ಗುರುವಾರ , ಸೆಪ್ಟೆಂಬರ್ 19, 2019
29 °C
ಕಾರ್ಕಳ ಶಾಸಕ ಸುನೀಲ್ ಕುಮಾರ್‌ ಟೀಕೆ

ರಾಜೀನಾಮೆ ಕೊಟ್ಟವರಿಗೆ ಆತ್ಮಹತ್ಯೆ ಪರಿಸ್ಥಿತಿ ಬರಬಹುದು

Published:
Updated:
Prajavani

ಉಡುಪಿ: ಕೇಂದ್ರ ಸರ್ಕಾರದ ನಿಲುವುಗಳನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವ ಅಧಿಕಾರಿಗಳಿಗೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಕಾರ್ಕಳ ಶಾಸಕ ಸುನೀಲ್‌ ಕುಮಾರ್ ಹೇಳಿದರು.

ಕಿದಿಯೂರು ಹೋಟೆಲ್‌ನಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಶ್ಮೀರ ಹಾಗೂ ರಾಮಮಂದಿರ ವಿಚಾರದಲ್ಲಿ ಕೇಂದ್ರದ ನಿಲುವುಗಳು ಸಮಾಧಾನ ತಂದಿಲ್ಲ ಎಂದು ಈಚೆಗೆ ಜಿಲ್ಲಾಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕಾರಣಕ್ಕೆ ಪಕ್ಷದ ನಿಲುವುಗಳು ಬದಲಾಗುವುದಿಲ್ಲ. ರಾಮಮಂದಿರವನ್ನು ಕಟ್ಟುತ್ತೇವೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ವಶಪಡಿಸಿಕೊಳ್ಳುತ್ತೇವೆ ಎಂದರು.

ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಿಸಿ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವ ವ್ಯಕ್ತಿ ಈ ದೇಶದ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಸೆಂಥಿಲ್‌ ಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಜಗತ್ತು ಭಾರತವನ್ನು ಒಪ್ಪಿಕೊಂಡಿದೆ. ನರೇಂದ್ರ ಮೋದಿ ಅವರ ಆಡಳಿತವನ್ನು ಒಪ್ಪಿಕೊಂಡಿದೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು ಹಾಕಿದ ಬಳಿಕ ಗಲಭೆಗಳು ನಡೆದಿಲ್ಲ. ಕೇಂದ್ರ ಸರ್ಕಾರ ಅಲ್ಲಿನ ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ. ಹೀಗಿರುವಾಗ ಕೆಲವರು ರಾಜೀನಾಮೆ ನೀಡಿದ ಕಾರಣಕ್ಕೆ ಬಿಜೆಪಿಯ ನಿಲುವುಗಳು ಎಂದೂ ಬದಲಾಗುವುದಿಲ್ಲ ಎಂದರು.

ಇಬ್ಬರು ಶಾಸಕರ ಗೈರು

ನಳೀನ್ ಕುಮಾರ್ ಕಟೀಲ್ ಅಭಿನಂದನಾ ಸಮಾರಂಭಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಗೈರಾಗಿದ್ದರು. ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಶಾಸಕರು ಗೈರಾಗಿರುವುದು ಪಕ್ಷದ ಮುಖಂಡರಿಗೆ ಇರಿಸು ಮುರಿಸು ತಂದಿತ್ತು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕ ಹಾಲಾಡಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದವು. ಬಳಿಕ ಮಧ್ಯಾಹ್ನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಹಾಲಾಡಿ ಅವರು ಭಾಗವಹಿಸಿದರು.

Post Comments (+)