ದರು. ‘ಯಾರೂ ಒತ್ತಡ ಹಾಕುತ್ತಿಲ್ಲ. ತನಿಖೆ ಸರಾಗವಾಗಿ ನಡೆಯುತ್ತಿದೆ. ಮಹತ್ವದ ಸುಳಿವು ಸಿಕ್ಕಿದೆ’ ಎಂದು ಹೇಳಿದ್ದರು.

ವ್ಯವಸ್ಥಾಪಕ ಪತ್ನಿ ವಶಕ್ಕೆ

ಚಾಮರಾಜನಗರ: ದುರಂತಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ದೇವಾಲಯದ ವ್ಯವಸ್ಥಾಪಕ ಮಾದೇಶ್‌ ಪತ್ನಿ ಅಂಬಿಕಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಾದೇಶ್‌ ಈಗಾಗಲೇ ಪೊಲೀಸ್‌ ವಶದಲ್ಲಿದ್ದಾರೆ. ದೇವಾಲಯದ ಒಡೆತನ, ಆದಾಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸದಸ್ಯರ ನಡುವೆ ಇದ್ದ ಭಿನ್ನಭಿಪ್ರಾಯಗಳ ಬಗ್ಗೆ ಅಂಬಿಕಾ ಅವರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಇದರ ಆಧಾರದಲ್ಲಿತನಿಖಾಧಿಕಾರಿಗಳುಟ್ರಸ್ಟ್‌ ಅಧ್ಯಕ್ಷ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಶ್ರೀಗಳಾದ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಮರು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಾಮೀಜಿಯನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ವಶದಲ್ಲಿ 10 ಮಂದಿ: ಆಡಳಿತ ಮಂಡಳಿಯ ಮೂವರು ಸೇರಿದಂತೆ ಒಟ್ಟು 10 ಮಂದಿ ಪೊಲೀಸರ ವಶದಲ್ಲಿದ್ದಾರೆ. ಟ್ರಸ್ಟಿಗಳು, ಇಬ್ಬರು ಚಾಲಕರೂ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿದೆ.

ಕೃಷಿ ಅಧಿಕಾರಿ ವಿಚಾರಣೆ:ಹನೂರು ತಾಲ್ಲೂಕು ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಳೆಗಳಿಗೆ ಬಳಸುವ ‘ಮೊನೊ ಕ್ರೋಟೊಫಾಸ್‌’ ಕೀಟ ನಾಶಕ, ಅದರ ಮಾರಾಟ ಹಾಗೂ ಲಭ್ಯತೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT