ಗುರುವಾರ , ಫೆಬ್ರವರಿ 25, 2021
17 °C
ನಿಯಮ ಬದಲಾವಣೆ

ಶಿಕ್ಷಕರ ವರ್ಗಾವಣೆ: ಟಿಪ್ಪಣಿ ವಾಪಸ್‌ ಪಡೆಯಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಪಾಠ ಮಾಡುವ ಶಿಕ್ಷಕರ ಸ್ಥಿತ್ಯಂತರ ಕುರಿತು ಈ ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸಲಾಗುವುದು ಎಂದು ಹೇಳಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್.ಆರ್‌.ಶ್ರೀನಿವಾಸ್‌, ಸರ್ಕಾರ ಈಚೆಗೆ ಹೊರಡಿಸಿದ ಟಿಪ್ಪಣಿ ಹಿಂದಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ನಡೆದ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್‌ ಸದಸ್ಯರ ಸಭೆಯಲ್ಲಿ ಮಾತ ನಾಡಿದ ಅವರು, ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲ ನಿವಾರಿಸಲು ಕಾನೂನು ತಜ್ಞರು, ಶಿಕ್ಷಣ ತಜ್ಞರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ವಿಶೇಷ ನೇಮಕಾತಿ ನಿಯಮ ರೂಪಿಸಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು, ಖಾಲಿ ಹುದ್ದೆಗಳಿಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವರ್ಗಾವಣೆ ಅಬಾಧಿತ: ಇದೀಗ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆಯನ್ನು ಯಾವ ಕಾರಣಕ್ಕೂ ಮುಂದೂಡುವುದಿಲ್ಲ. ಅದು ಕೌನ್ಸೆ ಲಿಂಗ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಇಲ್ಲಿ ಕಂಡು ಬರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಮಸ್ಯೆ ನಿವಾರಿಸಲಾಗುವುದು ಎಂದರು. ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಪತಿ–ಪತ್ನಿ ವರ್ಗಾವಣೆ, ಕಡ್ಡಾಯ ವರ್ಗಾವಣೆಗಳಲ್ಲಿ ಗೊಂದಲ ಕಂಡು ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ತಪ್ಪು ಮಾಹಿತಿ ನೀಡಿ ವರ್ಗಾವಣೆ ಬಯಸಿರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.

ಎಸ್ಸೆಸ್ಸೆಲ್ಸಿ: ಹೊಸ ಮಾದರಿ ಪ್ರಶ್ನೆ ಪತ್ರಿಕೆ

ಬೆಂಗಳೂರು: ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ತಡೆಗಟ್ಟುವುದು, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಹೆಚ್ಚಿಸುವ ಪ್ರಮುಖ ಉದ್ದೇಶದೊಂದಿಗೆ ಹೊಸ ಮಾದರಿಯ ಪ್ರಶ್ನೆಪತ್ರಿಕೆಯನ್ನು ರೂಪಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ.

‘ಮಕ್ಕಳಲ್ಲಿ ಬರವಣಿಗೆ ಸಾಮರ್ಥ್ಯ ಹೆಚ್ಚಿಸುವಂತಹ ವ್ಯವಸ್ಥೆ ಈಗಿನ ಪ್ರಶ್ನೆಪತ್ರಿಕೆಯಲ್ಲಿ ಇಲ್ಲ. ಹೀಗಾಗಿ ಒಂದಿಷ್ಟು ಬದಲಾವಣೆ ಬೇಕು ಎಂಬ ಸಲಹೆ ಬಂದ ಕಾರಣ ಬರವಣಿಗೆ ಕೌಶಲ ಹೆಚ್ಚಿಸುವುದಕ್ಕೆ ಒತ್ತು ನೀಡುವ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ. ಈಗಾಗಲೇ ಎಲ್ಲ ಡಿಡಿಪಿಐಗಳಿಗೆ ಇಮೇಲ್‌ ಮೂಲಕ ಹೊಸ ಪ್ರಶ್ನೆಪತ್ರಿಕೆ ಮಾದರಿಯನ್ನು ಕಳುಹಿಸಲಾಗಿದೆ. ಅದರ ಪ್ರಕಾರವೇ ವರ್ಷದ ಆರಂಭದಿಂದಲೇ ಪಾಠ ಮಾಡಬೇಕು’ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬದಲಾವಣೆ ಏನು?: ಒಟ್ಟು ಪ್ರಶ್ನೆಗಳ ಸಂಖ್ಯೆ 40ರಿಂದ 38ಕ್ಕೆ ಇಳಿದಿದೆ. ಬಹು ಆಯ್ಕೆ, ಒಂದು ಅಂಕದ ಪ್ರಶ್ನೆಗಳಲ್ಲಿ ವ್ಯತ್ಯಾಸ ಇಲ್ಲ. 2 ಅಂಕದ ಪ್ರಶ್ನೆಗಳು 16ರಿಂದ 8ಕ್ಕೆ ಇಳಿದಿದೆ. 3 ಅಂಕದ ಪ್ರಶ್ನೆಗಳು 6ರಿಂದ 9ಕ್ಕೆ ಏರಿಕೆಯಾಗಿವೆ. ಹೊಸದಾಗಿ 5 ಅಂಕದ ಪ್ರಶ್ನೆಯೊಂದು ಸೇರ್ಪಡೆಯಾಗಿದೆ. ಈ ಹಿಂದಿನ ಪ್ರಶ್ನೆಪತ್ರಿಕೆಗಳ ಮಾದರಿ ಅಧ್ಯಯನ ನಡೆಸಿ, ಏನೆಲ್ಲ ಬದಲಾವಣೆ ಮಾಡಬಹುದು ಎಂಬುದರ ಅಧ್ಯಯನ ನಡೆಸಲು ಮಂಡಳಿಯು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನಂತೆ ಈ ಬದಲಾವಣೆ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು