ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಬ್ರಿಮ್ಸ್ ಆಸ್ಪತ್ರೆಯಲ್ಲಿ ‘ತಬ್ಲೀಗ್‌ಗಳ’ ರಂಪಾಟ

ಪೊಲೀಸರ ನೆರವು ಪಡೆಯಲು ವೈದ್ಯರ ಚಿಂತನೆ
Last Updated 5 ಏಪ್ರಿಲ್ 2020, 1:58 IST
ಅಕ್ಷರ ಗಾತ್ರ

ಬೀದರ್‌: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕೋವಿಡ್‌– 19 ಸೋಂಕಿತ 10 ಜನರು ಸೌಲಭ್ಯಕ್ಕಾಗಿ ಇಲ್ಲಿಯ ಜಿಲ್ಲಾ ಆಸ್ಪತ್ರೆಯ ವಾರ್ಡ್‌ನಲ್ಲಿ ರಂಪಾಟ ಮಾಡಿದ್ದಾರೆ. ಈ ಕಾರಣ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕಿತರ ಚಿಕಿತ್ಸೆಗೆ ಪೊಲೀಸರ ನೆರವು ಪಡೆಯಲು ಚಿಂತನೆ ನಡೆಸಿದ್ದಾರೆ.

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬೀದರ್ ಜಿಲ್ಲೆಯ 26 ಜನರ ಪೈಕಿ 25 ಜನರನ್ನು ಜಿಲ್ಲಾ ಆಸ್ಪತ್ರೆಯ ಬೇರೆ ಬೇರೆ ವಾರ್ಡ್‌ಗಳಲ್ಲಿ ಇಡಲಾಗಿದೆ. ಒಬ್ಬರು ಮಾತ್ರ ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿದ್ದಾರೆ.

ಸೋಂಕು ದೃಢಪಟ್ಟ 10 ಜನರನ್ನು ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಇಡಲಾಗಿದೆ. ಉಳಿದವರನ್ನು ಬ್ರಿಮ್ಸ್‌ನ ಮೂರನೇ ಮಹಡಿಯ ವಾರ್ಡ್‌ನಲ್ಲಿ ಇರಿಸಲಾಗಿದೆ.

‘ಜಿಲ್ಲಾ ಆಸ್ಪತ್ರೆಯ ವಾರ್ಡ್‌ನಲ್ಲಿ ದಾಖಲಾಗಿರುವ ಸೋಂಕಿತರು ಮನೆಯಿಂದ ಬಟ್ಟೆ ತರುವುದಾಗಿ ಹೇಳುತ್ತಿದ್ದಾರೆ. ಸೋಂಕಿತರು ಆಸ್ಪತ್ರೆಯಲ್ಲಿ ಕೊಡುವ ಬಟ್ಟೆಯನ್ನು ಧರಿಸಬೇಕು. ನಂತರ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ, ಸೋಂಕಿತರು ವೈದ್ಯಕೀಯ ಸಿಬ್ಬಂದಿಗೆ ಸಹಕರಿಸುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದರು.

‘ಸೋಂಕಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದೇನೆ. ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದರೆ ಪೊಲೀಸರ ನೆರವು ಪಡೆಯುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದರು.

‘ಸೋಂಕಿತರು ಟೂತ್‌ಪೇಸ್ಟ್, ಬ್ರಶ್‌ ತಂದುಕೊಡುವಂತೆ ಒತ್ತಾಯಿಸುತ್ತಾರೆ. ನಾವು ಎಲ್ಲಿಂದ ತಂದುಕೊಡಬೇಕು? ಸೋಂಕಿತರ ಒಂದೇ ಬೆಡ್ ಮೇಲೆ ನಾಲ್ಕು, ಐದು ಜನ ಕೂತು ಹರಟೆ ಹೊಡೆಯುತ್ತಾರೆ. ವಾರ್ಡ್‌ನಲ್ಲೇ ಸಾಮೂಹಿಕ ನಮಾಜ್‌ ಮಾಡುತ್ತಾರೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹಿರಿಯ ವೈದ್ಯರು ವಾರ್ಡ್‌ಗೆ ಭೇಟಿ ನೀಡುತ್ತಿಲ್ಲ. ಈ ಎಲ್ಲದರ ಮಧ್ಯೆ ನರ್ಸ್‌ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

‘ಮೂರು ದಿನಗಳ ಹಿಂದೆಯೇ ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆದರೆ, ಸೋಂಕಿತರನ್ನು ಉಪಚರಿಸುತ್ತಿರುವ ಸಿಬ್ಬಂದಿಗೆ ಶುಕ್ರವಾರ ಎನ್‌–95 ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಕೊಡಲಾಗಿದೆ’ ಎಂದರು.

‘ನಮ್ಮ ವಿರುದ್ಧ ಅಪಪ್ರಚಾರ’

‘ನಾವೆಲ್ಲ ಆರೋಗ್ಯವಾಗಿದ್ದೇವೆ. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದರೂ ವೈದ್ಯರು ಒಂದೇ ಒಂದು ಮಾತ್ರೆ ಕೊಟ್ಟಿಲ್ಲ. ಊಟದ ವ್ಯವಸ್ಥೆ ಮಾಡದ ಕಾರಣ ಸಂಬಂಧಿಗಳಿಗೆ ಕರೆ ಮಾಡಿ ಊಟ ತರಿಸಿಕೊಳ್ಳುತ್ತಿದ್ದೇವೆ. ಆಸ್ಪತ್ರೆಯ ಅಧಿಕಾರಿಗಳೇ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿ
ದ್ದಾರೆ’ ಎಂದು ಕೋವಿಡ್‌–19 ಸೋಂಕಿತರು ಬೇಸರ ವ್ಯಕ್ತಪಡಿಸಿದರು.

ಮೊಬೈಲ್‌ ಮೂಲಕ ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಸೋಂಕಿತ ವ್ಯಕ್ತಿಯೊಬ್ಬರು,‘ನಮಗೆ ಮನೆಯಿಂದ ಬಟ್ಟೆ, ಟೂತ್‌ ಬ್ರಶ್ ಸಹ ತರಲು ಅವಕಾಶ ನೀಡಿಲ್ಲ. ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು,ಸೊಳ್ಳೆ ಪರದೆ ಕೊಡುತ್ತಿಲ್ಲ. ಹಿರಿಯ ವೈದ್ಯರು ಈವರೆಗೂ ನಮ್ಮ ಆರೋಗ್ಯ ತಪಾಸಣೆಗೆ ಬಂದಿಲ್ಲ.ರಾತ್ರಿ ನಮ್ಮನ್ನು ಕೊಠಡಿಯೊಳಗೆ ಹಾಕಿ ಬೀಗ ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

***

ಕೋವಿಡ್‌ –19 ಸೋಂಕಿತರ ಮೇಲೆ ನಿಗಾ ಇಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ.

- ಎಚ್‌.ಆರ್‌.ಮಹಾದೇವ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT