ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ತರಲಿದೆ ಆರ್ಥಿಕತೆಗೆ ಗರ

Last Updated 13 ಡಿಸೆಂಬರ್ 2018, 20:23 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯವನ್ನು ಕಾಡುತ್ತಿರುವ ಬರಗಾಲವು ಕೃಷಿ ಮತ್ತು ಸಂಬಂಧಿತ ವಲಯಗಳೂ ಸೇರಿದಂತೆ ಒಟ್ಟಾರೆ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದು ‘ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ’ ಆತಂಕ ವ್ಯಕ್ತಪಡಿಸಿದೆ.

ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾದ ಈ ವರದಿಯಲ್ಲಿ ‘ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಹೊರಡಿಸಿರುವ ಅಂಕಿ ಅಂಶಗಳ ಪ್ರಕಾರ 2017–18ರ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ದರವು ಶೇ 8.5ರಷ್ಟಿತ್ತು. ಈ ವರ್ಷ ಕುಸಿತವಾಗ
ಬಹುದು. ಇದರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು’ ಎಂದೂ ಎಚ್ಚರಿಸಲಾಗಿದೆ.

ಹಣದುಬ್ಬರದಲ್ಲಿನ ವ್ಯತ್ಯಯ, ತೈಲ ಬೆಲೆಗಳಲ್ಲಿನ ಅನಿಶ್ಚಿತತೆ ಮತ್ತು ಹೂಡಿಕೆಯಲ್ಲಿ ಹಿನ್ನಡೆಗಳು ದೇಶ ಹಾಗೂ ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಈ ಬೆಳವಣಿಗೆಗಳು ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೋಡೀಕರಣ ಹಾಗೂ ಕೇಂದ್ರದಿಂದ ನಿರೀಕ್ಷಿಸಲಾಗಿರುವ ವರ್ಗಾವಣೆಗಳ ಮೇಲೆ ದೀರ್ಘಾವಧಿ ಪರಿಣಾಮವನ್ನೂ ಬೀರಲಿವೆ. ಹೀಗಾಗಿ, ರಾಜ್ಯ ಸರ್ಕಾರವು ತನ್ನ ವೆಚ್ಚವನ್ನು ಹೆಚ್ಚಿಸಿಕೊಳ್ಳುವಾಗ ಅತಿ ಜಾಗರೂಕತೆಯಿಂದ ಆಲೋಚಿಸಬೇಕು. ಹೊಸ ಯೋಜನೆಗಳಿಗೆ ಅನುದಾನ ಹಂಚಿಕೆ ಹಾಗೂ ಪರಿಷ್ಕರಣೆ ಮಾಡುವಾಗ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದೂ ವರದಿ ಸಲಹೆ ನೀಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಘೋಷಿಸಿರುವ ಸಾಲಮನ್ನಾ ಯೋಜನೆಗೆ ₹45 ಸಾವಿರ ಕೋಟಿ ಬೇಕಾಗಿದೆ. ಬಡವರ ಬಂಧು, ಕಾಯಕ ಬಂಧು, ಇಸ್ರೇಲ್ ಮಾದರಿ ಕೃಷಿ, ನಗರ ಪ್ರದೇಶಗಳಿಗೂ ಜಲಧಾರೆ ಯೋಜನೆ ವಿಸ್ತರಣೆ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಇವೆಲ್ಲವೂ ಹೆಚ್ಚುವರಿ ಅನುದಾನ ಬೇಡುತ್ತಿವೆ. ಈ ಎಲ್ಲದಕ್ಕೆ ಸಂಪನ್ಮೂಲ ಹೊಂದಿಸಲು ಆರ್ಥಿಕ ಇಲಾಖೆ ಕಸರತ್ತು ಮಾಡುತ್ತಿದೆ. ಈ ಕಾರಣಕ್ಕಾಗಿಯೂ ಖರ್ಚು ಕಡಿಮೆ ಮಾಡುವಂತೆ ವರದಿ ಸಲಹೆ ನೀಡಿದೆ ಎನ್ನಲಾಗುತ್ತಿದೆ.

ಕೇಂದ್ರ ಅನುದಾನ ವಿಳಂಬ: ನಗರ ಹಾಗೂ ಪಂಚಾಯತ್ ರಾಜ್ ಸ್ಥಳೀಯ ಸಂಸ್ಥೆಗಳಿಗೆ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರ ಬಗ್ಗೆ ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ 14ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಈ ಕಾರಣದಿಂದಾಗಿ, ಇದರಡಿ ಅನುಷ್ಠಾನಗೊಳ್ಳಬೇಕಾದ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್‌, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಗ್ರಾಮೀಣ ಸ್ವಚ್ಛ ಭಾರತ್ ಯೋಜನೆಗಳ ಅಂದಾಜು ಅನುದಾನದಡಿ
ಶೇ 30ರಷ್ಟು ಮೊತ್ತವೂ ಬಂದಿಲ್ಲ. ಇದರಿಂದಾಗಿ ರಾಜ್ಯವು ಸ್ವಂತ ಸಂಪನ್ಮೂಲದಿಂದ ಹೆಚ್ಚುವರಿ ಹಣ ಖರ್ಚು ಮಾಡಬೇಕಾಗಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ, ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಬರ ಬಂದಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ ನಿರೀಕ್ಷಿತ ಅನುದಾನ ಬಂದಿಲ್ಲ. ರಾಜ್ಯದ ಸ್ವಂತ ಸಂಪನ್ಮೂಲದ ಮೇಲೆ ಇದರಿಂದ ಹೊರೆ ಬಿದ್ದಿದೆ ಎಂದು ವರದಿ ಹೇಳಿದೆ.

₹18 ಸಾವಿರ ಕೋಟಿ ಸಾಲಕ್ಕೆ ಒಪ್ಪಿಗೆ

ಈ ವರ್ಷದ ಸೆ‍ಪ್ಟೆಂಬರ್ ಅಂತ್ಯದವರೆಗೆ ₹18 ಸಾವಿರ ಕೋಟಿ ಸಾಲ ಪ‍ಡೆಯಲು ಕೇಂದ್ರದ ಅನುಮೋದನೆ ಪಡೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆರ್ಥಿಕ ವರ್ಷದಲ್ಲಿ ಒಟ್ಟು ₹43,731 ಕೋಟಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಆಯವ್ಯಯದಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ನಗದು ಪರಿಸ್ಥಿತಿ ಆಧರಿಸಿ ಇಲ್ಲಿಯವರೆಗೆ ಯಾವುದೇ ಸಾಲವನ್ನೂ ಪಡೆದಿಲ್ಲ ಎಂದೂ ವರದಿ ಹೇಳಿದೆ.

* ತೆರಿಗೆ ಸಂಗ್ರಹ ಹಾಗೂ ವೆಚ್ಚವನ್ನು ಸಮತೋಲನದಿಂದ ನಿರ್ವಹಿಸಬೇಕು. ಪರಿಣಾಮವನ್ನು ಸರಿದೂಗಿಸಲು ವೆಚ್ಚಗಳ ಮರು ಆದ್ಯತೀಕರಣ ಮಾಡಬೇಕು (ವರದಿಯಲ್ಲಿರುವ ಸಲಹೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT