ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಹೆಣ್ಣಿಗೆ ನೂರಾನೆ ಬಲ: ಸುಮಲತಾಗೆ ರೈತಸಂಘ ಬೆಂಬಲ

ಕಾರ್ಯಸೂಚಿ ಪತ್ರ ವಿತರಣೆ
Last Updated 27 ಮಾರ್ಚ್ 2019, 11:20 IST
ಅಕ್ಷರ ಗಾತ್ರ

ಮಂಡ್ಯ: ‘ಕ್ಷೇತ್ರದ ಜನರು ಅಂಬರೀಷ್ ಅವರನ್ನು ಮಂಡ್ಯದ ಗಂಡು ಎಂದು ಇಡೀ ದೇಶಕ್ಕೆ ಸಾರಿದ್ದಾರೆ. ಇಷ್ಟು ದಿನ ಮಂಡ್ಯದ ಗಂಡನ್ನು ನೋಡಿದ ಜನರು, ಮುಂದೆ ಮಂಡ್ಯದ ಹೆಣ್ಣು ನೋಡುತ್ತಾರೆ. ರೈತಸಂಘದ ಬೆಂಬಲ ಸಿಕ್ಕಿರುವುದು ನನಗೆ ನೂರಾನೆ ಬಲ ಬಂದಿದೆ’ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.

ಸುನೀತಾ ಪುಟ್ಟಣ್ಣಯ್ಯ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವೆಲ್ಲರೂ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇವೆ. ರೈತರ ಕಷ್ಟದ ಬಗ್ಗೆ ಅರಿವಿದೆ. ರೈತರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಮಾತನಾಡುವುದು ನನ್ನ ಭಾಗ್ಯ. ರೈತರ ಸಮಸ್ಯೆಗಳನ್ನು ಅರಿತು ಪ್ರತಿನಿಧಿಸುತ್ತೇನೆ. ರೈತ ಸಂಘದಿಂದ ಕೊಡಲಾದ ಕಾರ್ಯಸೂಚಿ ಪಟ್ಟಿಯಲ್ಲಿರುವ ಅಂಶಗಳನ್ನು ಈಡೇರಿಸಲು ಶ್ರಮಿಸುತ್ತೇನೆ’ ಎಂದರು.

‘ಸಚಿವ ಡಿ.ಕೆ.ಶಿವಕುಮಾರ್ ಅವರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯದ ಗಂಡಿಗೆ ಹೋಲಿಕೆ ಮಾಡುತ್ತಿರುವುದು ಎಷ್ಟು ಸಮಂಜಸ ಎಂಬುದು ಗೊತ್ತಿಲ್ಲ. ಮಂಡ್ಯದ ಗಂಡು ಯಾರು ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಶ್ ಹಾಗೂ ದರ್ಶನ್ ಅವರನ್ನು ಕಳ್ಳೆತ್ತುಗಳು ಎಂದು ಹೇಳಿದ್ದಾರೆ. ದರ್ಶನ್ ಹಾಗೂ ಯಶ್ ಸ್ವಂತ ಸಾಮರ್ಥ್ಯದಿಂದ ಬೆಳೆದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನನ್ನ ಪರವಾಗಿ ಯಾರೇ ಪ್ರಚಾರಕ್ಕೆ ಬಂದರೂ ಅದು ಅಂಬರೀಷ್ ಮೇಲಿನ ಅಭಿಮಾನ ಹಾಗೂ ಗೌರವದ ಸಂಕೇತವಾಗಿದೆ’ ಎಂದು ಹೇಳಿದರು.

ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ‘ಕ್ಷೇತ್ರದಲ್ಲಿ ಸ್ವಾಭಿಮಾನದ ಸಂಕೇತವಾಗಿ ಸ್ಪರ್ಧೆ ಮಾಡಿ, ರೈತರ ಪರವಾಗಿ ಕೆಲಸ ಮಾಡುವ ಎಲ್ಲಾ ಲಕ್ಷಣಗಳು ಸುಮಲತಾ ಅವರಲ್ಲಿವೆ. ಹೀಗಾಗಿ ಜಿಲ್ಲೆಯ ರೈತರ ಪರವಾಗಿ ಕೆಲಸ ಮಾಡಲು ಸಿದ್ಧವಾಗಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ನೀಡುತ್ತದೆ. ಅವರ ಪ್ರಚಾರ ಕಾರ್ಯಕ್ರಮದಲ್ಲಿ ರೈತ ಸಂಘದ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ’ ಎಂದು ತಿಳಿಸಿದರು.

ರೈತರಿಗಾಗಿ ಮಾಡಬೇಕಾದ ಕೆಲಸಗಳ ಕಾರ್ಯಸೂಚಿಯನ್ನು ಸುಮಲತಾ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ, ಮುಖಂಡರಾದ ಬೇಲೂರು ಸೋಮಶೇಖರ್, ಮದನ್, ವಿವೇಕಾನಂದ, ಬಿ.ಬೊಮ್ಮೇಗೌಡ, ಬಿ.ಎಸ್.ಲಿಂಗಪ್ಪಾಜಿ, ಕೆಂಪೂಗೌಡ, ಪಿ.ಕೆ.ನಾಗಣ್ಣ ಹಾಗೂ ನಾಗರಾಜು ಇದ್ದರು.

3 ಚಿಹ್ನೆ ಆಯ್ಕೆ ಮಾಡಿದ ಸುಮಲತಾ
ಮಂಡ್ಯ:
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮೂರು ಚಿಹ್ನೆಗಳನ್ನು ಆಯ್ಕೆ ಮಾಡಿದ್ದು, ಒಂದನ್ನು ಅಧಿಕೃತಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ತೆಂಗಿನ ತೋಟ, ಕಹಳೆ ಊದುವ ರೈತ ಹಾಗೂ ಕಬ್ಬಿನ ಜಲ್ಲೆ ಜೊತೆ ರೈತ ಇರುವ ಚಿಹ್ನೆಗಳನ್ನು ಆಯ್ಕೆ ಮಾಡಿದ್ದಾರೆ. ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಧಿಕೃತ ಚಿಹ್ನೆ ಪ್ರಕಟಗೊಳ್ಳಲಿದೆ.

ಸುಮಲತಾಗೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಬಲ
ಮಂಡ್ಯ:
ಕರ್ನಾಟಕ ಸಂಘಟನೆಗಳ ಒಕ್ಕೂಟದ 100ಕ್ಕೂ ಹೆಚ್ಚು ಸಂಘಟನೆಗಳು ಲೋಕಸಭಾ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರಿಗೆ ಬೆಂಬಲ ನೀಡಲಿವೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಚಳವಳಿ ನಾಗೇಶ್ ಮಂಗಳವಾರ ಹೇಳಿದರು.

‘ಅಂಬರೀಷ್ ಸಂಸದರಾಗಿದ್ದಾಗ ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾಡು, ನುಡಿ ಹಾಗೂ ಜೀವಜಲಕ್ಕಾಗಿ ಅಧಿಕಾರ ತ್ಯಜಿಸಿದ ಅಂಬರೀಷ್ ಋಣ ತೀರಿಸಲು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಚುನಾವಣೆ ಪ್ರಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹೆಣ್ಣಿಗೆ ಗೌರವ ಕೊಡದೆ ಮಾತನಾಡಿರುವುದು ಸರಿಯಲ್ಲ. ಹೆಣ್ಣಿನ ಸ್ವಾಭಿಮಾನಕ್ಕೆ ಧಕ್ಕೆ ತರುವ ಪಕ್ಷಕ್ಕೆ ಬೆಂಬಲ ನೀಡಬಾರದು. ಕುಮಾರಸ್ವಾಮಿ, ನಿಖಿಲ್‌ ಚಿತ್ರರಂಗದ ಹಿನ್ನೆಲೆ ಹೊಂದಿದ್ದಾರೆ. ಅದರ ಪರಿಜ್ಞಾನವಿಲ್ಲದೆ ಚಿತ್ರರಂಗದವರನ್ನು ಟೀಕೆ ಮಾಡಿದ್ದು ಸರಿಯಲ್ಲ’ ಎಂದರು.

ಒಕ್ಕೂಟದ ಪದಾಧಿಕಾರಿಗಳಾದ ನಿಂಗರಾಜುಗೌಡ, ಶಾರದಾಗೌಡ, ಚಂದ್ರು, ಶಿವಕುಮಾರ್ ನಾಯಕ, ಕೃಷ್ಣ, ರಘು, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT