ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ನೀತಿ: ಸರ್ಕಾರಕ್ಕೆ ಸಲಹೆ

Last Updated 10 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಶೈಕ್ಷಣಿಕ ವರ್ಷ ಆರಂಭವಾದ ನಂತರ ಮಧ್ಯದ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಬಾರದು. ಈ ಅಂಶವನ್ನು ಸುಪ್ರೀಂ ಕೋರ್ಟ್‌ 1994ರಲ್ಲಿಯೇ ಸ್ಪಷ್ಟಪಡಿಸಿದೆ. ಈ ರೀತಿಯ ವರ್ಗಾವಣೆಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ’ ಎಂದು ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವರ್ಗಾವಣೆಗೆ ಸಂಬಂಧಿಸಿದ ಸುತ್ತೋಲೆ ಪ್ರಶ್ನಿಸಿ ‘ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ’ದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಚಂದ್ರಕಾಂತ ಸೇರಿದಂತೆ 600ಕ್ಕೂ ಹೆಚ್ಚು ಶಿಕ್ಷಕರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ಆರ್‌.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ, ‘ಈಗಿರುವ ನೀತಿಯ ಲೋಪಗಳನ್ನು ಸರಿಪಡಿಸಲು ಕೆಲವು ಸಲಹೆಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ಅಳವಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಪೀಠ, ‘ವಿ.ಲಕ್ಷ್ಮಿನಾರಾಯಣ ಅವರ ಸಲಹೆಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2007ರ ನಿಯಮಗಳ ಅಡಿಯಲ್ಲಿ ಸೆ.30ರೊಳಗೆ ಪರಿಗಣಿಸಿ’ ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದೆ. ಇದರ ಅನುಸಾರ ಇದೇ 3ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ಸಲಹೆ ನೀಡಲಾಗಿದೆ.

‘ಚಾಲ್ತಿಯಲ್ಲಿರುವ ನೀತಿಯಲ್ಲಿ ಅನೇಕ ಲೋಪದೋಷಗಳಿದ್ದು ಅವೈಜ್ಞಾನಿಕವಾಗಿವೆ. ಇದನ್ನು ಸರಿಪಡಿಸಲು ಎ,ಬಿ,ಸಿ ಗ್ರೂಪ್‌ನ ಶಿಕ್ಷಕರಿಗೆ ಏಕರೂಪ ನೀತಿ ಜಾರಿಗೆ ತರಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ನೀತಿ ಅಳವಡಿಸಿಕೊಳ್ಳಬಹುದು. ಈ ಸಲಹೆಗಳು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಇವೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಪ್ರಾಧಿಕಾರಗಳು ಇವುಗಳನ್ನು ಅನುಸರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಲಾಗಿದೆ.

‘ಆದೇಶ ಪಾಲನೆಗೆ ಅಧಿಕಾರಿಗಳ ನಿರ್ಲಕ್ಷ್ಯ’

‘ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಇದೇ 4ರಂದು ನೀಡಿರುವ ಹೈಕೋರ್ಟ್‌ ಆದೇಶವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ’ ಎಂದು ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ಈ ಅರ್ಜಿ ಇದೇ 11ರಂದು ವಿಭಾಗೀಯ ನ್ಯಾಯಪೀಠದ ಎದುರು ವಿಚಾರಣೆಗೆ ಬರಲಿದೆ. ‘ಹೈಕೋರ್ಟ್‌ ಆದೇಶ ಪಾಲನೆಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕೆಎಟಿ ಆಧೇಶ ಪ್ರಶ್ನಿಸಿದ್ದ ಅರ್ಜಿಗಳು

ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಆಯುಕ್ತರು 2019ರ ಜೂನ್‌ 1ರಂದು ಸುತ್ತೋಲೆ ಹೊರಡಿಸಿ, 2019–20ನೇ ಸಾಲಿನ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಿದ್ದರು.

