ಗುರುವಾರ , ಅಕ್ಟೋಬರ್ 24, 2019
21 °C

‘ನೀತಿ ಸಂಹಿತೆಗೆ ಮೊದಲೇ ವರ್ಗಾವಣೆ ಮುಗಿಸಿ’

Published:
Updated:
prajavani

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಅಂತರ ಘಟಕ ವರ್ಗಾವಣೆ ಪ್ರಕ್ರಿಯೆ ಸದ್ಯ ಪ್ರಗತಿಯಲ್ಲಿದ್ದು, ನವೆಂಬರ್‌ 11ರಂದು ವಿಧಾನಸಭೆ ಉಪಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವುದಕ್ಕೆ ಮೊದಲಾಗಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ವಿ. ಎಂ. ನಾರಾಯಣ ಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಗುರುವಾರ ಇಲಾಖೆಯ ಆಯುಕ್ತ ಡಾ. ಕೆ. ಜಿ. ಜಗದೀಶ್‌ ಅವರನ್ನು ಭೇಟಿ ಮಾಡಿ ಈ ಒತ್ತಾಯ ಮಾಡಿದ್ದು, ಭಾನವಾರ, ಎರಡನೇ ಶನಿವಾರಗಳಂದೂ ಕೌನ್ಸೆಲಿಂಗ್‌ ನಡೆಸಿದರೆ ಮತ್ತು ಪ್ರತಿದಿನ 300 ಶಿಕ್ಷಕರ ಬದಲಿಗೆ 500 ಶಿಕ್ಷಕರಿಗೆ ಕೌನ್ಸೆಲಿಂಗ್‌ಗೆ ಅವಕಾಶ ನೀಡಿದರೆ ಮಾತ್ರ ನೀತಿ ಸಂಹಿತೆ ಜಾರಿಗೊಳ್ಳುವುದಕ್ಕೆ ಮೊದಲು ವರ್ಗಾವಣೆ ಪ್ರಕ್ರಿಯೆ ಕೊನೆಗೊಳ್ಳಬಹುದಷ್ಟೇ ಎಂದು ಹೇಳಿದ್ದಾರೆ.

ತಿದ್ದುಪಡಿಗೆ ಸಲಹೆ: 2017ರ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿನ ಅವೈಜ್ಞಾನಿಕ ಅಂಶಗಳಿಗೆ ತಿದ್ದುಪಡಿಗೆ ತರುವುದಕ್ಕಾಗಿ ಸಂಘದ ವತಿಯಿಂದ ಹಲವು ಸಲಹೆಗಳನ್ನು ಆಯುಕ್ತರಿಗೆ ನೀಡಲಾಗಿದೆ. ಎಲ್ಲವನ್ನೂ ಸಮರ್ಪಕವಾಗಿ ಚರ್ಚಿಸಿ, ಸೂಕ್ತ ತಿದ್ದುಪಡಿ ಮಾಡುವುದಾಗಿ ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಆಯುಕ್ತರು ತಿಳಿಸಿದರು.

ಶೇ 20ಕ್ಕಿಂತ ಅಧಿಕ ಖಾಲಿ ಹುದ್ದೆಗಳಿರುವ ತಾಲ್ಲೂಕುಗಳಿಂದ ವರ್ಗಾವಣೆ ಇಲ್ಲವೆಂಬ ಅಂಶವನ್ನು ತೆಗೆದುಹಾಕಬೇಕು. ವೈದ್ಯಕೀಯ ಪ್ರಕರಣದ ಅಂಗವಿಕಲ ಮತ್ತು ವಿಶೇಷ ಪ್ರಕರಣಗಳನ್ನು ಶೇಕಡಾವಾರು ಮಿತಿಯಲ್ಲಿ ಪರಿಗಣಿಸದೆ, ಕೋರಿಕೆ ವರ್ಗಾವಣೆಗೆ ಶೇಕಡಾವಾರು ಮಿತಿ ನಿಗದಿಗೊಳಿಸಬೇಕು. ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ವರ್ಗಾವಣೆಗೆ ಕನಿಷ್ಠ 10 ವರ್ಷದ ಸೇವೆಯನ್ನು ಕಡ್ಡಾಯಗೊಳಿಸಿದ್ದನ್ನು ತೆಗೆದುಹಾಕಿ, ಕನಿಷ್ಠ ಸೇವಾವಧಿ ಪೂರೈಸಿದವವರಿಗೂ ವರ್ಗಾವಣೆ ಅವಕಾಶ ಕಲ್ಪಿಸಬೇಕು. ಸೇವಾ ಜ್ಯೇಷ್ಠತೆ ಅಧಾರದಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬೇಕು. ಕಡ್ಡಾಯ ವರ್ಗಾವಣೆಯಲ್ಲಿ ತಾಲ್ಲೂಕುಗಳಿಂದ ಬೇರೆ ತಾಲ್ಲೂಕುಗಳಿಗೆ ವರ್ಗಾವಣೆಯಾಗಿರುವ ಶಿಕ್ಷಕರಿಗೆ ಮುಂದಿನ ವರ್ಷದ ವರ್ಗಾವಣೆಯಲ್ಲಿ ಅವರ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಸಹಿತ ಹಲವು ಸಲಹೆಗಳನ್ನು ಸಂಘದ ವತಿಯಿಂದ ನೀಡಲಾಯಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)