‘ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಮಾನ್ಯತೆ ಪಡೆದ ಶಿಕ್ಷಕರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳು (ನಾಮನಿರ್ದೇಶನ ಹೊಂದಿದ ಶಿಕ್ಷಕರಿಗೆ ವಿನಾಯಿತಿ ಇರುವುದಿಲ್ಲ), ಅವಿವಾಹಿತ ಮಹಿಳಾ ಶಿಕ್ಷಕರು, ವಿಧವೆಯರು, ಶೇ 40ಕ್ಕಿಂತಲೂ ಹೆಚ್ಚು ಪ್ರಮಾಣದ ಅಂಗವಿಕಲತೆಯನ್ನು ಹೊಂದಿರುವ ಶಿಕ್ಷಕರಿಗೆ ಮಾತ್ರ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಇರುತ್ತದೆ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಈ ಸುತ್ತೋಲೆಯನ್ನು ಪ್ರಶ್ನಿಸಿ ಅರ್ಜಿದಾರ ಶಿಕ್ಷಕರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಈ ಅರ್ಜಿಗಳನ್ನು ತಿರಸ್ಕರಿಸಿದ್ದ ಕೆಎಟಿ ಕೌನ್ಸೆಲಿಂಗ್‌ಗೆ ಹಾಜರಾಗುವಂತೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೀಗಿವೆ ಸಲಹೆಗಳು

* ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ (ಎಸ್‌ಸಿ–ಎಸ್‌ಟಿ) ಸೇರಿದ ‘ಸಿ’ ಗ್ರೂಪ್‌ ಶಿಕ್ಷಕರನ್ನು ಅವರ ವಾಸಸ್ಥಳಕ್ಕೆ ಹತ್ತಿರವಿರುವಂತೆ ವರ್ಗಾವಣೆ ಮಾಡಬೇಕು.

* ಹೈದರಾಬಾದ್– ಕರ್ನಾಟಕ ಪ್ರದೇಶದ ಜನರಿಗೆ ಅನ್ವಯವಾಗುವ ಸಂವಿಧಾನದ 371 (ಜೆ) ವಿಧಿಯ ಅನುಸಾರ ಸಿಗಬೇಕಾದ ಅನುಕೂಲಗಳು ಚಾಲ್ತಿಯಲ್ಲಿರುವ ವರ್ಗಾವಣೆ ನೀತಿಯಲ್ಲಿ ಇಲ್ಲ. ಆದ್ದರಿಂದ 371ನೇ ವಿಧಿಯ ಅನುಕೂಲಗಳನ್ನು ಅರ್ಹ ಶಿಕ್ಷಕ ವೃಂದಕ್ಕೂ ವಿಸ್ತರಿಸಬೇಕು.

* ಪತಿ–ಪತ್ನಿ ಅವಕಾಶಗಳಡಿಯ ವರ್ಗಾವಣೆ ಸೌಲಭ್ಯ ದುರುಪಯೋಗವಾಗುತ್ತಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.

* 45ರಿಂದ 50 ವರ್ಷ ದಾಟಿದ ಶಿಕ್ಷಕರು ದಿನದಲ್ಲಿ 3–4 ಗಂಟೆಗಳ ಕಾಲ ಪ್ರಯಾಣ ಮಾಡಿ ಶಾಲೆಗೆ ಹೋಗುವುದರಿಂದ ಅಂತಹವರು ಮನೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಪರದಾಡಬೇಕಾಗುತ್ತದೆ.

* ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಡ್ಡಾಯ ವರ್ಗಾವಣೆಯನ್ನು 10 ವರ್ಷ ಒಂದೇ ಕಡೆ ಕೆಲಸ ಮಾಡಿದ
ಮುಖ್ಯ ಶಿಕ್ಷಕರಿಗೆ ಮಾತ್ರವೇ ಅನ್ವಯಿಸಬೇಕು.

* ಸಾಕಷ್ಟು ಶಿಕ್ಷಕರ ಮಕ್ಕಳು ಸಿಬಿಎಸ್‌ಸಿ–ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ಅಭ್ಯಸಿಸುತ್ತಿರುತ್ತಾರೆ.ಇಂತಹವರು ಮಧ್ಯದಲ್ಲಿ ನಡೆಸುವ ವರ್ಗಾವಣೆಯಿಂದ ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ.

* ಬೇಸಿಗೆ ರಜೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು. ಮೇ 15ಕ್ಕೆ ಪಟ್ಟಿ ಪ್ರಕಟಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT